ಆ್ಯಪ್ನಗರ

ಅರ್ಜುನನಿಗೆ ಮರದ ಅಂಬಾರಿ ತಾಲೀಮು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನನಿಗೆ ಸೋಮವಾರ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಯಿತು.

Vijaya Karnataka 19 Sep 2017, 7:55 am

750 ಕೆಜಿ ಮರಳಿನ ಮೂಟೆ ಹೊತ್ತು ರಾಜ ಬೀದಿಗಳಲ್ಲಿ ಸಾಗಿದ ಅರ್ಜುನ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನನಿಗೆ ಸೋಮವಾರ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಯಿತು.

ದಸರಾ ಮಹೋತ್ಸವದ ಉದ್ಘಾಟನೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಲಕ್ಷಾಂತರ ಮಂದಿ ವೀಕ್ಷಿಸುವ ಆಕರ್ಷಕ ಜಂಬೂ ಸವಾರಿಗೆ 12 ದಿನಗಳು ಬಾಕಿ ಉಳಿದಿವೆ. ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದಸರ ಮಹೋತ್ಸವದ ದೊಡ್ಡ ಸವಾಲು. ಹಾಗಾಗಿ ಒಂದೂವರೆ ತಿಂಗಳು ಮುಂಚಿತವಾಗಿಯೆ ದಸರಾ ಆನೆಗಳನ್ನು ತರಬೇತಿ ಶಿಬಿರಗಳಿಂದ ಕರೆತಂದು ಮೆರವಣಿಗೆಯ ತಾಲೀಮು ನೀಡಲಾಗುತ್ತಿದೆ.

ಕಳೆದ 20 ದಿನಗಳಿಂದ ಆನೆಗಳಿಗೆ ಹಂತ ಹಂತವಾಗಿ ಚಿನ್ನದ ಅಂಬಾರಿಯಷ್ಟೆ ತೂಕದ(750 ಕೆಜಿ)ಮರಳಿನ ಮೂಟೆಗಳನ್ನಿಟ್ಟು ಭಾರ ಹೊರುವ ತಾಲೀಮು ನೀಡಲಾಗಿದೆ. ಸೋಮವಾರ ಅರಮನೆ ಆವರಣದಲ್ಲಿ ತಾಲೀಮಿನ ಮುಂದುವರಿದ ಭಾಗವಾಗಿ ಚಿನ್ನದ ಅಂಬಾರಿಯನ್ನೆ ಹೋಲುವ 280 ಕೆಜಿ ತೂಕದ ಮರದ ಅಂಬಾರಿಯನ್ನು ಅರ್ಜುನನ ಬೆನ್ನಿಗೆ ಕಟ್ಟಲಾಯಿತು. 300 ಕೆಜಿ. ತೂಕದ ಮರಳಿನ ಮೂಟೆಗಳು, 150 ಕೆಜಿ ತೂಕದ ಗಾದಿ ಸೇರಿದಂತೆ ಒಟ್ಟು 730 ಕೆಜಿ ತೂಕವನ್ನು ಅರ್ಜುನನಿಗೆ ಹೊರಿಸಲಾಯಿತು. ಬಳಿಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು.

ಅಂಬಾರಿ ಹೊತ್ತ ಅರ್ಜುನ

ಮುಂಜಾನೆ 6 ಗಂಟೆಗೆ ಅರ್ಜುನ ಅಂಬಾರಿ ಹೊರಲು ಸನ್ನದ್ಧನಾಗಿ ನಿಂತಿತ್ತು. ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಲಿ ಎಂಬ ಕಾರಣಕ್ಕೆ ಆತನ ಎಡ ಬಲದಲ್ಲಿ ಸಾಗಲು ಕಾವೇರಿ, ವರಲಕ್ಷ್ಮಿ ಆನೆಗಳೂ ಹಾಜರಿದ್ದವು. ಬಳಿಕ ಮಾವುತರು, ಕಾವಾಡಿಗಳೆಲ್ಲರೂ ಸೇರಿ ಅರಮನೆ ಆವರಣದಲ್ಲಿರುವ ಭಾರ ಎತ್ತುವ ಟ್ರ್ಯಾಲಿ ಸಹಾಯದಿಂದ ಮರದ ಅಂಬಾರಿಯನ್ನು ಮೇಲಕ್ಕೆ ಎತ್ತಲು ಸಹಕರಿಸಿದರು. ನಂತರ ಅರ್ಜುನನನ್ನು ಅದರ ಕೆಳಭಾಗಕ್ಕೆ ನಿಲ್ಲಿಸಿ ಅಂಬಾರಿಯನ್ನು ಅದರ ಬೆನ್ನ ಮೇಲೆ ಇರಿಸಿದರು. ಬಳಿಕ ನಾಲ್ಕು ಸುತ್ತು ಅಗ್ಗವನ್ನು ಅಂಬಾರಿಗೆ ಕಟ್ಟಿ ಬಿಗಿ ಮಾಡಲಾಯಿತು. ಮರದ ಅಂಬಾರಿ ಹೊತ್ತ ಅರ್ಜುನ ನೋಡ ನೋಡುತ್ತಿದ್ದಂತೆ ಜಂಬೂ ಸವಾರಿಯಲ್ಲಿ ಅಂಬಾರಿಯನ್ನು ಹೊತ್ತು ನಿಂತಂತೆ ಕಂಡಿತು. ಕಾವೇರಿ, ವರಲಕ್ಷ್ಮಿ ಆನೆಗಳು ಅರ್ಜುನನ ಎಡ ಬಲದಲ್ಲಿ ಬಂದು ನಿಂತವು. ನಂತರ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹೆಜ್ಜೆ ಹಾಕಲು ಆರಂಭಿಸಿದವು.

ರಿಹರ್ಸಲ್‌ವರೆಗೆ ಅಂಬಾರಿ ತಾಲೀಮು:

ಅರಮನೆ ಆವರಣದಿಂದ ಬೆ.8.10ಕ್ಕೆ ಆರಂಭವಾದ ತಾಲೀಮು 9.30ರ ವೇಳೆಗೆ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದ ಬಳಿ ಕೊನೆಗೊಂಡಿತು. ಒಟ್ಟು 1.20 ನಿಮಿಷದಲ್ಲಿ ಅರ್ಜುನ ಜಂಬೂ ಸವಾರಿ ಮಾರ್ಗವನ್ನು ಸವೆಸಿ ಅಧಿಕಾರಿಗಳಿಂದ ಸೈ ಎನಿಸಿಕೊಂಡಿತು. ಒಟ್ಟಾರೆ ದಸರಾ ಮೆರವಣಿಗೆ ತಾಲೀಮು ನಡೆಯುವ ಹಿಂದಿನ ದಿನದವರೆಗೂ ಮರದ ಅಂಬಾರಿ ಹೊರುವ ತಾಲೀಮು ನಡೆಯಲಿದೆ. ಅರ್ಜುನನೂ ಸೇರಿದಂತೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಒಟ್ಟು 15 ಆನೆಗಳು ಮೈಸೂರಿನ ರಾಜಬೀದಿಗಳಲ್ಲಿ ಸಾಗುವುದನ್ನು ಕಂಡು ಖುಷಿಪಟ್ಟರು.

ಎತ್ತರ ದೇಹ, ತಲೆ ಎತ್ತಿ ಸಾಗುವ ಅರ್ಜುನನ ನಡಿಗೆ ವೈಖರಿಯು ಅಂಬಾರಿ ಹೊರುವ ಆನೆಗೆ ಹೇಳಿ ಮಾಡಿಸಿದಂತಹ ಗುಣಗಳಾಗಿವೆ. ಅರ್ಜುನ ರಾಜ ಗಾಂಭೀರ್ಯದಿಂದ ಮರದ ಅಂಬಾರಿಯನ್ನು ಹೊತ್ತು ಸಾಗುವುದನ್ನು ನೋಡುತ್ತಿದ್ದರೆ ಸಂತೋಷವಾಗುತ್ತದೆ.

Vijaya Karnataka Web mysore dasara 2017
ಅರ್ಜುನನಿಗೆ ಮರದ ಅಂಬಾರಿ ತಾಲೀಮು

-ನಾಗರಾಜು, ಆನೆ ವೈದ್ಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ