ಆ್ಯಪ್ನಗರ

ನಗರದಲ್ಲಿದ್ದಾರೆ 200 ಜೇಬುಗಳ್ಳರು, ಎಚ್ಚರ !

ಬ್ಲೇಡ್‌ನಿಂದಲೇ ಕಿಸೆಗೆ ಕತ್ತರಿ, -ಕಳ್ಳಿಯರ ಕೈ ಚಳಕಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.

Vijaya Karnataka 2 Aug 2019, 10:42 am
ಹರೀಶ್‌ ಎಲ್‌.ತಲಕಾಡು ಮೈಸೂರು
Vijaya Karnataka Web Pick Pocketers


ಘಟನೆ 1: ಜುಲೈ 6 -ನಗರದ ಅಶೋಕ ರಸ್ತೆಯಲ್ಲಿನ ಕಾಫಿ ಶಾಪ್‌ನಲ್ಲಿ ಪತ್ನಿಯೊಂದಿಗೆ ಕಾಫಿ ಸೇವಿಸಲು ಬಂದಿದ್ದ ವ್ಯಕ್ತಿಯೊಬ್ಬರ ಪ್ಯಾಂಟ್‌ ಜೇಬಿಗೆ ಬ್ಲೇಡ್‌ನಿಂದ ಕತ್ತರಿ ಹಾಕಿ ಎರಡು ಲಕ್ಷ ರೂ. ಎಗರಿಸಲಾಯಿತು.

ಘಟನೆ 2: ಜುಲೈ 26 -ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ತೆರಳಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ ಕಳವಾಗಿತ್ತು. ಬ್ಯಾಗ್‌ನಲ್ಲಿ 4 ಸಾವಿರ ರೂ. ಹಣದೊಂದಿಗೆ 28 ಗ್ರಾಂ ತೂಕದ ಚಿನ್ನಾಭರಣ ಇತ್ತು.

ಹೀಗೆ ಒಂದು ತಿಂಗಳಲ್ಲಿ ಎರಡು ಕಡೆ ಜೇಬುಗಳ್ಳತನ ಪ್ರಕರಣ ನಡೆದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಮೈಸೂರು ನಗರ ಪೊಲೀಸರು, ಮಹಿಳೆ ಸೇರಿದಂತೆ ಇಬ್ಬರು ಜೇಬುಗಳ್ಳರನ್ನು ಬಂಧಿಸಿದ್ದಾರೆ.

ವರ್ಷದ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ ಕಳವಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ಉತ್ತರ ಕರ್ನಾಟಕ ಮೂಲದ ಜೇಬುಗಳ್ಳಿಯನ್ನು ಬಂಧಿಸಿದ್ದರು. ಆ ಮೂಲಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದು ಜೇಬುಗಳ್ಳತನ ಮಾಡುವ ಪ್ರಕರಣಗಳು ಬೆಳಕಿಗೆ ಬಂದವು.

ಮೈಸೂರು ನಗರ ಅಪರಾಧ ಪೊಲೀಸ್‌ ಘಟಕದ ಮಾಹಿತಿ ಪ್ರಕಾರ ಮೈಸೂರು ನಗರದಲ್ಲಿ 200 ಮಂದಿ ಜೇಬುಗಳ್ಳರು ಇರುವ ಬಗ್ಗೆ ಮಾಹಿತಿ ಇದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ. ಇತ್ತೀಚೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದು ಜೇಬುಗಳ್ಳತನ ಮಾಡಿಕೊಂಡು ಹೋಗುವ ಖದೀಮರ ಸಂಖ್ಯೆಯೂ ಹೆಚ್ಚಾಗಿದ್ದು, ಮೈಸೂರು ನಗರ ಪೊಲೀಸರ ನಿದ್ದೆಗೆಡಿಸಿದೆ.

ಜನ ನಿಬಿಡ ಪ್ರದೇಶದಲ್ಲೇ ಕಾರ್ಯಾಚರಣೆ: ಸಾಮಾನ್ಯವಾಗಿ ಜೇಬುಗಳ್ಳರು ಕಾರ್ಯಾಚರಣೆ ನಡೆಸುವುದು ಜನನಿಬಿಡ ಪ್ರದೇಶದಲ್ಲೇ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರ್ಕೆಟ್‌, ದೇವಸ್ಥಾನ ಸೇರಿದಂತೆ ಜನ ಸಂದಣಿ ಹೆಚ್ಚಾಗಿರುವಲ್ಲಿಗೆ ತೆರಳುವ ಜೇಬುಗಳ್ಳರು, ಕೈಯಲ್ಲಿ ಎರಡು ಬೆರಳುಗಳ ಮಧ್ಯೆ ಇಟ್ಟುಕೊಂಡಿರುವ ಹರಿತವಾದ ಬ್ಲೇಡ್‌ನಿಂದ ಒಂದೇ ಬಾರಿ ಪ್ಯಾಂಟ್‌ ಜೇಬಿಗೆ ಕತ್ತರಿ ಹಾಕಿ, ಹಣವಿರುವ ಪರ್ಸ್‌ ಎಗರಿಸಿ ಪರಾರಿಯಾಗುತ್ತಾರೆ. ಜತೆಗೆ ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳನ್ನು ಸಹ ಇದೇ ಮಾದರಿಯಲ್ಲಿ ಹರಿದು ಅಥವಾ ಜಿಪ್‌ ತೆರೆದು ಬ್ಯಾಗಿನಲ್ಲಿನ ಹಣ ಮತ್ತು ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ.

ದೂರು ನೀಡುತ್ತಿಲ್ಲ: ಜೇಬುಗಳ್ಳತನದಿಂದ ಕಡಿಮೆ ಮೊತ್ತ ಹಣ ಅಥವಾ ವಸ್ತುಗಳು ಕಳೆದುಕೊಂಡವರು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದರೆ ಪದೇ ಪದೆ ಅಲೆಯಬೇಕಾಗುತ್ತದೆ ಎಂಬ ಭಯ, ಆತಂಕ ಮತ್ತು ನಿರ್ಲಕ್ಷ್ಯದಿಂದ ದೂರು ನೀಡಲು ಮುಂದೆ ಬರುವುದಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಜೇಬುಗಳ್ಳರು, ಸಾರ್ವಜನಿಕರ ಕಿಸೆಗೆ ಕತ್ತರಿ ಹಾಕುವುದನ್ನು ಮುಂದುವರಿಸಿದ್ದಾರೆ ಎನ್ನುತ್ತಾರೆ ಪೊಲೀಸರು.

ಜೇಬುಗಳ್ಳತನ ಮತ್ತು ಸರಗಳ್ಳತನ ನಡೆಯುವ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಅಲ್ಲದೇ ಪರ್ಸ್‌ ಅಥವಾ ವ್ಯಾನಿಟಿ ಬ್ಯಾಗ್‌ ಕಳೆದುಕೊಂಡವರು ತಕ್ಷಣ ಪೊಲೀಸರಿಗೆ ದೂರು ನೀಡಿದರೆ ಜೇಬುಗಳ್ಳರನ್ನು ಹಿಡಿಯಲು ಅನುಕೂಲವಾಗುತ್ತದೆ-ಬಿ.ಟಿ. ಕವಿತಾ, ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ.

ನಗರ ಬಸ್‌ ನಿಲ್ದಾಣದಿಂದ ಮನೆಗೆ ಬಸ್‌ನಲ್ಲಿ ತೆರಳುವಾಗ ರಶ್‌ನಲ್ಲಿ ನನ್ನ ಪ್ಯಾಂಟ್‌ ಜೇಬಿನಲ್ಲಿದ್ದ ಪರ್ಸ್‌ ಕಳವಾಯಿತು. ಪೊಲೀಸರಿಗೆ ದೂರು ನೀಡಲು ತೆರಳಿದರೆ ಪದೇ ಪದೆ ಅಲೆಯಬೇಕಾಗುತ್ತದೆ ಎಂದು ಸುಮ್ಮನಾದೆ. ಅಲ್ಲದೇ ಪರ್ಸ್‌ನಲ್ಲೂ ಹೆಚ್ಚಿ ನ ಹಣವಿರಲಿಲ್ಲ- ಸೋಮಸುಂದರ್‌, ಜೆ.ಪಿ.ನಗರ.

ಹೀಗೆ ಮಾಡಿ....


* ಜನ ಸಂದಣಿಯಲ್ಲಿರುವಾಗ ಪರ್ಸ್‌ ಮತ್ತು ವ್ಯಾನಿಟಿ ಬ್ಯಾಗ್‌ಗಳನ್ನು ಭದ್ರವಾಗಿರಿಸಿಕೊಳ್ಳಿ

* ಬೆನ್ನಿನ ಹಿಂಬದಿಯಲ್ಲಿ ವ್ಯಾನಿಟಿ ಬ್ಯಾಗ್‌ ಇರಿಸಿಕೊಂಡು ಓಡಾಡಬೇಡಿ.

*ಹೆಚ್ಚಿನ ಮೊತ್ತದ ಹಣವನ್ನು ಪರ್ಸ್‌ ಅಥವಾ ಜೇಬಿನಲ್ಲಿ ಇರಿಸಿಕೊಳ್ಳಬೇಡಿ.

* ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಹತ್ತಿರ ಬಂದರೆ ಎಚ್ಚರಿಕೆಯಿಂದಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ