Please enable javascript.ತಂತ್ರಜ್ಞಾನಕ್ಕೆ ಆಧ್ಯಾತ್ಮಿಕ ಸ್ಪರ್ಶ ಅವಶ್ಯ: ರಾಜ್ಯಪಾಲ - The spiritual touch technology is essential : Governor - Vijay Karnataka

ತಂತ್ರಜ್ಞಾನಕ್ಕೆ ಆಧ್ಯಾತ್ಮಿಕ ಸ್ಪರ್ಶ ಅವಶ್ಯ: ರಾಜ್ಯಪಾಲ

ವಿಕ ಸುದ್ದಿಲೋಕ 24 Jul 2016, 5:00 am
Subscribe

ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಎಷ್ಟೇ ಮುಂಚೂಣಿಯಲ್ಲಿದ್ದರೂ ಅದಕ್ಕೆ ಆಧ್ಯಾತ್ಮಿಕತೆಯ ಸ್ಪರ್ಶವಿಲ್ಲದಿದ್ದರೆ ಉತ್ತರ ಕೋರಿಯಾದಂಥ ಸ್ಥಿತಿ ಎಲ್ಲ ದೇಶಗಳಿಗೆ ಬರಲಿದೆ ಎಂದು ರಾಜ್ಯಪಾಲ ವಜೂಭಾಯಿ ರೂಡಾಭಾಯ್ ವಾಲಾ ಹೇಳಿದ್ದಾರೆ.

the spiritual touch technology is essential governor
ತಂತ್ರಜ್ಞಾನಕ್ಕೆ ಆಧ್ಯಾತ್ಮಿಕ ಸ್ಪರ್ಶ ಅವಶ್ಯ: ರಾಜ್ಯಪಾಲ
-ಜೆಎಸ್‌ಎಸ್ ವಿಜ್ಞಾನ, ತಂತ್ರಜ್ಞಾನ ವಿವಿ ಉದ್ಘಾಟನೆ

ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಎಷ್ಟೇ ಮುಂಚೂಣಿಯಲ್ಲಿದ್ದರೂ ಅದಕ್ಕೆ ಆಧ್ಯಾತ್ಮಿಕತೆಯ ಸ್ಪರ್ಶವಿಲ್ಲದಿದ್ದರೆ ಉತ್ತರ ಕೋರಿಯಾದಂಥ ಸ್ಥಿತಿ ಎಲ್ಲ ದೇಶಗಳಿಗೆ ಬರಲಿದೆ ಎಂದು ರಾಜ್ಯಪಾಲ ವಜೂಭಾಯಿ ರೂಡಾಭಾಯ್ ವಾಲಾ ಹೇಳಿದ್ದಾರೆ.

ಎಸ್‌ಜೆಸಿಇ ಆವರಣದಲ್ಲಿ ಶನಿವಾರ ನಡೆದ ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿವಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘‘ವಿಜ್ಞಾನ ಹಾಗೂ ತಂತ್ರಜ್ಞಾನ ಎನ್ನುವುದು ಸಾಮಾನ್ಯ ಪ್ರಜೆಯ ಬದುಕಿನಲ್ಲೂ ಬದಲಾವಣೆ ತರುವ ಉಪಕರಣವಾಗಬೇಕು. ಉತ್ತರ ಕೋರಿಯಾ ತಂತ್ರಜ್ಞಾನ ಬಳಸಿಕೊಂಡು ಅಮೆರಿಕದ ಮೇಲೆಯೇ ದಾಳಿ ಮಾಡುವುದಾಗಿ ಬೆದರಿಕೆ ಹಾಕಿತು. ಅದು ತಂತ್ರಜ್ಞಾನದ ತಾಕತ್ತು ಎಂದು ನಾವು ಹೇಳಬಹುದು. ಆದರೆ, ತಂತ್ರಜ್ಞಾನ ನಮ್ಮನ್ನು ಹಾಳು ಮಾಡಲು ಬಳಕೆಯಾಗಬಾರದು. ಭಾರತದ ವಸುದೈವ ಕುಟುಂಬಕಂ ಎನ್ನುವ ಪರಿಕಲ್ಪನೆ ತಂತ್ರಜ್ಞಾನಕ್ಕೂ ಅನ್ವಯವಾಗುವುದರಿಂದ ಎಲ್ಲಾ ಸಾಮಾನ್ಯ ಜನರ ಒಳಿತಿಗೆ ಬಳಕೆಯಾಗುತ್ತ ಮಾದರಿಯಾಗಿದೆ. ಆಧ್ಯಾತ್ಮಿಕತೆಯ ಹಿನ್ನೆಲೆ ಯಾವ ದೇಶಕ್ಕೆ ಇಲ್ಲವೋ ಆ ದೇಶಕ್ಕೆ ಹೀಗೆಯೇ ಆಗಬಹುದು’’ ಎಂದು ಎಚ್ಚರಿಸಿದರು.

‘‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಉತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯವನ್ನು ಮುಂಚೂಣಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹೊಸದಾಗಿ ಉನ್ನತ ಶಿಕ್ಷಣ ಸಚಿವರಾಗಿ ಬಂದ ಬಸವರಾಜ ರಾಯರೆಡ್ಡಿ ಅವರು ವಿವಿಗಳಲ್ಲಿನ ಸಮಸ್ಯೆ ಬಗೆಹರಿಸಲು ಕುಲಪತಿಗಳ ಸಭೆ ಕರೆಯುವಂತೆ ಕೋರಿದರು. ಕರ್ನಾಟಕದಲ್ಲಿ ಧನಾತ್ಮಕ ಚಿಂತನೆ ವಾತಾವರಣ ಇದೆ ಎನ್ನುವುದಕ್ಕೆ ಇದಕ್ಕಿಂಥ ಉದಾಹರಣೆ ಬೇಡ’’ ಎಂದರು.

‘‘ಧಾರ್ಮಿಕ ಸಂಸ್ಥೆಗಳು ಬರೀ ಉಪದೇಶ ನೀಡುವುದಕ್ಕೆ ಮಾತ್ರ ಈಗ ಸೀಮಿತವಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿವೆ. ಇದಕ್ಕೆ ಸುತ್ತೂರು ಮಠವೇ ಸಾಕ್ಷಿ. ರಾಜೇಂದ್ರಸ್ವಾಮೀಜಿ ಅವರು ಹಾಕಿಕೊಟ್ಟ ಶಿಕ್ಷಣದ ಅಡಿಪಾಯ ಈಗ ಹೆಮ್ಮರವಾಗಿ ಬೆಳೆದಿದೆ’’ ಎಂದು ಮೆಚ್ಚುಗೆ ಸೂಚಿಸಿದರು.

ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಪ್ರತಾಪಸಿಂಹ, ಶಾಸಕ ವಾಸು, ಮೇಯರ್ ಬಿ.ಎಲ್.ಭೈರಪ್ಪ, ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ಕುಲಪತಿ ಡಾ.ಬಿ.ಜಿ.ಸಂಗಮೇಶ್ವರ, ಕುಲಸಚಿವ ಡಾ.ಕೆ.ಎಸ್.ಲೋಕೇಶ್ ಹಾಜರಿದ್ದರು.

ವೌಢ್ಯ ನಿಷೇಧಕ್ಕೆ ಸಮಾಜದ ಬೆಂಬಲವೂ ಬೇಕು: ಸಿಎಂ ವೌಢ್ಯ, ಕಂದಾಚಾರ, ಅಮಾನವೀಯ ಪದ್ಧತಿಗಳಿಗೆ ನಿಷೇಧ ಹೇರುವುದಕ್ಕೆ ಸರಕಾರ ಮುಂದಾಗಿದ್ದು, ಸಮಾಜವೂ ಇದಕ್ಕೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘‘ನಾವು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಿದ್ದರೂ ವೌಢ್ಯ, ಕಂದಾಚಾರಗಳ ಹಿಂದೆಯೂ ಬಿದ್ದಿದ್ದೇವೆ. ಇದೆಲ್ಲವನ್ನೂ ತಡೆಯಬೇಕು ಎಂದು ಬಸವಾದಿ ಶರಣರೂ ಶತಮಾನಗಳ ಹಿಂದೆಯೇ ಪ್ರಯತ್ನಿಸಿದರು. ಸಂವಿಧಾನದ ಆಶಯವೂ ಇದೆ ಆಗಿತ್ತು. ಇದರ ಮಹತ್ವ ಅರ್ಥ ಮಾಡಿಕೊಂಡು ನಿಷೇಧಕ್ಕೆ ಸಹಕಾರ ನೀಡುವುದು ಒಳ್ಳೆಯದು’’ ಎಂದರು.

‘‘ಬದಲಾವಣೆ ಎನ್ನುವುದು ಸಮಾಜದ ಅಲಿಖಿತ ನಿಯಮ. ಇದಕ್ಕೆ ನಾವೆಲ್ಲರೂ ಸ್ಪಂದಿಸಲೇಬೇಕು. ವಿಜ್ಞಾನ ಹಾಗೂ ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಪರಿಣಾಮವೂ ನಮ್ಮ ಮೇಲೆ ಆಗುತ್ತಿದೆ. ಅಭಿವೃದ್ಧಿ ಜತೆಗೆ ಕೆಲವೊಂದು ದುಷ್ಪರಿಣಾಮಗಳನ್ನೂ ಎದುರಿಸುವಂಥ ಪರಿಸ್ಥಿತಿ ನಮ್ಮ ಮುಂದೆಯೇ ಇದೆ. ಈ ಕಾರಣದಿಂದಲೇ ಮಾನವೀಯ ವೌಲ್ಯಗಳನ್ನು ಬೆಳೆಸಿಕೊಂಡು ವಿಜ್ಞಾನ ಬಳಸಿಕೊಳ್ಳಬೇಕು. ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಂಡಾಗ ಸಮತೋಲಿತ ಅಭಿವೃದ್ಧಿ ಸಾಧ್ಯ’’ ಎಂದು ತಿಳಿಸಿದರು.

‘‘ಸುತ್ತೂರು ಮಠಕ್ಕೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಠದ ಸಾಧನೆ ಅನನ್ಯವಾದದ್ದು. ಈಗ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಪ್ರತ್ಯೇಕ ವಿವಿ ಆರಂಭಿಸುವ ಮೂಲಕ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ. ವಿವಿ ಮಂಜೂರು ಮಾಡಿರುವ ಸರಕಾರ, ಎಲ್ಲಾ ರೀತಿಯ ನೆರವು ಹಾಗೂ ಬೆಂಬಲವನ್ನು ನೀಡಲಿದೆ’’ ಎಂದು ಭರವಸೆ ನೀಡಿದರು.

ಪಾಚೀನತೆ, ಪರಂಪರೆ, ಸಂಪ್ರದಾಯ ಹಾಗೂ ಧರ್ಮವನ್ನು ವಿಜ್ಞಾನ ಹಾಗೂ ತಂತ್ರಜ್ಞಾನದೊಂದಿಗೆ ಮಿಳಿತ ಮಾಡಿಕೊಂಡರೆ ಮಾನವನ ಒಳಿತು ಸಾಧ್ಯವಾಗಲಿದೆ. ಇದು ಜೀವನ ಸುಧಾರಣೆಗೂ ದಾರಿಯಾಗಲಿದೆ. ಇದನ್ನೇ ಸುತ್ತೂರು ಮಠವೂ ಯಶಸ್ವಿಯಾಗಿ ಮಾಡುತ್ತಿದೆ. ಜೆಎಸ್‌ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಪೂರಕವಾಗಿಯೇ ವಿಶ್ವವಿದ್ಯಾನಿಲಯ ಆರಂಭಿಸಿದೆ. -ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠಾಧ್ಯಕ್ಷ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ