ಆ್ಯಪ್ನಗರ

ಅತೃಪ್ತ ಜಿ.ಟಿ ದೇವೇಗೌಡ ಅಜ್ಞಾತ ಸ್ಥಳಕ್ಕೆ

ಸಿಎಂ ಎಚ್.ಡಿ.ಕುಮಾರಸ್ವಾಮಿ ತಮಗೆ ನೀಡಿರುವ ಖಾತೆ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ನೂತನ ಸಚಿವ ಜಿ.ಟಿ.ದೇವೇಗೌಡ ಶನಿವಾರ ಪಕ್ಷದ ನಾಯಕರು, ಕಾರ್ಯಕರ್ತರ ಕೈಗೆ ಸಿಗದೇ ಅಜ್ಞಾತ ಸ್ಥಳದಲ್ಲಿ ಉಳಿದರು.

Vijaya Karnataka Web 9 Jun 2018, 8:49 pm
ಮೈಸೂರು: ಸಿಎಂ ಎಚ್.ಡಿ.ಕುಮಾರಸ್ವಾಮಿ ತಮಗೆ ನೀಡಿರುವ ಖಾತೆ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ನೂತನ ಸಚಿವ ಜಿ.ಟಿ.ದೇವೇಗೌಡ ಶನಿವಾರ ಪಕ್ಷದ ನಾಯಕರು, ಕಾರ್ಯಕರ್ತರ ಕೈಗೆ ಸಿಗದೇ ಅಜ್ಞಾತ ಸ್ಥಳದಲ್ಲಿ ಉಳಿದರು.
Vijaya Karnataka Web G T Devegowda


ತಮಗೆ ಉನ್ನತ ಶಿಕ್ಷಣ ಖಾತೆ ವಹಿಸಿರುವುದು ದೇವೇಗೌಡರಿಗೆ ತೀವ್ರ ಬೇಸರ ಮೂಡಿಸಿದೆ. ರೈತರಿಗೆ ಸಂಬಂಧಪಟ್ಟ, ನೇರವಾಗಿ ಸಾರ್ವಜನಿಕರ ಸಂಪರ್ಕವಿರುವ ಖಾತೆಯ ನಿರೀಕ್ಷೆಯಲ್ಲಿ ದೇವೇಗೌಡರಿದ್ದರು. ಆದರೆ, ಜೆಡಿಎಸ್ ವರಿಷ್ಠರು ಹಾಗೂ ಸಿಎಂ ಕುಮಾರಸ್ವಾಮಿ ಉನ್ನತ ಶಿಕ್ಷಣ ಖಾತೆ ನೀಡಿರುವುದು ದೇವೇಗೌಡರಿಗೆ ಅಸಮಾಧಾನ ತಂದಿದೆ. ಅವರ ಬೆಂಬಲಿಗರು ಕೆರಳುವಂತೆ ಮಾಡಿದೆ.

ದೇವೇಗೌಡರ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು ದೇವೇಗೌಡರಿಗೆ ಸೂಕ್ತ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದಲೇ ಅವರ ಇಲ್ಲಿನ ವಿಜಯನಗರದಲ್ಲಿರುವ ನಿವಾಸಕ್ಕೆ ಕಾರ್ಯಕರ್ತರು ಬಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ತರುತ್ತಿದ್ದಾರೆ. ಶನಿವಾರ ಬೆಳಗ್ಗೆಯೂ ಇದು ಮುಂದುವರಿಯಿತು.

ಜಿಟಿಡಿ ಖಾತೆ ಬದಲಿಗೆ ವಿಶ್ವನಾಥ್ ಮನವಿ

ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಿಕೊಳ್ಳಬಾರದು. ರೈತರು, ಸಾರ್ವಜನಿಕರನ್ನು ನೇರವಾಗಿ ಸಂಪರ್ಕಿಸುವ ಖಾತೆಯನ್ನು ನೀಡಬೇಕು ಎಂದು ಘೋಷಣೆಗಳನ್ನು ಕೂಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ದೇವೇಗೌಡರು ಮನೆಯಲ್ಲಿರಲಿಲ್ಲ. ತಮ್ಮ ಆಪ್ತ ಸಿಬ್ಬಂದಿಯೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದು ಮುಖಂಡರಿಗೆ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದರು. ಅನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ದೇವೇಗೌಡರು ಇಂಧನ ಅಥವಾ ಸಾರಿಗೆ ಖಾತೆಯನ್ನು ಕೇಳಿದ್ದರು.

ಪ್ರಾರಂಭದಲ್ಲಿ ಎಚ್.ಡಿ.ರೇವಣ್ಣ ಲೋಕೋಪಯೋಗಿ ಹಾಗೂ ಇಂಧನ ಎರಡೂ ಖಾತೆಗಳನ್ನು ಇಟ್ಟುಕೊಳ್ಳುವುದು ಕಂಡು ಬಂದಾಗ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಕೆರಳಿದರು. ರೇವಣ್ಣ ಲೋಕೋಪಯೋಗಿ ಇಲ್ಲವೇ ಇಂಧನ ಈ ಎರಡರಲ್ಲಿ ಒಂದು ಖಾತೆ ಇಟ್ಟುಕೊಂಡು ಮತ್ತೊಂದು ಖಾತೆಯನ್ನು ದೇವೇಗೌಡರಿಗೆ ನೀಡಬೇಕು ಎಂದು ಮಹೇಶ್ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಸಭೆ ಸೇರಿ ವರಿಷ್ಠರನ್ನು ಆಗ್ರಹಿಸಿದ್ದರು.

ದೇವೇಗೌಡ ಹಾಗೂ ಮಹೇಶ್ ಒಗ್ಗಟ್ಟು ಪ್ರದರ್ಶಿಸಿದ್ದರು. ಇದು ವರಿಷ್ಠರ ಕೆಂಗಣ್ಣಿಗೆ ಗುರಿಯಾಯಿತು. ಖಾತೆ ಹಂಚುವಾಗ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿ ಅವರು ಕೇಳಿದ ಖಾತೆ ನೀಡದೇ ಕುಮಾರಸ್ವಾಮಿ ಸಂದೇಶ ರವಾನಿಸಿದ್ದಾರೆ. ತಮ್ಮ ಆಪ್ತ ಮಹೇಶ್ ಅವರಿಗೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ನೀಡಿ ಅವರ ಬೆನ್ನು ತಟ್ಟಿದ್ದಾರೆ. ಇದು ದೇವೇಗೌಡರ ಬೆಂಬಲಿಗರು ಮತ್ತಷ್ಟು ಕೆರಳುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ