ಆ್ಯಪ್ನಗರ

ಇಡೀ ಶಾಲೆಗೆ ಒಬ್ಬ ವಿದ್ಯಾರ್ಥಿನಿ!

ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಇರುವುದು ಒಬ್ಬಳೇ ವಿದ್ಯಾರ್ಥಿನಿ. ಶಿಕ್ಷಕರು ಮಾತ್ರ ಇಬ್ಬರು !

Vijaya Karnataka 1 Sep 2018, 7:43 am
ಮಣಿಕಂಠ ಸಿ.ಆರ್‌. ಚುಂಚನಕಟ್ಟೆ : ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಇರುವುದು ಒಬ್ಬಳೇ ವಿದ್ಯಾರ್ಥಿನಿ. ಶಿಕ್ಷಕರು ಮಾತ್ರ ಇಬ್ಬರು !
Vijaya Karnataka Web School


ಇದು ಚುಂಚನಕಟ್ಟೆ ಸಮೀಪದ, ಕೃಷ್ಣರಾಜನಗರ ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಎರೆಮನುಗನಹಳ್ಳಿ ಗಡಿಗ್ರಾಮದಲ್ಲಿನ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ದುಸ್ಥಿತಿ. ಈ ಗ್ರಾಮದಲ್ಲಿ ಸುಮಾರು 1500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಅಂಗನವಾಡಿ ಕೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜತೆಗೆ ಉರ್ದು ಶಾಲೆ ಕೂಡ ಇದೆ. ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮುಸ್ಲಿಂ ಕುಟುಂಬವಿದೆ. ಆ ಮಕ್ಕಳ ಉರ್ದು ಶಿಕ್ಷಣಕ್ಕೆಂದು ಸರಕಾರ ಸುಮಾರು 50 ವರ್ಷಗಳ ಹಿಂದೆ ಶಾಲೆ ನಿರ್ಮಿಸಿತ್ತು. ಹಿಂದೆ ಈ ಶಾಲೆಯಲ್ಲಿ ಸುಮಾರು 30ರಿಂದ 40 ಮಕ್ಕಳು 1ರಿಂದ 5 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಸರಿಯಾದ ಶಿಕ್ಷಣ ಮತ್ತು ಸೌಲಭ್ಯ ಇಲ್ಲದ ಕಾರಣ ದಾಖಲಾತಿ ಕಡಿಮೆಯಾಗಿ ಕಳೆದ ವರ್ಷದಿಂದ ಕೇವಲ ಒಬ್ಬ ವಿದ್ಯಾರ್ಥಿನಿಗೆ ಇಬ್ಬರು ಮೇಷ್ಟ್ರು ಪಾಠ ಹೇಳುವಂತಾಗಿದೆ.

ಸರಕಾರ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳೆಡೆಗೆ ಸೆಳೆಯುವ ಸಲುವಾಗಿ ಹಲವು ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದ್ದರೂ ಗುಣಾತ್ಮಕ ಶಿಕ್ಷಣವಿಲ್ಲದ ಕಾರಣ ಬೇರೆ ಶಾಲೆಗಳಿಗೆ ಸೇರಿಸುವಂತಾಗಿದೆ ಎಂದು ಪೋಷಕರು ಆರೋಪಿಸುತ್ತಾರೆ.

ಒಬ್ಬಳೇ ವಿದ್ಯಾರ್ಥಿನಿ:
ಈ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಸವಲತ್ತು ಸಿಗದ ಕಾರಣ ಸುಮಾರು 15ರಿಂದ 20 ಮಕ್ಕಳನ್ನು ಪಕ್ಕದ ಶಾಲೆಗಳು ಹಾಗೂ ಪಿರಿಯಾಪಟ್ಟಣ ತಾಲೂಕಿನ ಖಾಸಗಿ ಶಾಲೆಗೆ ಸೇರಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು. ಪ್ರಸ್ತುತ ಈ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು 3ನೇ ತರಗತಿ ಓದುತ್ತಿದ್ದಾಳೆ. ಈ ಒಬ್ಬ ವಿದ್ಯಾರ್ಥಿನಿಗೆ ಉರ್ದು ಶಿಕ್ಷಕಿ ಮತ್ತು ಕನ್ನಡ ಶಿಕ್ಷಕರು ನಿತ್ಯ ಶಿಕ್ಷಣ ನೀಡುತ್ತಿದ್ದಾರೆ.

ನಿರ್ಲಕ್ಷ್ಯ ಕಾರಣ?: ''ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂದು ಜಾಥಾ, ಇಲ್ಲವೇ ಪೋಷಕರಲ್ಲಿ ಪ್ರೇರೇಪಿಸುವ ಕಾರ್ಯ ಮಾಡದೆ ಶಿಕ್ಷಣ ಇಲಾಖೆ ತಾತ್ಸಾರ ಮನೋಭಾವ ತೋರುತ್ತಿರುವುದರಿಂದ ಮಕ್ಕಳ ಹಾಜರಾತಿ ಕಡಿಮೆ ಆಗಿದೆ,'' ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿನಿ ಅನಾರೋಗ್ಯ ಹಾಗೂ ಇನ್ನಿತರ ಕಾರಣದಿಂದ ಶಾಲೆಗೆ ರಜೆ ಹಾಕಿದರೆ ಮತ್ತೆ ಶಾಲೆಗೆ ಮರಳಿ ಬರುವವರೆಗೂ ಶಾಲೆಗೆ ಹಾಗೂ ಶಿಕ್ಷಕರಿಗೆ ರಜೆ ಕೊಡುವಂತಹ ಸ್ಥಿತಿ.

ಮೊದಲು ಸೌಲಭ್ಯಗಳು ಇಲ್ಲದಿದ್ದರೂ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈಗ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ, ಉಚಿತ ಸವಲತ್ತು ದೊರೆಯುತ್ತಿದೆ. ಆದರೂ ಈ ಶಾಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಿಯಾದ ವಿದ್ಯಾಭ್ಯಾಸ ದೊರಕುತ್ತಿಲ್ಲ. ಹಾಗಾಗಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ -ಸಯ್ಯದ್‌ ಅಖಿಲ್‌, ಎಸ್‌ಡಿಎಂಸಿ ಮಾಜಿ ಸದಸ್ಯ, ಎರೆಮನುಗನಹಳ್ಳಿ ಗ್ರಾಮ.

ಶಾಲೆ ಬಗ್ಗೆ ಗಮನಕ್ಕೆ ಬಂದಿದೆ. ಉರ್ದು ಶಾಲೆ ಆದ ಕಾರಣ ಒಬ್ಬರೇ ಮಕ್ಕಳಿದ್ದರೂ ಶಾಲೆ ನಡೆಸುವ ಅನಿವಾರ್ಯತೆ ಇದೆ. ಜತೆಗೆ ನಮ್ಮ ಇಲಾಖೆಯ ಸಿಬ್ಬಂದಿ ಜತೆ ಚರ್ಚಿಸಲಾಗಿದ್ದು, ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇವೆ. ವಿದ್ಯಾರ್ಥಿನಿಯ ಪೋಷಕರು ಕನ್ನಡ ಶಾಲೆಗೆ ಸೇರಿಸಿದರೆ ಶಿಕ್ಷಕರನ್ನು ಖಾಲಿ ಇರುವ ಶಾಲೆಗಳಿಗೆ ಹಾಕಲಾಗುವುದು -ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷ್ಣರಾಜನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ