ಆ್ಯಪ್ನಗರ

ನಂಜನಗೂಡಿಗೆ ಮತ್ತೆ ಮುಳುಗಡೆ ಭೀತಿ

ಕಳೆದ ಮೂರು ದಿನಗಳಿಂದ ತಗ್ಗಿದ್ದ ಕಪಿಲಾ ನದಿಯ ಪ್ರವಾಹ ಇದೀಗ ಮತ್ತಮ್ಮೆ ದಿಢೀರ್‌ ಏರಿಕೆಯಾಗಿದ್ದು ನದಿಯಲ್ಲಿ ಗುರುವಾರ ಸಂಜೆ ವೇಳೆಗೆ ಹೊರ ಹರಿವಿನ ಪ್ರಮಾಣ 70 ಸಾವಿರ ಕ್ಯೂಸೆಕ್‌ಗೂ ಹೆಚ್ಚಾಗಿದ್ದರಿಂದ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡು ಮತ್ತೆ ಮುಳುಗಡೆ ಭೀತಿಯನ್ನು ಎದುರಿಸುತ್ತಿದೆ.

Vijaya Karnataka 17 Aug 2018, 5:00 am
ನಂಜನಗೂಡು : ಕಳೆದ ಮೂರು ದಿನಗಳಿಂದ ತಗ್ಗಿದ್ದ ಕಪಿಲಾ ನದಿಯ ಪ್ರವಾಹ ಇದೀಗ ಮತ್ತಮ್ಮೆ ದಿಢೀರ್‌ ಏರಿಕೆಯಾಗಿದ್ದು ನದಿಯಲ್ಲಿ ಗುರುವಾರ ಸಂಜೆ ವೇಳೆಗೆ ಹೊರ ಹರಿವಿನ ಪ್ರಮಾಣ 70 ಸಾವಿರ ಕ್ಯೂಸೆಕ್‌ಗೂ ಹೆಚ್ಚಾಗಿದ್ದರಿಂದ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡು ಮತ್ತೆ ಮುಳುಗಡೆ ಭೀತಿಯನ್ನು ಎದುರಿಸುತ್ತಿದೆ.
Vijaya Karnataka Web nanjangud is again sinking
ನಂಜನಗೂಡಿಗೆ ಮತ್ತೆ ಮುಳುಗಡೆ ಭೀತಿ


ನಗರ ಹಾಗೂ ತಾಲೂಕಿನ ತಗ್ಗು ಪ್ರದೇಶದ ಮನೆಗಳು ಮತ್ತು ಸಾವಿರಾರು ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿ ಮುಳುಗಡೆಯಾಗಿದೆ. ತಾಲೂಕಿನ ಸುತ್ತೂರು ಹಾಗೂ ಹರದನಹಳ್ಳಿ ಗ್ರಾಮದ ಮುಖ್ಯ ಸೇತುವೆಗಳು ಮತ್ತೆ ಮುಳುಗಡೆಯಾಗಿರುವುದರಿಂದ ಸಾರಿಗೆ ಸಂಪರ್ಕ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಳುಗಡೆಯಾಗಿದ್ದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬಿತ್ತನೆಗೆ ಮುಂದಾಗಿದ್ದ ರೈತರಿಗೆ ಪ್ರವಾಹದಿಂದ ಮತ್ತೊಮ್ಮೆ ಸಂಕಷ್ಟಕ್ಕೀಡಾಗಿ ಕೃಷಿ ಕೈಗೊಳ್ಳಲಾಗದೇ ಸಂಕಷ್ಟ ಎದುರಾಗಿದೆ.

ಬುಧವಾರದವರೆಗೆ 50 ಸಾವಿರ ಕ್ಯೂಸೆಕ್‌ ಹೊರಹರಿವಿದ್ದ ಕಪಿಲಾ ನದಿಯಲ್ಲಿ ಗುರುವಾರ ಸಂಜೆಗೆ ಹಠಾತ್‌ 70 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ ನಲುಗಿದ್ದ ಸ್ಥಳಿಯ ನಿವಾಸಿಗಳು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೆ ಮನೆಗಳು ಜಲಾವೃತಗೊಂಡಿರುವುದು ಆತಂಕ ಹೆಚ್ಚಿಸಿದೆ. ನಗರದ ಹಳ್ಳದಕೇರಿ, ಸರಸ್ವತಿ ಕಾಲನಿ, ಹೆಜ್ಜಿಗೆ, ಬೊಕ್ಕಹಳ್ಳಿ ಗ್ರಾಮದಲ್ಲಿ ಈ ಹಿಂದೆ ಮುಳುಗಡೆಯಾಗಿಗಿರುವ ಸಂತ್ರಸ್ತ ಕುಟುಂಬಗಳಿಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಗಿರಿಜಾ ಕಲ್ಯಾಣ ಮಂಪಟದಲ್ಲಿ ತೆರೆದಿರುವ ಗಂಜಿಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟದಲ್ಲಿರುವ ಮುಡಿಗಟ್ಟೆ, ಲಗ್ಗೇಜು ಕೊಠಡಿ, ಮಹಿಳೆಯರ ಬಟ್ಟೆ ಬದಲಾಯಿಸುವ ಶೆಡ್‌, ಶೌಚಗೃಹ ಹಾಗೂ ಸ್ನಾನದ ಮನೆಗಳು ಮತ್ತೆ ಪ್ರವಾಹಕ್ಕೆ ತುತ್ತಾಗಿ ಮುಳುಗಡೆಯಾಗಿವೆ. ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ, ಲಿಂಗಭಟ್ಟರ ಗುಡಿ, ಅಯ್ಯಪ್ಪಸ್ವಾಮಿ ದೇವಾಲಯ, ದತ್ತಾತ್ರೇಯ ಗುಡಿ, ಸಂಗಮದ ಸದ್ಗುರು ಮಹದೇವ ತಾತಾ ಸನ್ನಿಧಿ ದೇವಾಲಯಗಳು ಮುಳುಗಡೆಯಾಗುವ ಹಂತಕ್ಕೆ ಬಂದಿವೆ. 15 ದಿನಗಳಿಂದ ಮುಳುಗಡೆಯಾಗಿರುವ ಪರಶುರಾಮ ದೇವಾಲಯ ಶಿಥಿಲಗೊಳ್ಳುವ ಆತಂಕ ತಂದೊಡ್ಡಿದೆ.

ಇನ್ನು ನಗರದ ಎಲ್ಲಾ ಸ್ಮಶಾನಗಳು ಮುಳುಗಡೆಗೊಂಡಿದ್ದು ಅಕಾಲಿಕ ಮರಣಕ್ಕೀಡಾದವರ ಅಂತ್ಯಕ್ರಿಯೆ ನೆರವೇರಿಸಲು ಚಾಮರಾಜನಗರ ಮುಖ್ಯರಸ್ತೆಯ ಬದಿಯಲ್ಲಿ ನಗರಸಭೆ ವತಿಯಿಂದ ಅನುವು ಮಾಡಿಕೊಡಲಾಗಿದೆ.

ವಾರದ ಹಿಂದೆಯಷ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 80 ಸಾವಿರ ಕ್ಯೂಸೆಕ್‌ ಹರಿಸಿದ್ದರಿಂದ ಮೈಸೂರು ನಂಜನಗೂಡು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಮೂರು ದಿನಗಳ ಕಾಲ ಬಂದ್‌ ಆಗಿ ರಾಜ್ಯ ಹಾಗೂ ಅಂತಾರಾಜ್ಯ ಪ್ರಯಾಣಿಕರು ಯಾತನೆ ಪಡುವಂತಾಗಿದೆ. ಇದೀಗ 70 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿರುವುದರಿಂದ ಪ್ರವಾಹವು ಹೆದ್ದಾರಿಗೆ ಚಾಚಿಕೊಂಡಿದ್ದು ಯಾವುದೇ ಸಂದರ್ಭದಲ್ಲಾದರೂ ಹೆದ್ದಾರಿ ರಸ್ತೆಯನ್ನು ಪ್ರವಾಹದ ನೀರು ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮತ್ತೆ ಮೈಸೂರು ನಂಜನಗೂಡು ಹೆದ್ದಾರಿ ಬಂದ್‌ ಆಗುವ ಆತಂಕ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ