ಆ್ಯಪ್ನಗರ

ವಂಚನೆ ಪ್ರಕರಣ: ಮಾಜಿ ಮೇಯರ್‌ಗೆ ಬಂಧನದ ವಾರಂಟ್‌

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್‌ ಮತ್ತು ವಕೀಲ ಆರ್‌.ಜಿ.ನರಸಿಂಹ ಅಯ್ಯಂಗಾರ್‌ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಅಧೀನ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ.

Vijaya Karnataka 2 Nov 2018, 5:00 am
ಮೈಸೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್‌ ಮತ್ತು ವಕೀಲ ಆರ್‌.ಜಿ.ನರಸಿಂಹ ಅಯ್ಯಂಗಾರ್‌ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಅಧೀನ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ.
Vijaya Karnataka Web mysore cheating
ವಂಚನೆ ಪ್ರಕರಣ: ಮಾಜಿ ಮೇಯರ್‌ಗೆ ಬಂಧನದ ವಾರಂಟ್‌


ಫೋರ್ಜರಿ ಸಹಿ ಮಾಡಿ, ಕಕ್ಷಿದಾರರ ಹಣ ಡ್ರಾ ಮಾಡಿ ವಂಚಿಸಿದ್ದ ಪ್ರಕರಣ ಸಂಬಂಧ ಶಿಕ್ಷೆ ವಿಧಿಸಿದ್ದ 1ನೇ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರ್‌.ಜಿ.ನರಸಿಂಹ ಅಯ್ಯಂಗಾರ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಜಯ್‌ ಕುಮಾರ್‌ ಎಂ.ಆನಂದ ಶೆಟ್ಟಿ ಅವರು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನರಸಿಂಹ್‌ ಅಯ್ಯಂಗಾರ್‌ ಅವರ ಮೇಲ್ಮನವಿಯನ್ನು ಅ. 27ರಂದು ವಜಾಗೊಳಿಸಿ, ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದ್ದರು. ತೀರ್ಪಿನನ್ವಯ ಪ್ರಕರಣ ಕಡತ 1ನೇ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ವರ್ಗಗೊಂಡಿತ್ತು. ಇಂದು ನ್ಯಾಯಾಲಯ ನರಸಿಂಹನ್‌ ಅಯ್ಯಂಗಾರ್‌ ಬಂಧನಕ್ಕೆ ವಾರಂಟ್‌ ಹೊರಡಿಸಿ, ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್‌ ಠಾಣೆಗೆ ನಿರ್ದೇಶಿಸಿದೆ.

ಮೈಸೂರಿನ ನಾಡನಹಳ್ಳಿ ನಿವಾಸಿ ಎಂ.ಬಿ.ಪಾರ್ವತಿ(ಟಿನಿ ಬಿದ್ದಪ್ಪ) ತಮಗೆ ಮಂಜೂರಾಗಿದ್ದ ಸಾಲದ ಹಣದಲ್ಲಿ 20 ಸಾವಿರ ರೂ.ಗಳನ್ನು ತಮ್ಮ ಖಾತೆಯಿಂದ ಡ್ರಾ ಮಾಡಲಾಗಿದೆ ಎಂದು 1993ರಲ್ಲಿ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಅಲಹಾಬಾದ್‌ ಬ್ಯಾಂಕ್‌ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ, ಬಡ್ಡಿ ಸಹಿತ 84,600ರೂ. ಹಾಗೂ 500 ರೂ. ಚೆಕ್‌ ನೀಡಬೇಕೆಂದು 2006ರಲ್ಲಿ ಬ್ಯಾಂಕ್‌ಗೆ ಆದೇಶಿಸಿ, ತೀರ್ಪು ನೀಡಿತ್ತು. ನಂತರ ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯಕ್ಕೆ ಬ್ಯಾಂಕ್‌, ಮೇಲ್ಮನವಿ ಸಲ್ಲಿಸಿತ್ತಾದರೂ ಅಲ್ಲಿಯೂ ಪಾರ್ವತಿ ಅವರ ಪರ ತೀರ್ಪು ಬಂದಿತ್ತು. ಬಳಿಕ ಬ್ಯಾಂಕ್‌ನಿಂದ ಬಂದ ಪರಿಹಾರದ ಚೆಕ್‌ಗಳಿಗೆ ಫೋರ್ಜರಿ ಸಹಿ ಮಾಡಿ, ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗ ಮಾಡಿಕೊಂಡಿದ್ದ ಆರೋಪದಡಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪಾರ್ವತಿ ಅವರ ಪರ ವಾದ ಮಂಡಿಸಿದ್ದ ನರಸಿಂಹ ಅಯ್ಯಂಗಾರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ವಿಚಾರಣೆ ನಡೆಸಿದ 1ನೇ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯ, ನರಸಿಂಹ ಅಯ್ಯಂಗಾರ್‌ಗೆ 1 ವರ್ಷ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ