ಆ್ಯಪ್ನಗರ

ಸಂಸ್ಕೃತ ವಿವಿಗೆ ಕೋಟಿ ಕೋಟಿ ಅನುದಾನ ಯಾಕೆ, ಅದು ಸತ್ತು ಹೋದ ಭಾಷೆ: ಪ್ರೊ ಮಹೇಶ್ ಚಂದ್ರ ಗುರು

​​ಸಂಸ್ಕೃತಕ್ಕೆ ಹೆಚ್ಚು ಅನುದಾನ ನೀಡಿ ಆರ್‌ಎಸ್‌ಎಸ್ ಮತ್ತು ವೈದಿಕರನ್ನು ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹೊರಟಿದೆ. ಈ ರೀತಿ ಸರಕಾರ ಕೆಟ್ಟ ತೀರ್ಮಾನ, ತೆರಿಗೆ ಹಣವನ್ನು ದುರುಪಯೋಗ ಮಾಡುವುದು ಸರಿಯಲ್ಲ.

Lipi 24 Jan 2022, 9:17 pm
ಮೈಸೂರು: ಸಂಸ್ಕೃತ ಭಾಷೆ ವಿಶ್ವವಿದ್ಯಾಲಯದ ಸ್ಥಾಪನೆಗೆ ಪರ ವಿರೋಧಗಳು ಅನೇಕ ದಿನಗಳಿಂದ ಕೇಳಿಬರುತ್ತಿದೆ. ಕನ್ನಡ ಭಾಷೆ ಉಳಿವಿಗೆ ಹೆಚ್ಚು ಅನುದಾನ ಕೊಡಿ ಎಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಸಂಸ್ಕೃತ ವಿವಿ ಹೊಸ ವಿವಾದಕ್ಕೆ ನಾಂದಿ ಹಾಡೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದೀಗ ಸಂಸ್ಕೃತ ವಿವಿ ವಿರುದ್ಧ ಪ್ರೊ. ಮಹೇಶ್ ಚಂದ್ರ ಗುರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Vijaya Karnataka Web maheshchandraguru controversy
ಸಂಸ್ಕೃತ ವಿವಿಗೆ ಕೋಟಿ ಕೋಟಿ ಅನುದಾನ ಯಾಕೆ, ಅದು ಸತ್ತು ಹೋದ ಭಾಷೆ: ಪ್ರೊ ಮಹೇಶ್ ಚಂದ್ರ ಗುರು


ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಹೇಶ್‌ ಚಂದ್ರ ಮಾತಾಡಿದರು.

ಅನ್ನದ ಭಾಷೆಯಲ್ಲದ ಸಂಸ್ಕೃತ ಮತ್ತು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ದೊಡ್ಡ ಪ್ರಮಾಣದಲ್ಲಿ ಅನುದಾನ ಹಾಗೂ ಜಾಗ ನೀಡುತ್ತಿರುವುದು ಖಂಡನೀಯ. ಇದರ ವಿರುದ್ಧ ಸುಪ್ರೀಂ ಮತ್ತು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶಚಂದ್ರ ಗುರು ತಿಳಿಸಿದರು.

ಸಂಸ್ಕೃತಕ್ಕೆ ಹೆಚ್ಚು ಅನುದಾನ ನೀಡಿ ಆರ್‌ಎಸ್‌ಎಸ್ ಮತ್ತು ವೈದಿಕರನ್ನು ಬೆಳೆಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹೊರಟಿದೆ. ಈ ರೀತಿ ಸರಕಾರ ಕೆಟ್ಟ ತೀರ್ಮಾನ ಮತ್ತು ಜನರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಆಕ್ಷೇಪಿಸಿ ಸುಪ್ರೀಂ ಮತ್ತು ಹೈ ಕೋರ್ಟ್‌ಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಂಸ್ಕೃತ ವಿವಿಗೆ ಅನುದಾನ ನೀಡುವ ಸರ್ಕಾರದ ನಿರ್ಧಾರ ಖಂಡಿಸಿದ ಪ್ರೋ. ಮಹೇಶ್ ಚಂದ್ರ ಗುರು!

ಭಾಷೆ ಇರುವುದು ಜನರನ್ನು ಒಗ್ಗೂಡಿಸಲು, ಅನ್ನ ಮತ್ತು ಉದ್ಯೋಗ ನೀಡಲು, ಸಂಸ್ಕೃತಿ ಬೆಳೆಸಲು ಮತ್ತು ಜನರ ಬದುಕು ಸುಧಾರಿಸಲು. ಆದರೆ 2011ರ ಜನಗಣತಿ ಪ್ರಕಾರ ಇಡೀ ದೇಶದಲ್ಲಿ 4631 ಜನ ಮಾತ್ರ ಸಂಸ್ಕೃತ ಮಾತನಾಡುತ್ತಾರೆ. ಅನ್ನ, ವಿದ್ಯೆ, ಉದ್ಯೋಗ ಹಾಗೂ ಬದುಕಿಗಾಗಿ ಎಷ್ಟು ಜನ ಸಂಸ್ಕೃತ ನಂಬಿದ್ದಾರೆ? ಇಂಥ ಸಾಯುತ್ತಿರುವ ಭಾಷೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಏಕೆ ಮಹತ್ವ ಕೊಡುತ್ತಿದೆ ಎಂದು ಪ್ರಶ್ನಿಸಿದರು.

ದೇಶದ ವಿಶ್ವ ವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳೇ ಇಲ್ಲ. ಈ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ವಿಭಾಗಕ್ಕೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಬಹಳಷ್ಟು ಸಂಸ್ಕೃತ ಅಧ್ಯಯನ ಪೀಠಗಳು ಸಾಯುತ್ತಿವೆ. ಕೇರಳದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಲಿಯಲು ವಿದ್ಯಾರ್ಥಿಗಳೇ ಇಲ್ಲ. ಇನ್ನು ರಾಜ್ಯದಲ್ಲಿ ಶೇ.64 ಮಂದಿ ಕನ್ನಡ, ಶೇ.11 ಉರ್ದು, ಶೇ.4 ತಮಿಳು, ಶೇ.2ರಷ್ಟು ಜನ ಮಲಯಾಳಂ ಮಾತನಾಡುತ್ತಾರೆ. ಆದರೆ, ಸಂಸ್ಕೃತ ಮಾತನಾಡುವವರು ನಗಣ್ಯ. ಹೀಗೆ ಯಾರಿಗೂ ಬೇಡವಾದ ಬದುಕು ಕಟ್ಟಿಕೊಡದ ಈ ಭಾಷೆಗೆ ಯಾಕೆ ಮಾನ್ಯತೆ ಕೊಡಬೇಕೆಂದು ಪ್ರಶ್ನಿಸಿದರು.

ಬಂಡೀಪುರದಲ್ಲಿ ಹುಲಿ ಗಣತಿ ಶುರು; 300 ಸಿಬ್ಬಂದಿ ನಿಯೋಜನೆ

ಇದಕ್ಕೆ ಕೊಡುವ ಅನುದಾನವನ್ನು ಸರಕಾರಿ ಶಾಲೆ ಮತ್ತು ಆಸ್ಪತ್ರೆ ಅಭಿವೃದ್ಧಿ ಮಾಡಿ, ಮಕ್ಕಳ ಮತ್ತು ಮಹಿಳಾ ಸಬಲೀಕರಣಕ್ಕೆ ವಿನಿಯೋಗಿಸಲಿ ಎಂದರು.ಕನ್ನಡ ವಿಶ್ವವಿದ್ಯಾಲಯ ಸಾಯುತ್ತಿದ್ದರೆ, ಸಂಸ್ಕೃತಕ್ಕೆ 300 ಕೋಟಿ ರೂ.ಅನುದಾನ, ಮಾಗಡಿಯಲ್ಲಿ ಫಲವತ್ತಾದ ಭೂಮಿ ನೀಡಲಾಗುತ್ತಿದೆ ಎಂದು ಪ್ರೊ. ಮಹೇಶ್‌ಚಂದ್ರ ಅಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ