ಆ್ಯಪ್ನಗರ

ಮೊಬೈಲ್‌ ಮೇಲಿನ ಪ್ರೀತಿ ಹೆಂಡತಿಗೂ ತೋರಲ್ಲ!

ಸ್ತ್ರೀ ಶಕ್ತಿ ಸಂಘಟನೆಗಳ ವಸ್ತು ಪ್ರದರ್ಶನ ಮತ್ತು ಕೃಷಿ ವಸ್ತು ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರಿಗೆ ಸುಧಾ ಬರಗೂರು ಹಾಸ್ಯದ ಕಚಗುಳಿ ಇಟ್ಟರು.

Vijaya Karnataka 16 Dec 2022, 5:02 pm
ಮೈಸೂರು : ದಸರೆ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ದಸರಾ ವೇದಿಕೆ ಭಾನುವಾರ ಹಾಸ್ಯಕ್ಕೆ ಸಾಕ್ಷಿಯಾಗಿತ್ತು.
Vijaya Karnataka Web Mobile Phone


ಸ್ತ್ರೀ ಶಕ್ತಿ ಸಂಘಟನೆಗಳ ವಸ್ತು ಪ್ರದರ್ಶನ ಮತ್ತು ಕೃಷಿ ವಸ್ತು ಪ್ರದರ್ಶನ ವೀಕ್ಷಿಸಲು ಬಂದಿದ್ದ ಜನರಿಗೆ ಸುಧಾ ಬರಗೂರು ಹಾಸ್ಯದ ಕಚಗುಳಿ ಇಟ್ಟರು.

ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರಮಕ್ಕೆ ಕುಂಟುತ್ತಲೇ ವೇದಿಕೆಗೆ ಆಗಮಿಸಿದ ಸುಧಾ ಬರಗೂರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೋವಿನಲ್ಲೂ ಹಾಸ್ಯದ ಚಟಾಕಿ ಹಾರಿಸಿದರು. ನೂರಾರು ಪ್ರೇಕ್ಷ ಕರು ಸುಧಾ ಅವರ ಹಾಸ್ಯದ ಹೊನಲಲ್ಲಿ ತೇಲಾಡಿದರು.

''ನಗರಗಳಲ್ಲಿ ಅವಿಭಕ್ತ ಕುಟುಂಬ ಎಂಬ ಕಲ್ಪನೆಯೇ ಬದಲಾಗುತ್ತಿದೆ. ನಗರವಾಸಿಯೊಬ್ಬಳು ನಮ್ಮದು ಜಾಯಿಂಟ್‌ ಫ್ಯಾಮಿಲಿ ಎನ್ನುತ್ತಾಳೆ. ಮನೆಯಲ್ಲಿ ಎಷ್ಟು ಜನರ ಇದ್ದೀರಾ ಎಂದರೆ ನಾನು, ನನ್ನ ಪತಿ ಎನ್ನುತ್ತಾಳೆ. ಇದೇ ನಗರವಾಸಿಗಳಿಗೆ ಜಾಯಿಂಟ್‌ ಫ್ಯಾಮಿಲಿಯಾಗಿದೆ'' ಎಂದರು.

''ಇಂದು ಜನರು ಮೊಬೈಲ್‌ ಪ್ರೀತಿಸುವಷ್ಟು ತಮ್ಮ ಹೆಂಡತಿಯನ್ನು ಪ್ರೀತಿಸುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಮೊಬೈಲ್‌ ಅನ್ನು ಸವರಿಕೊಂಡೆ ಕೂತಿರುತ್ತಾರೆ, ಹೊರತು ಹೆಂಡತಿ, ಮಕ್ಕಳು, ತಂದೆ ತಾಯಿಯ ಜತೆ ಮಾತನಾಡುವುದೇ ಇಲ್ಲ ಎಂದು ತಂತ್ರಜ್ಞಾನ ಜನರನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದನ್ನು ತಿಳಿಸಿದರು.

''8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವಾಗಲೂ ಜನ ಸೆಲ್ಫಿ ತೆಗೆದುಕೊಳ್ಳುವುದನ್ನು ಬಿಡುವುದಿಲ್ಲ. ಆತ್ಮಹತ್ಯೆಗೆ ಜಿಗಿಯುವ ಮುನ್ನ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸತ್ತವರ ಪಕ್ಕವೂ ನಿಂತು ಸೆಲ್ಫಿ ತೆಗೆದುಕೊಳ್ಳುವ ಜಾಯಮಾನ ನಮ್ಮದು'' ಎಂದು ಬೇಸರ ವ್ಯಕ್ತಪಡಿಸಿದರು.

''ದಸರೆ ರಜೆಯಲ್ಲೂ ತಾಯಂದಿರು ಮಕ್ಕಳಿಗೆ ಹೋಮ್‌ ವರ್ಕ್‌ ಮಾಡಲು ಹೇಳುತ್ತಾರೆ. ಆದರೆ ಅಪ್ಪಂದಿರು ಹೇಳುವುದಿಲ್ಲ. ಏಕೆಂದರೆ ಅವರು ತಮ್ಮ ಮಕ್ಕಳಿಗಿಂತಲೂ ಕಡಿಮೆ ಅಂಕ ಪಡೆದಿರುತ್ತಾರೆ'' ಎಂದು ನಗೆಚಟಾಕಿ ಹಾರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಮಾತನಾಡಿ, ''ಜನ ನಗುವುದನ್ನು ಮರೆತಿದ್ದಾರೆ. ಹಿರಿಯರಿಗೆ ಕೆಲಸದ ಒತ್ತಡವಿದ್ದರೆ, ಮಕ್ಕಳು ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಇದರಿಂದ ನಗುವುದನ್ನು ಮರೆಯುವಂತಾಗಿದೆ. ಮನುಷ್ಯನ ಆರೋಗ್ಯಕರ ಮನಸ್ಥಿತಿಗೆ ನಗು ಮುಖ್ಯ'' ಎಂದರು.

ಜಿಪಂ ಅಧ್ಯಕ್ಷ ನಯೀಮಾ ಸುಲ್ತಾನ್‌ ಕಾರ್ಯಕ್ರಮದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ