ಆ್ಯಪ್ನಗರ

ಉಪಕಾರವನ್ನು ಎಂದಿಗೂ ಮರೆಯಬಾರದು: ಪೇಜಾವರ ಶ್ರೀ

ಪೋಷಕರು, ಗುರುಗಳು ಹಾಗೂ ಸಮಾಜದಿಂದ ಉಪಕಾರ ಪಡೆದು ಬೆಳೆದ ನಾವು ಕೃತಜ್ಞತೆಯಿಂದ ಬಾಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.

Vijaya Karnataka 5 Aug 2019, 5:00 am
ಮೈಸೂರು: ಪೋಷಕರು, ಗುರುಗಳು ಹಾಗೂ ಸಮಾಜದಿಂದ ಉಪಕಾರ ಪಡೆದು ಬೆಳೆದ ನಾವು ಕೃತಜ್ಞತೆಯಿಂದ ಬಾಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
Vijaya Karnataka Web let us never forget the beneficiary pejawara shree
ಉಪಕಾರವನ್ನು ಎಂದಿಗೂ ಮರೆಯಬಾರದು: ಪೇಜಾವರ ಶ್ರೀ


ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಹಿರಿಯ, ಕಿರಿಯ ಶ್ರೀ ಗಳ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ‍್ಯಕ್ರಮದ ಬಳಿಕ ಅವರು ಪ್ರವಚನ ನೀಡಿದರು.

''ಭಗವಂತ ಆನೆಯ ಹಾಗೇ, ಕಣ್ಣು ಮುಚ್ಚಿ ಆನೆ ಮುಟ್ಟಿದಂತೆ ಮಾಡಿದರೆ ಭಗವಂತನ ಪೂರ್ಣ ರೂಪ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ತೆರೆದ ಕಣ್ಣಿನಿಂದ ಆತನ ಪೂರ್ಣ ರೂಪವನ್ನು ಕಣ್ತುಂಬಿಕೊಳ್ಳಬೇಕು,'' ಎಂದರು.

''ಧ್ಯಾನ, ಪೂಜೆ, ತ್ಯಾಗದ ಜೊತೆಗೆ ಜ್ಞಾನವನ್ನು ಗಳಿಸಿಕೊಂಡು ಭಗವಂತನನ್ನು ಕಾಣಬೇಕು. ಪಶ್ಚಾತ್ತಾಪಕ್ಕಿಂತ ಬೇರೆ ಶಿಕ್ಷೆಯಿಲ್ಲ. ನಮ್ಮ ಬೆಳವಣಿಗೆಯಲ್ಲಿ ಪೋಷಕರು, ಗುರುಗಳು, ಸಮಾಜದ ಕೊಡುಗೆ ಅಪಾರವಾಗಿರುತ್ತದೆ. ಹಾಗಾಗಿ, ಅವರ ಉಪಕಾರವನ್ನು ಎಂದಿಗೂ ಮರೆಯಬಾರದು,'' ಎಂದರು.

''ವೃದ್ಧ ಪೋಷಕರನ್ನು ಕಡೆಗಣಿಸುವಂತಹ ಘಟನೆಗಳು ಹೆಚ್ಚು ಕಂಡು ಬರುತ್ತಿದ್ದು, ಇದು ಸರಿಯಾದ ನಡೆಯಲ್ಲ. ಗೋ ಹತ್ಯೆಗಳು ನಡೆಯುತ್ತಿದ್ದು, ಗೋವುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನೇಕರು ಅನುಸರಿಸುತ್ತಿದ್ದು, ಇದು ಸರಿಯಾದ ನಡೆಯಲ್ಲ,''ಎಂದು ಹೇಳಿದರು.

''ಧರ್ಮ, ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಜವಾಬ್ದಾರಿ ಅಪಾರವಾಗಿದೆ. ತ್ಯಾಗ, ಶಾಂತಿ, ಸಮರ್ಪಣೆ, ಹೊಂದಾಣಿಕೆ ಈ ಎಲ್ಲಾ ಗುಣಗಳಿಂದ ಹೆಣ್ಣು ಗಂಡಿಗಿಂತ ಶ್ರೇಷ್ಠಳಾಗಿದ್ದಾಳೆ. ಮಗಳು, ಮಡದಿ, ತಾಯಿ ಹೀಗೆ ತನ್ನ ಕರ್ತವ್ಯವನ್ನು ಎಲ್ಲರೊಡಗೂಡಿ ಮಾಡುವವಳಾಗಿದ್ದಾಳೆ. ಹಾಗಾಗಿ, ಪುರಾಣಗಳಲ್ಲಿ ಸ್ತ್ರೀಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಪೋಷಕರನ್ನು ವಿಶೇಷವಾಗಿ ಅದರಲ್ಲಿಯೂ ತಾಯಿಯನ್ನು ಎಂದು ಕಡೆಗಣಿಸಬಾರದು,''ಎಂದು ತಿಳಿಸಿದರು.

ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಅನುಗ್ರಹ ಸಂದೇಶ ನೀಡಿದರು. ''ಸಂಪತ್ತು ದೇಹವಿರುವವರೆಗೆ ಮಾತ್ರ. ಹಾಗಾಗಿ, ಈ ತೋರ್ಪಡಿಕೆಯ ಸಂಪತ್ತಿಗಾಗಿ ಅಮೂಲ್ಯವಾದ ಬದುಕನ್ನು ವ್ಯರ್ಥಮಾಡಿಕೊಳ್ಳದೇ, ಜ್ಞಾನವನ್ನು ಗಳಿಸಿಕೊಳ್ಳುವ ಮೂಲಕ ಭಗವಂತನ ಸೇವೆಗೆ ಮುಂದಾಗಬೇಕು,'' ಎಂದರು.

ಬೆಂಗಳೂರಿನ ವಿದ್ವಾನ್‌ ಎನ್‌.ವೆಂಕಟೇಶಾಚಾರ್ಯ ಅವರು, ದಾಸ ವೈಭವ ಪ್ರಸನ್ನ ವೆಂಕಟದಾಸರು ವಿಷಯ ಕುರಿತು ಮಾತನಾಡಿದರು. ಕೀರ್ತನಾ ಹೊಳ್ಳ ಅವರು ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸುಮಧುರವಾಗಿ ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ