ಆ್ಯಪ್ನಗರ

ಮೈಸೂರಿನಲ್ಲಿ ಸಂವಿಧಾನದ ಸುರಕ್ಷತೆ, ಶಾಂತಿ ಸೌಹಾರ್ದತೆ ಯಾತ್ರೆ

ದೇಶದಾದ್ಯಂತ ಭಾರತ ಸಂವಿಧಾನದ ಸುರಕ್ಷತೆ ಮತ್ತು ಶಾಂತಿ ಸೌಹಾರ್ದತೆಗಾಗಿ ಯಾತ್ರೆ ಕೈಗೊಂಡಿರುವ ವಿವಿಧ ರಾಜ್ಯಗಳ ಮಹಿಳಾ ಹೋರಾಟಗಾರರು ಮಂಗಳವಾರ ಅರಮನೆ ನಗರಿಯಲ್ಲಿ ಅಭಿಯಾನ ನಡೆಸಿದರು.

Vijaya Karnataka 28 Sep 2018, 5:00 am
ಮೈಸೂರು : ದೇಶದಾದ್ಯಂತ ಭಾರತ ಸಂವಿಧಾನದ ಸುರಕ್ಷತೆ ಮತ್ತು ಶಾಂತಿ ಸೌಹಾರ್ದತೆಗಾಗಿ ಯಾತ್ರೆ ಕೈಗೊಂಡಿರುವ ವಿವಿಧ ರಾಜ್ಯಗಳ ಮಹಿಳಾ ಹೋರಾಟಗಾರರು ಮಂಗಳವಾರ ಅರಮನೆ ನಗರಿಯಲ್ಲಿ ಅಭಿಯಾನ ನಡೆಸಿದರು.
Vijaya Karnataka Web the safety and peace of the constitution in mysore is a yatra
ಮೈಸೂರಿನಲ್ಲಿ ಸಂವಿಧಾನದ ಸುರಕ್ಷತೆ, ಶಾಂತಿ ಸೌಹಾರ್ದತೆ ಯಾತ್ರೆ


ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ 'ಸಂವಿಧಾನ ಸುರಕ್ಷತೆ-ಶಾಂತಿ ಸೌಹಾರ್ದತೆ'ಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಉಳಿಸಿ, ಸ್ವತಂತ್ರ ನೀಡುವಂತೆ ಮತ್ತು ಸಮಾನತೆ ನೀಡುವಂತೆ ಘೋಷಣೆಗಳನ್ನು ಕೂಗಿದರು.

ಬಳಿಕ ಅಲ್ಲಿಂದ ಟೌನ್‌ಹಾಲ್‌ಗೆ ಸೌಹಾರ್ದ ನಡಿಗೆ ಮತ್ತು ಪುರಭವನದ ಸಭಾಂಗಣದಲ್ಲಿ ಸಂವಿಧಾನ ಮತ್ತು ಶಾಂತಿ ಸೌಹಾರ್ದತೆ ಕುರಿತು ವಿವಿಧ ರಾಜ್ಯಗಳಿಂದ ಅಗಮಿಸಿರುವ ಮಹಿಳೆಯರು ಅನಿಸಿಕೆಗಳನ್ನು ಹಂಚಿಕೊಂಡರಲ್ಲದೆ, ಸಂವಿಧಾನದ ಪ್ರತಿ ಸುಟ್ಟ ದೇಶ ದ್ರೋಹಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಆರ್‌ಎಲ್‌ಎಚ್‌ಪಿಯ ಮಹಿಳಾ ಡೊಳ್ಳು ಕಲಾತಂಡದವರು ಪುರಭವನದವರೆಗಿನ ಸೌಹಾರ್ದತೆ ನಡಿಗೆಗೆ ಸಾಥ್‌ ನೀಡಿದರು. ಬಳಿಕ ಶಾಂತಿಯೆಡೆಗೆ ನಮ್ಮ ನಡಿಗೆ ತಂಡಕ್ಕೆ ಕ್ಯಾನ್‌ವಾಸಿನ ಮೇಲೆ ಸಹಿ ಮಾಡುವುದರ ಮೂಲಕ ಶುಭಾಷಯ ಕೋರಲಾಯಿತು. ಹಲವು ಕಲಾವಿದರು ತಮ್ಮ ಕುಂಚಗಳಿಂದ ವಿವಿಧ ಬಣ್ಣಗಳ ಮೂಲಕ ಸಂವಿಧಾನ ಪ್ರತಿ, ಅಂಬೇಡ್ಕರ್‌ ಚಿತ್ರಗಳನ್ನು ಕ್ಯಾನ್‌ವಾಸ್‌ನ ಮೇಲೆ ಚಿತ್ರಿಸಿದರು. ಇದಕ್ಕೂ ಮೊದಲು ಕ್ಯಾನ್‌ವಾಸ್‌ ಮೇಲೆ ನಿವೃತ್ತ ಪ್ರಾಧ್ಯಾಪಕರಾದ ಪೊ›.ಸುಮಿತ್ರಾಬಾಯಿ ಸಂವಿಧಾನ ಅಂದರೆ ಮಾನವೀಯತೆ ಹಾಗೂ ಸಾಹಿತಿ ದೇವನೂರ ಮಹಾದೇವ ಅವರು ಸಮಾನತೆ ಎಂಬ ಬರಹದ ಕೆಳಗೆ ಗೆರೆ ಎಳೆದು ಸಹಿ ಮಾಡಿದರು. ಶಾಂತಿ, ಪ್ರೀತಿ ಮತ್ತು ನ್ಯಾಯದ ಆಧಾರದ ಮೇಲೆ ಸಮಾಜ ನಿರ್ಮಾಣವಾಗಲಿ ಎಂಬ ಆಶಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾಲುಗಳ ಮೂಲಕ ದಾಖಲಿಸಿದ್ದು ವಿಶೇಷವಾಗಿತ್ತು.

ನಂತರ ನಡೆದ ವೇದಿಕೆ ಕಾರ‍್ಯಕ್ರಮವನ್ನು ಶಕ್ತಿಧಾಮದ ಯುವತಿ ಶಿವಲಿಂಗಮ್ಮ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿರುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಚಿಕ್ಕವರಿರಲಿ, ದೊಡ್ಡವರಾಗಲಿ ಸಂವಿಧಾನವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದರ ರಕ್ಷಣೆಗೆ ಶಾಂತಿಯುತವಾದ ಹೋರಾಟದಲ್ಲಿ ನಾವು ತೊಡಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾತ್ರೆ ನೇತೃತ್ವ ವಹಿಸಿರುವ ಸಾಮಾಜಿಕ ಕಾರ್ಯಕರ್ತೆ, ಅನ್ಹಾಡ್‌ ಸಂಸ್ಥೆಯ ಸ್ಥಾಪಕಿ ಶಭನಂ ಹಶ್ಮಿ ಅವರು ಮಾತನಾಡಿ, ಪ್ರಸ್ತುತ ದೇಶದಲ್ಲಿ ಅಸಹನೆ, ಹಗೆತನ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಂವಿಧಾನವನ್ನು ಉಳಿಸಲು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅದರ ಸಲುವಾಗಿ ದೇಶದಾದ್ಯಂತ ಸಂವಿಧಾನದ ಸುರಕ್ಷತೆ ಮತ್ತು ಶಾಂತಿ ಸೌಹಾರ್ದತೆಗಾಗಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

ಕೋಮುಗಲಭೆ, ದಲಿತರ ಮೇಲೆ ಹಲ್ಲೆ, ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ವಿಚಾರವಂತರ ಮೇಲೆ ಹಲ್ಲೆ ತಡೆಗಟ್ಟುವುದರ ಜತೆಗೆ ಸಂವಿಧಾನ ಪ್ರತಿ ಸುಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುವ ಸಲುವಾಗಿ 5 ಬಸ್ಸುಗಳಲ್ಲಿ 25 ಮಹಿಳೆಯರ ತಂಡ ಯಾತ್ರೆ ಮಾಡುತ್ತಿದ್ದಾರೆ. ನೂರಾರು ಸಂಘಟನೆಗಳು ನಮ್ಮ ಯಾತ್ರೆಗೆ ಕೈ ಜೋಡಿಸಿವೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪೊ›.ಪ್ರೀತಿ ಶ್ರೀಮಂಧರ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತೆ ಮಾಧುರಿ, ಧ್ವನಿ ಮಹಿಳಾ ತಂಡದ ನಳಿನಿ, ಒಡನಾಡಿ ಸಂಸ್ಥೆಯ ಕವಿತಾ, ಆರ್‌ಎಲ್‌ಎಚ್‌ಪಿಯ ಸರಸ್ವತಿ, ಶಕ್ತಿಧಾಮದ ಅನಂತು, ಹೇಮಲತಾ, ಅಭಿರುಚಿ ಗಣೇಶ್‌, ನಿಲಯ್ಯ ಇನ್ನಿತರರು ಉಪಸ್ಥಿತರಿದ್ದರು.


ಸಂವಿಧಾನವನ್ನು ದುರ್ಬಲಗೊಳಿಸಲು ಇಲಿಗಳು ಬಿಲ ತೋಡುತ್ತಿರುವ ಸಂದರ್ಭದಲ್ಲಿ ಪಾಲನೆ ಮಾಡುವ, ಸಾಕುವ ಸ್ತ್ರೀ ಶಕ್ತಿ ಸಂವಿಧಾನ ರಕ್ಷಿಸಲು ರಾಷ್ಟ್ರದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ. ಇಂದು ಹಿಂದಿಯಲ್ಲಿ ಘೋಷಣೆ ಕೇಳಿದೆಯೋ ಹಾಗೆಯೇ ಮುಂದೆ ಬೇರೆ, ಬೇರೆ ರಾಜ್ಯಗಳಲ್ಲಿ ಅಲ್ಲಿನ ಜನಭಾಷೆಯಲ್ಲಿ ಘೋಷಣೆಗಳನ್ನು ಕೇಳುವಂತಾಗಬೇಕು. ಶಾಂತಿ ಮತ್ತು ಸಂವಿಧಾನದ ವಿಚಾರವನ್ನಿಟ್ಟುಕೊಂಡು ಮೈಸೂರಿಗೆ ಬಂದಿರುವ ಸ್ತ್ರೀ ಶಕ್ತಿಗೆ ಶರಣಾಗಬೇಕು. ಶರಣು ಎನ್ನಬೇಕು.

-ದೇವನೂರ ಮಹಾದೇವ, ಸಾಹಿತಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ