ಆ್ಯಪ್ನಗರ

ಮೈಸೂರಿನಲ್ಲಿ ವಚನ ಸಂಗೀತ ವೈಭವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ವಚನ ಸಂಗೀತೋತ್ಸವಕ್ಕೆ ಶನಿವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿಕ ಸುದ್ದಿಲೋಕ 28 Feb 2016, 4:00 am
* ಮನ ಸೆಳೆದ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಲ್ಲಮ ಪ್ರಭು ವಚನಗಳ ಗಾಯನ
Vijaya Karnataka Web the oath of musical glory
ಮೈಸೂರಿನಲ್ಲಿ ವಚನ ಸಂಗೀತ ವೈಭವ


ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ವಚನ ಸಂಗೀತೋತ್ಸವಕ್ಕೆ ಶನಿವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದ ಆವರಣದಲ್ಲಿ ನಡೆದ ಎರಡನೇ ದಿನದ ವಚನ ಗಾಯನದಲ್ಲಿ ಮೊದಲಿಗೆ ಬಾಗಲಕೋಟೆಯ ಆನಂದಕುಮಾರ ಕಂಬಳಿಹಾಳ ಅವರು ಆಯ್ದಕ್ಕಿ ಲಕ್ಕಮ್ಮ, ಮೇದಾರ ಕೇತಯ್ಯ, ಕೆಂಭಾವಿ ಭೋಗಯ್ಯ ಮೊದಲಾದವರ ವಚನವನ್ನು ಪ್ರಸ್ತುತ ಪಡಿಸಿದರು. ಇದೇ ವೇಳೆ ಆಸಕ್ತರು ವಚನಗಳ ಸಾರವನ್ನು ಸಂಗೀತದ ಮೂಲಕ ಅರಿಯುವ ಯತ್ನ ಮಾಡಿದರು.

ಬಳಿಕ ಕಲಬುರ್ಗಿಯ ಶಂಕರ್ ಹೂಗಾರ ಅವರು ಸಿದ್ದರಾಮೇಶ್ವರ, ಅಲ್ಲಮ ಪ್ರಭು, ಮೇದಾರ ಕೇತಯ್ಯ ಅವರ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇದೇ ವೇಳೆ ಮಾನ್ವಿಯ ಅಂಬಯ್ಯ ನುಲಿ ಅವರು ಗಜೇಶ ಮಸಣಯ್ಯ, ಸತ್ಯಕ್ಕ, ಕಾಳವ್ವೆ, ಅಂಬಿಗರ ಚೌಡಯ್ಯ, ಸುರದ ನಾಗಣ್ಣ ಮೊದಲಾದವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಂಗೀತಾಸಕ್ತರ ಮನ ಗೆದ್ದರು.

ಮಧ್ಯಾಹ್ನದ ಬಳಿಕ ಶ್ವೇತಾಕುಮಾರಿ ಅವರಿಂದ ಬಸವಣ್ಣ, ಅಕ್ಕಮಹಾದೇವಿ ಅವರ ವಚನ, ವೀರಭದ್ರಯ್ಯ ಹಿರೇಮಠ ಅವರಿಂದ ಜೇಡರ ದಾಸಿಮಯ್ಯ, ಚನ್ನಬಸವಣ್ಣ, ಅಲ್ಲಮಪ್ರಭು ದೇವರ ವಚನಗಳು ಪ್ರಸ್ತುತಗೊಂಡವು. ಇದೇ ವೇಳೆ ಸಂಜೆ ಬೆಂಗಳೂರಿನ ಪ್ರಯೋಗ ತಂಡದಿಂದ ‘ಅಂಬಿಗರ ಚೌಡಯ್ಯ’ ವಚನ ರೂಪಕ ಪ್ರಸ್ತುತಗೊಂಡಿತು. ಬಳಿಕ ಸುಮಾ ವಿಜಯ ಮತ್ತು ತಂಡದಿಂದ ವಚನ ವೈಭವ ನೃತ್ಯರೂಪಕ, ಡಾ.ಎಂ.ಎಂ.ಕಲಬುರ್ಗಿ ಅವರ ರಚನೆಯ ನಾಟಕ ‘ಕೆಟ್ಟಿತ್ತು ಕಲ್ಯಾಣ’ ಪ್ರದರ್ಶನಗೊಂಡಿತು.

ವಚನ ಸಂಗೀತೋತ್ಸವದ ಕೊನೆಯ ದಿನವಾದ ಭಾನುವಾರ ಬೆ.11ರಿಂದ ವಚನ ಗಾಯನ, ಸಂಜೆ ನೃತ್ಯ ರೂಪಕ, ನಾಟಕ ಪ್ರಸ್ತುತಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ