ಆ್ಯಪ್ನಗರ

ಹಣಕ್ಕಾಗಿ ಅಪಹರಣ ನಾಟಕ ಹೆತ್ತವರಿಂದ ದುಡ್ಡು ಕೀಳಲು ಹೋಗಿ ಸಿಕ್ಕಿಬಿದ್ದ ಯುವಕ

ಹಣಕ್ಕಾಗಿ ತಾನೇ ಅಪಹರಣವಾಗಿದ್ದೇನೆ ಎಂದು ನಾಟಕವಾಡಿ ಪೋಷಕರನ್ನು ಯಾಮಾರಿಸಲು ಯತ್ನಿಸಿದ ಯುವಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Vijaya Karnataka 14 Jun 2019, 5:00 am
ಮೈಸೂರು: ಹಣಕ್ಕಾಗಿ ತಾನೇ ಅಪಹರಣವಾಗಿದ್ದೇನೆ ಎಂದು ನಾಟಕವಾಡಿ ಪೋಷಕರನ್ನು ಯಾಮಾರಿಸಲು ಯತ್ನಿಸಿದ ಯುವಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
Vijaya Karnataka Web the young man trapped
ಹಣಕ್ಕಾಗಿ ಅಪಹರಣ ನಾಟಕ ಹೆತ್ತವರಿಂದ ದುಡ್ಡು ಕೀಳಲು ಹೋಗಿ ಸಿಕ್ಕಿಬಿದ್ದ ಯುವಕ


ಅಪಹರಣ ಎಂದು ದೂರು ಬಂದ ಎರಡು ಗಂಟೆಯಲ್ಲೇ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದ ಯುವಕನನ್ನು ಪತ್ತೆ ಮಾಡಿರುವ ಲಷ್ಕರ್‌ ಠಾಣೆ ಪೊಲೀಸರು, ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ಪಶ್ಚಿಮ ಬಂಗಾಳದ ಶೋಭಿತ್‌ ಜಿನ ಎಂಬಾತನೇ ಪೋಷಕರನ್ನು ಯಾಮಾರಿಸಲು ಯತ್ನಿಸಿದ ಯುವಕ.

ಮೂರು ದಿನಗಳ ಹಿಂದೆ ಎಸ್‌ಎಸ್‌ಬಿ ಪರೀಕ್ಷೆ ಬರೆಯಲು ಕೋಲ್ಕತ್ತಾದಿಂದ ಶೋಭಿತ್‌ ಜಿನ ಮೈಸೂರಿಗೆ ಆಗಮಿಸಿದ್ದ. ಈ ವೇಳೆ ತಾನೇ ಅಪಹರಣವಾಗಿದ್ದೇನೆ ಎಂದು ತಾಯಿಗೆ ಕರೆ ಮಾಡಿ ಹೇಳಿದ್ದು, ''ಹಣ ನೀಡುವಂತೆ ಕೇಳುತ್ತಿದ್ದಾರೆ. ಹಣ ಕೊಟ್ಟು ನನ್ನನ್ನು ಬಿಡಿಸಿಕೊಳ್ಳಿ'' ಎಂದು ಹೇಳಿ ಇಟ್ಟಿದ್ದಾನೆ. ಮಗನ ಕರೆಯಿಂದ ಆತಂಕ್ಕೀಡಾದ ತಾಯಿ, ಬುಧವಾರ ಬೆಳಗ್ಗೆ 11ರ ಸಮಯದಲ್ಲಿ ಮೈಸೂರು ಲಷ್ಕರ್‌ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ, ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್‌ ಮುನಿಯಪ್ಪ ಅವರು ವಾಟ್ಸ್‌ಆ್ಯಪ್‌ ಮೂಲಕ ಯುವಕನ ಫೋಟೊ ತರಿಸಿಕೊಂಡು ಎಲ್ಲೆಡೆ ಅಪಹರಣವಾಗಿರುವ ಮಾಹಿತಿ ನೀಡಿ, ಸಿಬ್ಬಂದಿಯೊಂದಿಗೆ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಶೋಭಿತ್‌ ಕೂಡ ತನ್ನ ಮೊಬೈಲ್‌ನಿಂದ ತಾನು ಅಪಹರಣವಾಗಿರುವ ಸ್ಥಳದಿಂದ ಫೋಟೊಗಳನ್ನು ತೆಗೆದು ಪೋಷಕರಿಗೆ ರವಾನಿಸುತ್ತಿದ್ದ. ಅಲ್ಲದೇ ಮಾರ್ಗ ಮಧ್ಯೆ ಸಿಗುವ ಸಾರ್ವಜನಿಕರಿಂದ ಮೊಬೈಲ್‌ ಸ್ವೀಕರಿಸಿ 50 ಲಕ್ಷ ರೂ. ಕೇಳುತ್ತಿದ್ದಾರೆ, ಹಣ ಕಳುಹಿಸಿ ಎಂದು ಹೇಳುತ್ತಾ ಫೋನ್‌ ಕಟ್‌ ಮಾಡುತ್ತಿದ್ದ. ಈ ಬಗ್ಗೆ ಯುವಕನ ತಾಯಿ ನೀಡಿದ ಮಾಹಿತಿ ಮೇರೆಗೆ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇರುವುದನ್ನು ಪತ್ತೆ ಮಾಡಿದ ಪೊಲೀಸರು, ಅಲ್ಲಿಂದ ಠಾಣೆಗೆ ಕರೆ ತಂದಿದ್ದಾರೆ. ವಿಚಾರಣೆ ವೇಳೆ ತಾನೇ ಹಣಕ್ಕಾಗಿ ಅಪಹರಣವಾಗಿರುವ ನಾಟಕವಾಡಿದೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಕೊನೆಗೆ ಯುವಕನಿಗೆ ಬುದ್ದಿವಾದ ಹೇಳಿದ ಇನ್ಸ್‌ಪೆಕ್ಟರ್‌ ಮುನಿಯಪ್ಪ, ತಮ್ಮ ಇಬ್ಬರು ಸಿಬ್ಬಂದಿಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದವರೆಗೆ ಕಳುಹಿಸಿ, ವಿಮಾನ ಹತ್ತಿಸಿ ಹಿಂದಿರುಗಿದ್ದಾರೆ.

ಕಾರ್ಯಾಚರಣೆಯಲ್ಲಿ ಲಷ್ಕರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಎನ್‌.ಮುನಿಯಪ್ಪ, ಎಸ್‌ಐ ಪೂಜಾ, ಸಿಬ್ಬಂದಿಗಳಾದ ಜಯಕುಮಾರ್‌, ಪರಶಿವಮೂರ್ತಿ, ಆದಂ, ಲೋಕೇಶ್‌, ಮಹದೇವಸ್ವಾಮಿ, ಪ್ರದೀಪ, ಮಂಡ್ಯದ ಹೋಂಗಾರ್ಡ್‌ ರಮೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ