ಆ್ಯಪ್ನಗರ

ಸುತ್ತೂರಿನಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ

ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಸುತ್ತೂರಿನ ಸುಮಾರು 25 ಎಕರೆ ಪ್ರದೇಶದಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ ಸ್ಥಾಪನೆಯಾಗಲಿದೆ.

Vijaya Karnataka 25 Jun 2019, 5:00 am
ಕೇಂದ್ರ, ರಾಜ್ಯ ಸರಕಾರದಿಂದ 200 ಕೋಟಿ ರೂ. ಯೋಜನೆ
Vijaya Karnataka Web south indias first science city at sutturu
ಸುತ್ತೂರಿನಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ

ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರಿಂದ ಸ್ಥಳ ಪರಿಶೀಲನೆ

ಮೈಸೂರು:
ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಸುತ್ತೂರಿನ ಸುಮಾರು 25 ಎಕರೆ ಪ್ರದೇಶದಲ್ಲಿ ದಕ್ಷಿಣ ಭಾರತದ ಮೊದಲ ಸೈನ್ಸ್‌ ಸಿಟಿ ಸ್ಥಾಪನೆಯಾಗಲಿದೆ.

ಇದಕ್ಕಾಗಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಸುತ್ತೂರಿನಲ್ಲಿ ಸೋಮವಾರ ಸ್ಥಳ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳೊಡನೆ ಸಭೆ ನಡೆಸಿದ ಅವರು, ಸೈನ್ಸ್‌ ಸಿಟಿ ಕುರಿತು ದಾಖಲೆ ಹಾಗೂ ಯೋಜನೆಯ ನೀಲ ನಕ್ಷೆಯನ್ನು ಪರಿಶೀಲಿಸಿದರು.

ಸುದ್ದಿಗಾರರಿಗೆ ಯೋಜನೆಯ ವಿವರ ನೀಡಿದ ಅವರು, ''ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಆರಂಭವಾಗಲಿದೆ. ಒಟ್ಟು 200 ಕೋಟಿ ರೂ.ಗಳ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ 97 ಕೋಟಿ ರೂ.ಗಳನ್ನು ಭರಿಸಲಿವೆ. ದಕ್ಷಿಣ ಭಾರತದಲ್ಲಿಯೇ ಮೊದಲ ಯೋಜನೆ ಇದಾಗಿದ್ದು, ಸುತ್ತೂರು ಶ್ರೀಗಳು 25 ಎಕರೆ ಪ್ರದೇಶವನ್ನು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಶೈಕ್ಷಣಿಕ ಕ್ಷೇತ್ರಕ್ಕೆ ಜೆಎಸ್‌ಎಸ್‌ ಮಹಾನ್‌ ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸುತ್ತೂರಿನಲ್ಲಿ ಸೈನ್ಸ್‌ ಸಿಟಿ ಆರಂಭಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ನೀಲನಕ್ಷೆಯನ್ನು ತಯಾರಿಸಲಾಗಿದ್ದು, ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಅಲ್ಲಿಂದ ಒಪ್ಪಿಗೆ ಬಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ'' ಎಂದು ಹೇಳಿದರು.

''ಒಟ್ಟು ಐದು ವರ್ಷಗಳ ಯೋಜನೆ ಇದಾಗಿದೆ. ಇತ್ತೀಚೆಗೆ ಪೋಷಕರಿಗೆ ತಮ್ಮ ಮಕ್ಕಳು ಡಾಕ್ಟರ್‌ ಇಲ್ಲವೇ ಎಂಜಿನಿಯರ್‌ ಆಗಬೇಕು ಎಂದೇ ಬಯಸುತ್ತಾರೆ. ಆದರೆ, ವಿಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಯೋಜನೆಯ ಮುಖ್ಯ ಉದ್ದೇಶ. ಸೈನ್ಸ್‌ ಸಿಟಿಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಅಡಗಿರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿಜ್ಞಾನದ ಮಾಹಿತಿ ದೊರಕುವುದರಿಂದ ಅವರಿಗೆ ತಮ್ಮ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಪ್ರಯೋಜನವಾಗುತ್ತದೆ'' ಎಂದು ಹೇಳಿದರು.

ಎಲ್ಲಾ ಜಿಲ್ಲೆಗಳಲ್ಲಿ ಸೈನ್ಸ್‌ ಸೆಂಟರ್‌

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ಸೈನ್ಸ್‌ ಸಿಟಿ ಆರಂಭವಾದರೆ, ಎರಡು ಜಿಲ್ಲೆಗಳಲ್ಲಿ ರೀಜನಲ್‌ ಸೈನ್ಸ್‌ ಸೆಂಟರ್‌ ಹಾಗೂ ಉಳಿದೆಡೆಗಳಲ್ಲಿ ಸೈನ್ಸ್‌ ಸೆಂಟರ್‌ಗಳನ್ನು ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಈಗಾಗಲೇ ಮಂಗಳೂರು ಹಾಗೂ ಧಾರವಾಡದಲ್ಲಿ ರೀಜನಲ್‌ ಸೈನ್ಸ್‌ ಸೆಂಟರ್‌ ಮಾಡಿದ್ದೇವೆ. ಉಳಿದಂತೆ 19 ಜಿಲ್ಲೆಗಳಲ್ಲಿ ಸೈನ್ಸ್‌ ಸೆಂಟರ್‌ ಆರಂಭಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.

ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ಉನ್ನತಾಧಿಕಾರಿ ಸಿ.ಬಿ.ರಿಷ್ಯಂತ್‌, ಜೆಎಸ್‌ಎಸ್‌ ವಿವಿಯ ಕುಲಪತಿ ಸುರೇಶ್‌, ಜೆಎಸ್‌ಎಸ್‌ ವಿದ್ಯಾಪೀಠದ ಕಾರ‍್ಯ ನಿರ್ವಾಹಕ ಕಾರ‍್ಯದರ್ಶಿ ಬೆಟಸೂರಮಠ ಮುಂತಾದವರು ಉಪಸ್ಥಿತರಿದ್ದರು.

-------------

ಎಲ್ಲಿ ಸ್ಥಾಪನೆಯಾಗಲಿದೆ?

- ಮೈಸೂರಿನಿಂದ 28 ಕಿ.ಮೀ ದೂರದ ಸುತ್ತೂರಿನಲ್ಲಿ ಕೇಂದ್ರ

- ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಭಾಗಿತ್ವ

- ತಲಾ 97 ಕೋಟಿ ರೂ.ಗಳನ್ನು ನೀಡಲಿವೆ. ಒಟ್ಟಾರೆ 200 ಕೋಟಿ ರೂ.ಗಳ ಯೋಜನೆ.

- ಪೂರ್ಣಗೊಳ್ಳಲು 5 ವರ್ಷದ ಅಂದಾಜು

-----------

ಏನೇನು ಇರಲಿದೆ?

ವಿಜ್ಞಾನದ ಮಾದರಿಗಳು, ವಸ್ತುಪ್ರದರ್ಶನ, ತಾರಾಲಯ, ಖಗೋಳಕ್ಕೆ ಸಂಬಂಧಪಟ್ಟ ಮಾಹಿತಿ, ಭೂವಿಜ್ಞಾನ ಸೇರಿದಂತೆ ವಿವಿಧ ವಿಭಾಗಗಳಿರುತ್ತವೆ. ಮಾಹಿತಿ ಮಾತ್ರವಲ್ಲದೆ ಅಲ್ಲಿ ಉಪನ್ಯಾಸ, ಮಾರ್ಗದರ್ಶನ, ಕಮ್ಮಟ ಸೇರಿದಂತೆ ನಿರಂತರ ಕಾರ್ಯಕ್ರಮಗಳು ಜರುಗುತ್ತವೆ.

ನಿರ್ವಹಣೆ

ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸಲಾಗುತ್ತಿದೆ. ಸೈನ್ಸ್‌ ಸಿಟಿ ನಿರ್ಮಾಣವಾಗಿ ಹಸ್ತಾಂತರಿಸಿದ ನಂತರ ಈ ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಇದು ಮಾಹಿತಿ ಕೇಂದ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಬದಲಾಗಲಿದೆ. ಕನಿಷ್ಠ ಟಿಕೆಟ್‌ ದರ ನೀಡಿ ಯಾರು ಬೇಕಾದರೂ ಸೈನ್ಸ್‌ಸಿಟಿ ಪ್ರವೇಶಿಸಬಹುದು. ವಿಜ್ಞಾನದ ಅಚ್ಚರಿಗಳು, ಅನುಭಗಳು, ಸಂಶೋಧನೆಗಳು, ಚಿತ್ರ ಪ್ರದರ್ಶನ, ಆಡಿಯೋ ವೀಡಿಯೋ ಪ್ರೆಸಂಟೇಷನ್‌ಗಳು, ಸಾಕ್ಷ್ಯ ಚಿತ್ರಗಳು, ಮ್ಯೂಸಿಯಂ ಸೇರಿದಂತೆ ವಿವಿಧ ಮಾಧ್ಯಮದ ಮುಖಾಂತರ ಪರಿಚಯಿಸಿಕೊಳ್ಳಲು ಅವಕಾಶ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ