ಆ್ಯಪ್ನಗರ

ಪಕ್ಷ ನಿಷ್ಠೆಗೆ ಒಲಿದ ಮೇಯರ್‌ ಸ್ಥಾನ

ಪಕ್ಷ ನಿಷ್ಠೆಗೆ ಒಲಿದ ಮೇಯರ್‌ ಸ್ಥಾನ ವಿಕ ಸುದ್ದಿಲೋಕ ಮೈಸೂರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಗಿ ಮೈಸೂರು ನಗರ ಪಾಲಿಕೆಯ ಉಪ ಮೇಯರ್‌ ಆಗಿದ್ದವರು, ಈಗ ...

Vijaya Karnataka 18 Nov 2018, 5:00 am
ಮೈಸೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಗಿ ಮೈಸೂರು ನಗರ ಪಾಲಿಕೆಯ ಉಪ ಮೇಯರ್‌ ಆಗಿದ್ದವರು, ಈಗ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೇಯರ್‌ ಆಗಿದ್ದಾರೆ.
Vijaya Karnataka Web pushpalatha jagannath got mysore mayor patta
ಪಕ್ಷ ನಿಷ್ಠೆಗೆ ಒಲಿದ ಮೇಯರ್‌ ಸ್ಥಾನ


ಪಾಲಿಕೆಯ ವಾರ್ಡ್‌ ನಂ.11ರ ಶಾಂತಿನಗರದಿಂದ ಸ್ಪರ್ಧಿಸಿರುವ ಪುಷ್ಪಲತಾ ಜಗನ್ನಾಥ್‌ ಅವರು ಮೈಸೂರು ನಗರ ಪಾಲಿಕೆಯ 21ನೇ ಮೇಯರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್‌ ನೀಡದೇ ಇದ್ದರೂ ಅನ್ಯ ಪಕ್ಷದಿಂದ ಅಥವಾ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೇ ಚುನಾವಣೆಯಿಂದ ಹಿಂದೆ ಸರಿದು, ಪಕ್ಷಕ್ಕೆ ನಿಷ್ಠೆ ತೋರಿದ್ದ ಪುಷ್ಪಲತಾ ಅವರನ್ನು ಗುರುತಿಸಿದ ಕಾಂಗ್ರೆಸ್‌ ವರಿಷ್ಠರು ಮೇಯರ್‌ ಹುದ್ದೆಯನ್ನು ನೀಡಿದ್ದಾರೆ.

ಆಲನಹಳ್ಳಿಯ ನಿವಾಸಿ, ಕಾಂಗ್ರೆಸ್‌ ಮುಖಂಡ ಜಗನ್ನಾಥ್‌ ಅವರ ಪತ್ನಿಯಾದ ಪುಷ್ಪಲತಾ(44) ಅವರು ವಕೀಲೆಯೂ ಆಗಿದ್ದಾರೆ.

ಕಾಂಗ್ರೆಸ್‌ನ ಸಕ್ರಿಯ ಕಾರ‍್ಯಕರ್ತ ಜಗನ್ನಾಥ್‌ ಅವರು ಹಾಲಿ ಡಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ದಶಕದ ಹಿಂದೆಯೇ ಪಾಲಿಕೆಯ ಚುನಾವಣೆಯಲ್ಲಿ ಒಮ್ಮೆ ಸ್ಪರ್ಧಿಸಿ ಸೋತಿದ್ದರು. ಆದರೆ ಛಲ ಬಿಡದೇ ಮುಂದಿನ ಬಾರಿ ಸ್ಪರ್ಧಿಸಲು ಯತ್ನಿಸಿದಾಗ ಮಹಿಳೆಗೆ ಮೀಸಲು ನಿಗದಿಯಾಗಿದ್ದರಿಂದ ತಮ್ಮ ಪತ್ನಿ ಪುಷ್ಪಲತಾ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದರು. ಈ ವೇಳೆ ಪುಷ್ಪಲತಾ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಅಯೂಬ್‌ ಖಾನ್‌ ಅವರು ಮೇಯರ್‌ ಆಗಲು ನೆರವಾದರು. ಮೊದಲ ಅವಧಿಯ ಮೂರನೇ ವರ್ಷದಲ್ಲಿ ಮೀಸಲು ಅವಕಾಶದಿಂದ ಅನಾಯಾಸವಾಗಿ ಒಲಿದ ಉಪ ಮೇಯರ್‌ ಹುದ್ದೆ ನಿರ್ವಹಿಸಿದರು.

ಮತ್ತೆ ಪಾಲಿಕೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿದ್ದರೂ ಪಕ್ಷದ ವರಿಷ್ಠರ ಸೂಚನೆಯಂತೆ ತಾವು ಸ್ಪರ್ಧಿಸಬೇಕೆಂದಿದ್ದ ವಾರ್ಡ್‌ನಿಂದ ಪಕ್ಷ ಕ್ಷಣಕ್ಕಿಳಿಸಿದ ಮತ್ತೊಬ್ಬ ಅಭ್ಯರ್ಥಿಯ ಗೆಲುವಿಗೆ ನೆರವಾದರು. ಈ ವೇಳೆ ಕಾನೂನು ವಿಷಯದಲ್ಲಿ ಪದವಿ ಪಡೆಯಬೇಕೆಂಬ ಆಸೆಯಿಂದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಐದು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರ್ಪಡೆಯಾಗಿ ಪದವಿ ಪಡೆದರು. ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ್ದತೆ ನಡೆಸಿರುವಾಗಲೇ ವಾರ್ಡ್‌ಗಳ ಮರು ವಿಂಗಡಣೆಯಿಂದ ಚಾಮರಾಜ ಕ್ಷೇತ್ರದಲ್ಲಿದ್ದ ತಮ್ಮ ವಾರ್ಡ್‌ನಿಂದ ಎನ್‌.ಆರ್‌. ಕ್ಷೇತ್ರದಲ್ಲಿದ್ದ ಹೊಸ ವಾರ್ಡ್‌ ಆಯ್ಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪಾಲಿಕೆ ಸದಸ್ಯರಾಗುವುದರೊಂದಿಗೆ ಪಕ್ಷದ ವರಿಷ್ಠರ ಸೂಚನೆಯಂತೆ ಮೊದಲ ಬಾರಿಗೆ ಮೇಯರ್‌ ಕೂಡ ಆಗಿದ್ದಾರೆ. ಇವರ ಪತಿ ಜಗನ್ನಾಥ್‌ ಉದ್ಯಮಿಯಾಗಿದ್ದು, ದಂಪತಿಗೆ ಶಿವಕಾರ್ತಿಕೇಯನ್‌ ಮತ್ತು ಭರತೇಶ್‌ ಹೆಸರಿನ ಇಬ್ಬರು ಪುತ್ರರಿದ್ದಾರೆ.

ಮೈಸೂರು ನಗರವನ್ನು ಸ್ವಚ್ಛತೆಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ತರುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸೇರಿ ಕಾರ್ಯ ನಿರ್ವಹಿಸುತ್ತೇನೆ. ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮೈಸೂರು ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿತ್ತು. ಅದು ಬಳಕೆಯಾಗದೇ ಉಳಿದಿದ್ದು, ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು.
- ಪುಷ್ಪಲತಾ ಜಗನ್ನಾಥ್‌, ನೂತನ ಮೇಯರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ