ಆ್ಯಪ್ನಗರ

ಪರೀಕ್ಷೆ ಒಂದು ಹಬ್ಬ.. ಸಂಭ್ರಮಿಸಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. 21ರಿಂದ ಏ.4ರವರೆಗೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Vijaya Karnataka 20 Mar 2019, 8:51 pm
ಮೈಸೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. 21ರಿಂದ ಏ.4ರವರೆಗೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
Vijaya Karnataka Web sslc examination
ಪರೀಕ್ಷೆ ಒಂದು ಹಬ್ಬ.. ಸಂಭ್ರಮಿಸಿ


ಮೈಸೂರು ನಗರ ಸೇರಿದಂತೆ ಜಿಲ್ಲೆಯ 138 ಕೇಂದ್ರಗಳಲ್ಲಿ 39,173 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

36,463 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗಲಿದ್ದು, 18,283 ಬಾಲಕರು ಮತ್ತು 18,180 ಬಾಲಕಿಯರು. 2,074 ಪುನರಾವರ್ತಿತ ಮತ್ತು 636 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮೈಸೂರು ನಗರದಲ್ಲಿ 48 ಪರೀಕ್ಷಾ ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ 90 ಕೇಂದ್ರಗಳು ಸೇರಿ ಒಟ್ಟು 138 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 257 ಸರಕಾರಿ ಶಾಲೆಗಳು, 126 ಅನುದಾನಿತ ಶಾಲೆಗಳು, 264 ಅನುದಾನ ರಹಿತ ಶಾಲೆಗಳು ಸೇರಿವೆ.

ಸಿಸಿ ಟಿವಿ ಕಣ್ಗಾವಲು: ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ 'ಸ್ಮಾರ್ಟ್‌ ವಾಚ್‌ ಮತ್ತು ಮೊಬೈಲ್‌ ಫೋನ್‌' ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್‌ ಸುತ್ತಳತೆಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಜೆರಾಕ್ಸ್‌ ಕೇಂದ್ರಗಳನ್ನು ಬಂದ್‌ ಮಾಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳ ಸುರಕ್ಷ ತೆಗೆ ಪ್ರತಿ ಜಿಲ್ಲಾ ಖಜಾನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಜಾಗೃತ ದಳ ರಚನೆ: ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸ್ಥಾನಿಕ ಜಾಗೃತ ದಳ ಕಾರ್ಯನಿರ್ವಹಿಸಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕ್ರಮ ವಹಿಸಲಾಗಿದೆ. ಇದರೊಂದಿಗೆ ಜಿಲ್ಲಾಮಟ್ಟದಲ್ಲಿ ಮೂರು ಮತ್ತು ತಾಲೂಕು ಮಟ್ಟದಲ್ಲಿ ಮೂರು ಜಾಗೃತ ದಳಗಳು ಪರೀಕ್ಷಾ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ ತಿಳಿಸಿದರು.

ಪ್ರವೇಶ ಪ್ರತಿ: ಪರೀಕ್ಷೆ ಬರೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ನೆಲಮಹಡಿಯಲ್ಲೇ ಆಸನ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಹಾಲ್‌ ಟಿಕೆಟ್‌ ಪೂರೈಕೆ ಮಾಡಲಾಗಿದೆ. ಆಕಸ್ಮಿಕವಾಗಿ ಹಾಲ್‌ ಟಿಕೆಟ್‌ ಕಳೆದುಹೋದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಫಲಿತಾಂಶ ಸುಧಾರಣೆಗೆ ಕ್ರಮ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು 'ವಿಜಯ ಕರ್ನಾಟಕ' ಸಹಯೋಗದಲ್ಲಿ ವಿಜಯೀಭವ ಪರೀಕ್ಷಾ ಒತ್ತಡ ನಿವಾರಣಾ ಕಾರ್ಯಾಗಾರ ಸೇರಿದಂತೆ ನಾನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ಜೂನ್‌ನಿಂದಲೇ ವಿಶೇಷ ತರಗತಿ ನಡೆಸಲಾಗಿದೆ. ನಿತ್ಯ ತರಗತಿ ಆರಂಭವಾಗುವುದಕ್ಕೆ ಒಂದು ಗಂಟೆ ಮುಂಚೆ, ಶಾಲೆ ಮುಗಿದ ಬಳಿಕ ಒಂದು ಗಂಟೆ ವಿಶೇಷ ತರಗತಿ ನಡೆದಿವೆ. ಕಾರ್ಯಕ್ಷ ಮತೆಯಲ್ಲಿ ಹಿಂದಿರುವ ಮಕ್ಕಳನ್ನು ಆಯ್ದುಕೊಂಡು ಪಾಠ ಹೇಳಿಕೊಡಲಾಗಿದೆ. ಮನೆ, ಮನೆಗೆ ತೆರಳಿ ಮಕ್ಕಳಿಗೆ ಓದುವಂತೆ ಪ್ರೇರೇಪಿಸುವ ಜತೆಗೆ ವಾಟ್ಸ್‌ ಆ್ಯಪ್‌ ಬಳಸಿಕೊಂಡು ಪಾಲಕರೊಂದಿಗೆ ಸಂಪರ್ಕ ಇರಿಸಿಕೊಳ್ಳಲಾಗಿದೆ. ಈ ಎಲ್ಲಾ ಯೋಜನೆ, ಕಾರ್ಯಕ್ರಮಗಳಿಂದ ಫಲಿತಾಂಶದಲ್ಲಿ ಸುಧಾರಣೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಎಸ್‌ಎಲ್‌ಎಲ್‌ಸಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲಾ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯಲ್ಲಿ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ನಕಲು ತಡೆಗೆ ವಿಶೇಷವಾಗಿ ಜಾಗೃತ ದಳಗಳನ್ನು ರಚಿಸಲಾಗಿದ್ದು, ಎಲ್ಲಾ ಕೇಂದ್ರಗಳಲ್ಲೂ ಕಾರ್ಯಾಚರಣೆ ನಡೆಸಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ.

-ಪಾಂಡುರಂಗ, ಡಿಡಿಪಿಐ.


ಮೈಸೂರು ನಗರ ಸೇರಿದಂತೆ ಜಿಲ್ಲೆಯ 138 ಪರೀಕ್ಷಾ ಕೇಂದ್ರಗಳಲ್ಲಿ ಮಾ.21ರಿಂದ ಏಪ್ರಿಲ್‌ 4ರವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಜೆರಾಕ್ಸ್‌ ಕೇಂದ್ರಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

- ಕೆ.ಟಿ.ಬಾಲಕೃಷ್ಣ, ನಗರ ಪೊಲೀಸ್‌ ಆಯುಕ್ತರು. ಅಮಿತ್‌ ಸಿಂಗ್‌, ಎಸ್ಪಿ.

ಪರೀಕ್ಷಾ ವಿಶೇಷ:

ಪರೀಕ್ಷಾ ಕೇಂದ್ರಗಳು-138

ನಗರ ಪ್ರದೇಶ-48.

ಗ್ರಾಮಾಂತರ ಪ್ರದೇಶ-90

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ-39,173

ಬಾಲಕರು -18,283

ಬಾಲಕಿಯರು- 18,180.

ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ-2074

ಖಾಸಗಿ ವಿದ್ಯಾರ್ಥಿಗಳ ಸಂಖ್ಯೆ-636

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ