ಆ್ಯಪ್ನಗರ

ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ಅರಮನೆ ಮಂಡಳಿ ವತಿಯಿಂದ ಆನೆಗಳನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka Web 26 Aug 2019, 1:43 pm
ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಂಬೂ ಸವಾರಿ ಆಕರ್ಷಣೆಯಾದ ಅರ್ಜುನ ನೇತೃತ್ವದ ಗಜಪಡೆಯನ್ನು ಸೋಮವಾರ ಅರಮನೆ ಆವರಣಕ್ಕೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗಿದೆ.
Vijaya Karnataka Web Mysore Dasara


ಮೈಸೂರಿನ ಅಶೋಕಪುರಂ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳಿಗೆ ಸೋಮವಾರ ಬೆಳಗ್ಗೆ 11ಕ್ಕೆ ಅರಣ್ಯ ಭವನದ ಮುಂದೆ ಸಾಂಪ್ರದಾಯಿಕವಾಗಿ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ಎಲ್ಲಾ ಆನೆಗಳು ಅಶೋಕಪುರಂ ರಸ್ತೆ, ಬಲ್ಲಾಳ್‌ ವೃತ್ತ, ಆರ್‌ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್‌ ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಅಂಗಳ ಪ್ರವೇಶಿಸಿದವು.

ಸಾಂಪ್ರದಾಯಿಕವಾಗಿ ಪೂರ್ಣ ಕುಂಭ ಹೊತ್ತ ಮಹಿಳೆಯರು, ಮಂಗಳ ವಾದ್ಯ, ಡೊಳ್ಳು ಕುಣಿತದ ಮುಖಾಂತರ ಆನೆಗಳನ್ನು ಜಯಮಾರ್ತಾಂಡ ದ್ವಾರದ ಬಳಿಗೆ ಕರೆತರಲಾಯಿತು. ಪುರೋಹಿತ ಎಸ್‌.ವಿ.ಪ್ರಹ್ಲಾದ್‌ರಾವ್‌ ಅವರು ಮಧ್ಯಾಹ್ನ _12:30 ಕ್ಕೆ, ಅಭಿಜ್ಞಾ ಲಗ್ನದಲ್ಲಿ ಗಜಪಡೆಗೆ ಗಣಪತಿ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಆನೆಗಳನ್ನು ಸ್ವಾಗತಿಸಿದರು. ಬಳಿಕ

ಅವುಗಳ ಪಾದ ಪೂಜೆ ಮಾಡಿ , ಕಬ್ಬು ,ಬೆಲ್ಲ, ಚಕ್ಕಲು ಕೋಡಬಳೆ ,ನೀಡಿ ಅರಮನೆಗೆ ಬರಮಾಡಿಕೊಳ್ಳಲಾಯ್ತು.

ಇದೇ ವೇಳೆ ಪೊಲೀಸರು ಗಜಪಡೆಗೆ ಗಾಡ್ ಆಫ್ ಆನರ್ ಸಲ್ಲಿಸಿದರು. ನಂತರ ಆನೆಗಳನ್ನು ಜಯಮಾರ್ತಾಂಡ ದ್ವಾರದ ಬಳಿಯಿಂದ ಪಟದ ಕುಣಿತ, ಡೊಲ್ಲು ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ ಸೇರಿದಂತೆ ನಾನಾ ಕಲಾ ತಂಡಗಳೊಂದಿಗೆ ಅರಮನೆ ಮುಂಭಾಗಕ್ಕೆ ಕರೆತಂದು, ಮತ್ತೊಮ್ಮೆ ಪೊಲೀಸ್‌ ಗೌರವ ಸಲ್ಲಿಸಲಾಯಿತು.


ಬಳಿಕ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳು ಹಾಗೂ ಆಗಮಿಸಿದ ಗಣ್ಯರಿಗೆ ತಾಂಬೂಲ ನೀಡಿದರು. ಅಲ್ಲದೆ ಮಾವುತರು, ಕಾವಾಡಿಗಳಿಗೆ ಅಗತ್ಯ ವಸ್ತುಗಳಿರುವ ಕಿಟ್‌ಗಳನ್ನು ನೀಡಲಾಯಿತು.

ಮೊದಲ ಹಂತದಲ್ಲಿ ಒಟ್ಟು 6 ಆನೆಗಳು ಅರಮನೆಗೆ ಬಂದಿವೆ.

ಇಂದು ಸಂಜೆ ಆನೆಗಳನ್ನು ತಾಲೀಮಿಗೆ ಕರೆದೊಯ್ಯಲಾಗುತ್ತದೆ. ಆ ವೇಳೆ ಧನ್ವಂತರಿ ರಸ್ತೆಯಲ್ಲಿರುವ ಖಾಸಗಿ ವೇಯಿಂಗ್‌ ಯಂತ್ರದಲ್ಲಿ ಎಲ್ಲಾ ಆನೆಗಳ ತೂಕ ಮಾಡಿಸಲಾಗುತ್ತದೆ. ನಂತರ ತರಬೇತಿ, ರಾಜಾತಿಥ್ಯ ನೀಡಲಾಗುತ್ತದೆ. ಹೀಗೆ ಆತಿಥ್ಯ ನೀಡಿದ ಬಳಿಕ ಮತ್ತೊಮ್ಮೆ ತೂಕ ಮಾಡಲಾಗುತ್ತದೆ. ಆನೆಗಳಿಗೆ ಈ ರೀತಿ ಆತಿಥ್ಯ ನೀಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ