ಆ್ಯಪ್ನಗರ

ಎಂಡಿಸಿಸಿ ಬ್ಯಾಂಕ್‌ ಹಣ ದುರುಪಯೋಗ ಪ್ರಕರಣ

ಎಂಡಿಸಿಸಿ ಬ್ಯಾಂಕ್‌ ಹುಣಸೂರು, ಬಿಳಿಕೆರೆ ಶಾಖೆಗಳಲ್ಲಿ 40 ಕೋಟಿಗೂ ಹೆಚ್ಚು ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ, ಹುಣಸೂರು ಶಾಖೆಯ ಹಿಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್‌ ಜಾಮೀನು ಅರ್ಜಿಯನ್ನು ಹುಣಸೂರು ನ್ಯಾಯಾಲಯ ತಿರಸ್ಕರಿಸಿದೆ.

Vijaya Karnataka 28 Aug 2019, 5:00 am
ಆರೋಪಿ ರಾಮಪ್ಪ ಪೂಜಾರ್‌ಗೆ ಜಾಮೀನು ನಿರಾಕರಣೆ
Vijaya Karnataka Web mdcc bank money laundering case
ಎಂಡಿಸಿಸಿ ಬ್ಯಾಂಕ್‌ ಹಣ ದುರುಪಯೋಗ ಪ್ರಕರಣ


ಹುಣಸೂರು:
ಎಂಡಿಸಿಸಿ ಬ್ಯಾಂಕ್‌ ಹುಣಸೂರು, ಬಿಳಿಕೆರೆ ಶಾಖೆಗಳಲ್ಲಿ 40 ಕೋಟಿಗೂ ಹೆಚ್ಚು ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ, ಹುಣಸೂರು ಶಾಖೆಯ ಹಿಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್‌ ಜಾಮೀನು ಅರ್ಜಿಯನ್ನು ಹುಣಸೂರು ನ್ಯಾಯಾಲಯ ತಿರಸ್ಕರಿಸಿದೆ.

ಹುಣಸೂರು ಪ್ರಧಾನ ಹಿರಿಯ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಸರಕಾರಿ ಸಹಾಯಕ ಅಭಿಯೋಜಕ ನಾರಾಯಣ್‌ ಅವರು ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಗೆ ಜಾಮೀನು ನೀಡದಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಧೀಶರಾದ ಜಿ.ದೀಪಾ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಆರೋಪಿ ರಾಮಪ್ಪ ಪೂಜಾರ್‌ ತನ್ನ ಒಂದೂವರೆ ವರ್ಷಗಳ ಅವಧಿಯಲ್ಲಿ ರೈತರ ಕೃಷಿ, ಬೆಳೆ ಸಾಲದ ಬಾಬತ್ತು 40 ಕೋಟಿಗೂ ಹೆಚ್ಚು ಹಣ ದುರುಪಯೋಗ ಹಾಗೂ ತನ್ನ ಖಾತೆಗೆ 1.45 ಕೋಟಿ ರೂ. ವರ್ಗಾಯಿಸಿ ಕೊಂಡಿದ್ದಲ್ಲದೆ, ಸ್ವಂತ ಷೇರು ಮಾರುಕಟ್ಟೆ ಕಂಪನಿ ಆರಂಭಿಸಿ, ದುರುಪಯೋಗದ ಹಣವನ್ನು ಅದರಲ್ಲಿ ತೊಡಗಿಸುತ್ತಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ವಿರುದ್ಧ ಹುಣಸೂರು ನಗರ ಹಾಗೂ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ತಲೆ ಮರೆಸಿಕೊಂಡಿದ್ದ. ಬ್ಯಾಂಕ್‌ನ ಸರ್ವಸದಸ್ಯರ ನಿರ್ಣಯದಂತೆ ಪ್ರಕರಣವನ್ನು ಸಿಒಡಿಗೆ ವಹಿಸಲಾಗಿತ್ತು. ಆರೋಪಿಯನ್ನು 11 ತಿಂಗಳ ನಂತರ ಬಂಧಿಸಲಾಗಿತ್ತು.

ಪ್ರಕರಣ ದಾಖಲಾದ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ 11 ತಿಂಗಳು ರೈಲಿನಲ್ಲೇ ದೇಶಾದ್ಯಂತ ಓಡಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಸಿಒಡಿ ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ವಿಚಾರಣೆಗಾಗಿ ನಾಲ್ಕು ದಿನ ವಶಕ್ಕೆ ಪಡೆದು ಪುನಃ ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಿದ್ದರು.

ಬಿಳಿಕೆರೆ ಪ್ರಕರಣಕ್ಕೆ ತಡೆಯಾಜ್ಞೆ: ಹುಣಸೂರು ಮತ್ತು ಬಿಳಿಕೆರೆ ಬ್ಯಾಂಕುಗಳಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಬಿಳಿಕೆರೆ ಪ್ರಕರಣಕ್ಕೆ ಮಾತ್ರ ತಡೆಯಾಜ್ಞೆ ನೀಡಿದೆ. ಮತ್ತಿಬ್ಬರು ಆರೋಪಿಗಳಾದ ಮೇಲ್ವಿಚಾರಕರಿಬ್ಬರ ವಿರುದ್ಧ 90 ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ