ಆ್ಯಪ್ನಗರ

ಶಿವರಾಜ್‌ ಕುಮಾರ್‌ ಅವರನ್ನ ಒಮ್ಮೆ ತೋರಿಸಿ ಪ್ಲೀಸ್‌...

ನಾ ಸಾಯುವ ಮುನ್ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರನ್ನ ಒಮ್ಮೆ ತೋರಿಸಿ ಪ್ಲೀಸ್‌...

ವಿಕ ಸುದ್ದಿಲೋಕ 5 Mar 2017, 10:36 am
ಹರೀಶ ಎಲ್‌. ತಲಕಾಡು
Vijaya Karnataka Web show me shivarajkumar pleas bed ridden kid
ಶಿವರಾಜ್‌ ಕುಮಾರ್‌ ಅವರನ್ನ ಒಮ್ಮೆ ತೋರಿಸಿ ಪ್ಲೀಸ್‌...


ಮೈಸೂರು: ನಾ ಸಾಯುವ ಮುನ್ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರನ್ನ ಒಮ್ಮೆ ತೋರಿಸಿ ಪ್ಲೀಸ್‌...

ಎರಡು ಕಿಡ್ನಿಗಳನ್ನು ಕಳೆದುಕೊಂಡು ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಸಾವಿನ ದಿನಗಳನ್ನು ಎಣಿಸುತ್ತಿರುವ ಯುವಕನ ಕಡೆಯ ಆಸೆ ಇದು.

ಎಚ್‌.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ 19 ವರ್ಷದ ಜಯಕುಮಾರ್‌ ಎಂಬುವವರೇ ನಟ ಶಿವರಾಜ್‌ ಕುಮಾರ್‌ ಅವರನ್ನು ನೋಡುವ ಹಂಬಲದಲ್ಲಿ ದಿನದೂಡುತ್ತಿದ್ದಾರೆ.

ಬಾಲ್ಯದಿಂದಲೂ ನಟ ಶಿವರಾಜ್‌ ಕುಮಾರ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದ ಜಯಕುಮಾರ್‌ ಅವರಂತೆಯೇ ನಟನೆ ಮಾಡುತ್ತಿದ್ದರು. ಅವರ ಪೋಟೋ ನೋಡಿಯೇ ಊಟ ಮಾಡುತ್ತಿದ್ದರು. ನಟ ಶಿವರಾಜ್‌ ಕುಮಾರ್‌ ಅವರಂತೆಯೇ ಅವರ ಮಾವ ಕೂಡ ಕಾಣುತ್ತಿದ್ದದ್ದು, ಜಯಕುಮಾರ್‌ಗೆ ಶಿವರಾಜ್‌ ಕುಮಾರ್‌ ಮೇಲೆ ಮತ್ತಷ್ಟು ಅಭಿಮಾನ ಹೆಚ್ಚಾಗುವಂತೆ ಮಾಡಿತ್ತು. ತಾನು ಇನ್ನು ಕೆಲದಿನ ಮಾತ್ರ ಬದುಕುವುದು ಎಂದು ತಿಳಿದಿರುವ ಜಯಕುಮಾರ್‌, ಸಾಯುವುದರೊಳಗಾಗಿ ಹೇಗಾದರೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮುಖ ನೋಡಬೇಕೆಂಬ ಹಂಬಲದಿಂದ ಕಾಯುತ್ತಿದ್ದಾರೆ.

ಗ್ರಾಮದ ಮಂಜುಳಾ ಅವರ ಪುತ್ರ ಜಯಕುಮಾರ್‌ಗೆ ಕಳೆದ 5 ವರ್ಷಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಈಗ ಕಿಡ್ನಿ ವೈಫಲ್ಯಕ್ಕೆ ಬಂದು ನಿಂತಿದೆ.

ಪತಿಯಿಂದ ದೂರವಾಗಿರುವ ಮಂಜುಳ ಹೂ ಮಾರಿ ಜೀವನ ಸಾಗಿಸುತ್ತಿದ್ದು, ಇಲ್ಲಿವರೆಗೆ ಲಕ್ಷಾಂತರ ಹಣ ಖರ್ಚು ಮಾಡಿ ಮಗನನ್ನು ಬದುಕಿಸಲು ಹೋರಾಡಿದ್ದಾರೆ. ಈಗ ತನ್ನ ಮಗನ ಪ್ರಾಣಕ್ಕಿಂತ ತನ್ನ ಪ್ರಾಣ ಹೆಚ್ಚಲ್ಲವೆಂದು ಭಾವಿಸಿರುವ ಮಂಜುಳಾ ಕಿಡ್ನಿ ನೀಡಲು ತಾವೇ ಮುಂದೆ ಬಂದಿದ್ದಾರೆ. ಆದರೆ ಅದಕ್ಕೆ 20 ಲಕ್ಷದಷ್ಟು ಹಣ ಖರ್ಚಾಗುತ್ತಿದ್ದು, ಯಾರಾದರೂ ದಾನಿಗಳು ಹಣ ನೀಡಿ ತನ್ನ ಮಗನನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.

ನಿಮ್ಮಲ್ಲಿ ಯಾರಾದರೂ ಇವರಿಗೆ ಸಹಾಯ ಮಾಡಲು ಮನಸ್ಸಿದ್ದವರು, ತಾಯಿ ಮಂಜುಳಾ ಅವರ ಕರ್ನಾಟಕ ಬ್ಯಾಂಕ್‌ ಬೋಗಾದಿ ಶಾಖೆಯ ಅಕೌಂಟ್‌ ನಂಬರ್‌-5192500101738701ಗೆ ಹಣದ ಸಹಾಯ ಮಾಡಬಹುದಾಗಿದೆ. ದೂ.8197058814.

--------

ಇನ್ನು ಒಂದೇ ವಾರ ಬದುಕುವುದು. ಸಾಯುವುದರೊಳಗಾಗಿ ಹೇಗಾದರೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನೋಡಬೇಕೆಂಬ ಆಸೆಯಿದೆ. ನಿಮಗೆ ಹಣ ನೀಡಲು ಸಾಧ್ಯವಾದರೆ ನನ್ನನ್ನ ಉಳಿಸಿಕೊಳ್ಳಿ. ಇಲ್ಲವಾದರೆ ಕಡೇ ಪಕ್ಷ ನಾನು ಸಾಯುವುದರೊಳಗಾಗಿ ಅವರನ್ನು ನನಗೆ ತೋರಿಸಿ.

-ಜಯಕುಮಾರ್‌, ಶಿವರಾಜ್‌ ಕುಮಾರ್‌ ಅಭಿಮಾನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ