ಆ್ಯಪ್ನಗರ

ಶಿಮ್ಲಾದಲ್ಲಿ ಪದ್ಮ ಪತ್ತೆಯಾಗಿದ್ದೂ ಸಿನಿಮಾ ಕತೆಯಷ್ಟೇ ರೋಚಕ

ಶಿಮ್ಲಾದ ಮಾನಸಿಕ ಆಸ್ಪತ್ರೆಯಲ್ಲಿರುವ ಪಿರಿಯಾಪಟ್ಟಣ ಮೂಲದ ಪದ್ಮಾ ಅವರು ಈಗ ಚರ್ಚೆಯಲ್ಲಿದ್ದಾರೆ. ಆಕೆ ಹಿಮಾಚಲದ ಬೆಟ್ಟಗಾಡು ಪ್ರದೇಶದಲ್ಲಿರುವ ಈ ಆಸ್ಪತ್ರೆಯಲ್ಲಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿದ್ದು ಅಲ್ಲಿನ ಸಾಮಾಜಿಕ ಕಾರ‍್ಯಕರ್ತೆ ಸುನೀಲ ಶರ್ಮಾ.

Vijaya Karnataka 18 Jul 2018, 5:00 am
ಸಾಮಾಜಿಕ ಕಾರ‍್ಯಕರ್ತೆ ಸುನೀಲ ಶರ್ಮಾ ಶ್ರಮದ ಫಲವಾಗಿ ದೇಶಾದ್ಯಂತ ಸುದ್ದಿ
Vijaya Karnataka Web padma has been discovered in shimla as well as the movie story
ಶಿಮ್ಲಾದಲ್ಲಿ ಪದ್ಮ ಪತ್ತೆಯಾಗಿದ್ದೂ ಸಿನಿಮಾ ಕತೆಯಷ್ಟೇ ರೋಚಕ


ಮೈಸೂರು:
ಶಿಮ್ಲಾದ ಮಾನಸಿಕ ಆಸ್ಪತ್ರೆಯಲ್ಲಿರುವ ಪಿರಿಯಾಪಟ್ಟಣ ಮೂಲದ ಪದ್ಮಾ ಅವರು ಈಗ ಚರ್ಚೆಯಲ್ಲಿದ್ದಾರೆ. ಆಕೆ ಹಿಮಾಚಲದ ಬೆಟ್ಟಗಾಡು ಪ್ರದೇಶದಲ್ಲಿರುವ ಈ ಆಸ್ಪತ್ರೆಯಲ್ಲಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿದ್ದು ಅಲ್ಲಿನ ಸಾಮಾಜಿಕ ಕಾರ‍್ಯಕರ್ತೆ ಸುನೀಲ ಶರ್ಮಾ.

ಶರ್ಮಾ ಅವರ ನೇತೃತ್ವದ ಪರ್ಫಾಮೆನ್ಸ್‌ ಆರ್ಟ್ಸ್ ಗ್ರೂಪ್‌ ಹೆಸರಿನ ಎನ್‌ಜಿಒ ಇಂಥ ಅದೆಷ್ಟೋ ಸಂತ್ರಸ್ತರನ್ನು ಅವರ ತವರಿಗೆ ತಲುಪಿಸಿದೆ.

ಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯೊಟ್ಟಿಗೆ ಕೈ ಜೋಡಿಸಿರುವ ಈ ಎನ್‌ಜಿಒ ಮಾನಸಿಕ ರೋಗಿಗಳ ಆಸ್ಪತ್ರೆ, ನಿರಾಶ್ರಿತರ ಕೇಂದ್ರಗಳು ಹಾಗೂ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರಿಗೆ ಧ್ಯಾನ ಮೊದಲಾದ ಆಧ್ಯಾತ್ಮಿಕ ಪಾಠಗಳನ್ನು ಹೇಳಿಕೊಡುತ್ತದೆ.

ಜೆಎನ್‌ಎಲ್‌ ಲಲಿತ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಗಿರುವ ಶರ್ಮಾ ಅವರಿಗೆ ಧ್ಯಾನ, ಆಧ್ಯಾತ್ಮದಲ್ಲಿ ಆಸಕ್ತಿ. ಇದರೊಟ್ಟಿಗೆ ನಿರಾಶ್ರಿತರ ಕೇಂದ್ರಗಳಿಗೆ ದಾರಿ ತಪ್ಪಿ ಬಂದಿರುವವರನ್ನು ಗುರುತಿಸಿ ಅವರನ್ನು ತವರಿಗೆ ತಲುಪಿಸುವುದು ಶರ್ಮಾ ಅವರ ಮುಖ್ಯ ಗುರಿ.

ಶರ್ಮಾ ಅವರು ಈ ವರ್ಷ ಏಪ್ರಿಲ್‌ನಲ್ಲಿ ಶಿಮ್ಲಾದಲ್ಲಿರುವ ಮಾನಸಿಕ ರೋಗಿಗಳ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿದ್ದವರಿಗೆ ಧ್ಯಾನ ಕಲಿಸುತ್ತಿದ್ದರು. ಈ ವೇಳೆ ಪದ್ಮಾ ಎಂಬ ಮಹಿಳೆ ಅವರ ಕಣ್ಣಿಗೆ ಬಿದ್ದರು. ಸಾಮಾನ್ಯರಂತೆ ಇರುವ ಅವರು ಇಲ್ಲಿಗೆ ಹೇಗೆ ಬಂದರು ಎಂಬುದು ಅವರಿಗೆ ತಿಳಿಯಲಿಲ್ಲ. ಪದ್ಮಾರನ್ನು ಈ ಕುರಿತು ವಿಚಾರಿಸಿದಾಗ ಅವರು ವಿವರಿಸಿದ್ದು ಅರ್ಥವಾಗಲಿಲ್ಲ.

ಪದ್ಮಾರನ್ನು ತವರಿಗೆ ತಲುಪಿಸುವ ನಿಟ್ಟಿನಲ್ಲಿ ಶರ್ಮಾ ಅವರು ಕಳೆದ ಏಪ್ರಿಲ್‌ನಲ್ಲಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಒಂದು ವಿಡಿಯೊ ಮಾಡಿದ್ದರು. ಈ ವಿಡಿಯೊ ಹಿಮಾಚಲ ಪ್ರದೇಶದಾದ್ಯಂತ ಹರಿದಾಡಿದ ಪರಿಣಾಮ ಅಲ್ಲಿನ ಮುಖ್ಯಮಂತ್ರಿ ಜಯರಾಂ ಠಾಕೂರ್‌ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಪದ್ಮಾರನ್ನು ವಾಪಸ್‌ ತವರಿಗೆ ಕಳುಹಿಸುವ ಸಲುವಾಗಿ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಪೂರೈಸುವುದಾಗಿ ಭರವಸೆ ನೀಡಿದ್ದರು.

ಈ ವಿಚಾರದ ಕಾವೇರುತ್ತಿರುವ ನಡುವೆಯೇ ನಾಗಾಲ್ಯಾಂಡ್‌ನಲ್ಲಿ ನಡೆದ ಕಾರಾರ‍ಯಗಾರವೊಂದರಲ್ಲಿ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯ ವೈದ್ಯಕೀಯ ಸೂಪರಿಟೆಂಡ್‌ ಸಂಜಯ್‌ ಪಾಠಕ್‌ ಅವರು ಪಾಲ್ಗೊಂಡಿದ್ದರು. ಅದೃಷ್ಟವಶಾತ್‌ ರಾಜ್ಯದ ಮಾನಸಿಕ ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ರಜನಿ ಅವರೂ ಕೂಡ ಅಲ್ಲಿ ಉಪಸ್ಥಿತರಿದ್ದರು. ರಜನಿ ಅವರನ್ನು ಭೇಟಿಯಾದ ಪಾಠಕ್‌ ಅವರು ವಿಷಯ ತಿಳಿಸಿ, ಒಂದು ಪತ್ರವನ್ನು ರಜನಿ ಅವರ ಕೈಗಿತ್ತಿದ್ದರು. ಅಲ್ಲಿಂದ ಬಂದ ಉಪ ನಿರ್ದೇಶಕರು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗೆ ಪತ್ರ ಬರೆದು ಪದ್ಮಾ ಅವರ ಮೂಲ ಸ್ಥಳವನ್ನು ಪತ್ತೆಮಾಡಲು ಸೂಚಿಸಿದ್ದರು.

-----

ಓಡಿಹೋಗಲು ಯತ್ನಿಸಿದ್ದರು

ಪದ್ಮಾರನ್ನು ಮೊದಲು ಗುರುತಿಸಿದಾಗ ಅವರು ಖಿನ್ನರಾಗಿರುವುದು ಗೊತ್ತಾಯಿತು. ಆದರೂ, ಅಲ್ಲಿದ್ದ ರೋಗಿಗಳಿಗಿಂತ ಇವರು ವಾಸಿ ಎನ್ನುವಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದರು. ಅವರನ್ನು ಮಾತನಾಡಿಸಲು ಪ್ರಯತ್ನಿಸಲಾಯಿತಾದರೂ, ಅವರ ಭಾಷೆ ನಮಗೆ ಅರ್ಥವಾಗಲಿಲ್ಲ ಆದರೂ, ಅವರ ನೋವನ್ನು ನಾವು ಅರಿತೆವು.

ತನ್ನ ಸಂಕಟವನ್ನು ತೋಡಿಕೊಂಡರೂ ಭಾಷೆ ಸಮಸ್ಯೆಯಿಂದ ಅರ್ಥಮಾಡಿಕೊಳ್ಳಲಾಗದ ಜನರಿರುವೆಡೆ ಒಬ್ಬ ಮಹಿಳೆಗೆ ಎಂಥ ಏಕಾಂಗಿತನ ಕಾಡುತ್ತೆ ಎಂಬುದನ್ನು ಊಹಿಸಿಕೊಳ್ಳಲೂ ಅಸಾಧ್ಯ. ಅಂಥ ಪರಿಸ್ಥಿತಿಯಲ್ಲಿದ್ದ ಪದ್ಮಾ ಅವರು ಎರಡು ಬಾರಿ ಆಸ್ಪತ್ರೆಯಿಂದ ಓಡಿಹೋಗಲು ಯತ್ನಿಸಿದ್ದರು. ಶಾಕ್‌ ಟ್ರೀಟ್‌ಮೆಂಟ್‌ಅನ್ನೂ ಕೊಟ್ಟಿದ್ದರ ಪರಿಣಾಮವಾಗಿ ಅವರು ಒಂದು ರೀತಿಯ ಟ್ರಾಮಾಗೆ (ಆಘಾತ) ಜಾರಿದ್ದರು. ಇವರನ್ನು ತವರಿಗೆ ತಲುಪಿಸಬೇಕೆಂದು ನಮ್ಮ ಸಂಸ್ಥೆ ಪಣ ತೊಟ್ಟಿತ್ತು,'' ಎಂದು ಶರ್ಮಾ ವಿಕಗೆ ತಿಳಿಸಿದ್ದಾರೆ.

----- ------

ಯಶೋಗಾಥೆ

ಶರ್ಮಾ ಅವರ ಸಂಸ್ಥೆಯು ಈ ರೀತಿ ದಾರಿ ತಪ್ಪಿ ಬಂದಿರುವ ಅನೇಕ ರೋಗಿಗಳನ್ನು ವಾಪಸ್‌ ತವರಿಗೆ ಕಳುಹಿಸಿಕೊಟ್ಟಿದೆ. ಈಚೆಗೆ ಚೆನ್ನೈನ ಯುವಕನೊಬ್ಬನನ್ನು ವಾಪಸ್‌ ಮನೆಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ