ಆ್ಯಪ್ನಗರ

ಕಾಡು ಪ್ರಾಣಿಗಳಿಗೆ ಆಸರೆ ನೀಡಿದ್ದ ವಿಶಾಲಾಕ್ಷಿದೇವಿ

ಕಾಡು ಪ್ರಾಣಿಗಳಿಗೆ ಆಸರೆ ನೀಡಿದ್ದ ವಿಶಾಲಾಕ್ಷಿದೇವಿ -ಎರಡು ಚಿರತೆ, ಮೂರು ಆನೆ ಮರಿಗಳನ್ನು ಪೋಷಿಸಿದ್ದ ರಾಜವಂಶಸ್ಥೆ ರವಿ ಗಾಯನಹಳ್ಳಿ ಮೈಸೂರು ಕಾಡಿನ ಸಂರಕ್ಷಣೆಗೆ ಸದಾ ...

Vijaya Karnataka 21 Oct 2018, 5:00 am
-ಎರಡು ಚಿರತೆ, ಮೂರು ಆನೆ ಮರಿಗಳನ್ನು ಪೋಷಿಸಿದ್ದ ರಾಜವಂಶಸ್ಥೆ
Vijaya Karnataka Web vishalakshidevi who supported the wild animals
ಕಾಡು ಪ್ರಾಣಿಗಳಿಗೆ ಆಸರೆ ನೀಡಿದ್ದ ವಿಶಾಲಾಕ್ಷಿದೇವಿ

ರವಿ ಗಾಯನಹಳ್ಳಿ ಮೈಸೂರು
ಕಾಡಿನ ಸಂರಕ್ಷಣೆಗೆ ಸದಾ ಮುನ್ನುಗ್ಗುತ್ತಿದ್ದ ರಾಜವಂಶಸ್ಥೆ, ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರು ತಬ್ಬಲಿ ಚಿರತೆ ಹಾಗೂ ಆನೆ ಮರಿಗಳಿಗೆ ಆಸರೆ ದಾತೆಯಾಗಿದ್ದರು.

ಮೈಸೂರು ರಾಜಮನೆತನ ಕಾಡಿನ ಸಂರಕ್ಷಣೆಗೆ ಹಿಂದಿನಿಂದಲೂ ಒತ್ತು ನೀಡುತ್ತ ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ವಿಶಾಲಾಕ್ಷಿದೇವಿ ಅವರು ಕಾಡು ಹಾಗೂ ವನ್ಯಜೀವಿ ಪ್ರಿಯೆ ಆಗಿದ್ದರು.

''ವಿಶಾಲಾಕ್ಷಿದೇವಿ ಅವರು ತಮ್ಮ ಪತಿ ಗಜೇಂದ್ರ ಸಿಂಗ್‌ ಅವರ ಹುಟ್ಟುಹಬ್ಬ ಆಚರಿಸಲು ಬಂಡೀಪುರದಲ್ಲಿರುವ ತಮ್ಮ ರೆಸಾರ್ಟ್‌ಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಈ ವೇಳೆ ಹೆಡಿಯಾಲದ ಬಳಿ ಕಬ್ಬು ಗದ್ದೆಯೊಳಗೆ ತಾಯಿಯನ್ನು ಕಳೆದುಕೊಂಡ ಒಂದು ಗಂಡು, ಒಂದು ಹೆಣ್ಣು ಚಿರತೆಗಳು ಸಿಕ್ಕಿದ್ದವು. ಅರಣ್ಯ ಅಧಿಕಾರಿಗಳ ಒಪ್ಪಿಗೆಯ ಮೇರೆಗೆ ತಮ್ಮ ರೆಸಾರ್ಟ್‌ಗೆ ಕರೆತಂದು ಆರೈಕೆ ಮಾಡಿದರು. ಅಲ್ಲದೆ, ಗಂಡು ಮರಿ ಚಿರತೆಗೆ ಬುಲ್ಲಿ ಹಾಗೂ ಹೆಣ್ಣು ಮರಿ ಚಿರತೆಗೆ ಬೇಬಿ ಎಂದು ನಾಮಕರಣ ಮಾಡಿದ್ದರು,'' ಎಂದು ಅವರ ಕುಟುಂಬಸ್ಥರು ನೆನಪಿಸಿಕೊಳ್ಳುತ್ತಾರೆ.

ಕೂಗಿದರೆ ಬರುತ್ತಿದ್ದವು: ''ಮೊದಲು ಮರಿಗಳಿಗೆ ಆಡಿನ ಹಾಲು ನೀಡುತ್ತಿದ್ದ ಅವರು, ಆ ನಂತರ ಮಾಂಸದ ತುಂಡುಗಳನ್ನು ನೀಡಿದರು. ಬಳಿಕ ಅವುಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಬೇಟೆಯಾಡುವುದನ್ನು ಕಲಿಸಲಾಯಿತು. ಹೀಗೆ ಹಂತಹಂತವಾಗಿ ಮರಿಗಳು ಬೆಳೆದ ಬಳಿಕ ಅವುಗಳನ್ನು ಕಾಡಿಗೆ ಬಿಡಲಾಯಿತು. ಸಮಯ ಸಿಕ್ಕಾಗಲೆಲ್ಲಾ ಕುಟುಂಬ ಸಮೇತರಾಗಿ ಕಾಡಿಗೆ ಭೇಟಿ ನೀಡುತ್ತಿದ್ದ ಅವರು, ಚಿರತೆ ಮರಿಗಳ ಹೆಸರಿಡಿದು ಕೂಗಿದರೆ ಎದುರು ಬಂದು ನಿಲ್ಲುತ್ತಿದ್ದವು. ಅವರ ತೊಡೆಯ ಮೇಲೆ ಮಲಗುತ್ತಿದ್ದವು. ಮಕ್ಕಳಂತೆ ಅವರು ಅವುಗಳನ್ನು ಮುದ್ದು ಮಾಡುತ್ತಿದ್ದರು. ಆದರೆ, ಗಂಡು ಚಿರತೆ ಬುಲ್ಲಿ ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡಿತು. ಆಗ ವಿಶಾಲಾಕ್ಷಿದೇವಿ ಅವರು ಬೇಸರ ವ್ಯಕ್ತಪಡಿಸಿದ್ದರು,'' ಎಂದು ರೆಸಾರ್ಟ್‌ ಸಿಬ್ಬಂದಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

''ಹೆಣ್ಣು ಚಿರತೆ ಬೇಬಿ ಕಾಡಿನ ಪರಿಸರಕ್ಕೆ ಹೊಂದಿಕೊಂಡಿತ್ತಲ್ಲದೇ, ಈಗ ಮರಿಗಳ ತಾಯಿಯೂ ಆಗಿದೆ. ಈ ಸಂದರ್ಭ ವಿಶಾಲಾಕ್ಷಿದೇವಿ ಅವರಿಗೆ ಮರಿಗಳನ್ನು ತೋರಿಸುವ ಸಲುವಾಗಿ ರೆಸಾರ್ಟ್‌ ಬಳಿಗೆ ಆ ಪುಟ್ಟ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಬಂದಿತ್ತು. ಇದು ಕೇವಲ ಒಂದು ಬಾರಿ ಮಾತ್ರವಲ್ಲದೇ, ಎರಡನೇ ಬಾರಿ ಮರಿ ಹಾಕಿದಾಗಲೂ ರೆಸಾರ್ಟ್‌ ಬಳಿಗೆ ಮರಿಗಳನ್ನು ಕಚ್ಚಿತಂದು ತೋರಿಸುವ ಮೂಲಕ ಪ್ರೀತಿಯನ್ನು ಮೆರೆದಿತ್ತು,'' ಎಂದು ಚಿಕ್ಕಮಗಳೂರು ಹುಲಿ ಯೋಜನೆ ನಿವೃತ್ತ ನಿರ್ದೇಶಕ ಕಾಂತರಾಜ್‌ ಅವರು ನೆನಪು ಮಾಡಿಕೊಂಡರು.

ಆನೆ ಮರಿಗಳ ರಕ್ಷಣೆ: ''ಒಮ್ಮೆ ದಿಕ್ಕು ತಪ್ಪಿದ್ದ 3 ಮರಿ ಆನೆಗಳನ್ನು ರಕ್ಷಿಸಿದರಲ್ಲದೇ, ಕೆಲಕಾಲ ಅವುಗಳನ್ನು ಆರೈಕೆ ಮಾಡಿದರು. ಆದರೆ, ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವುಗಳನ್ನು ಆನೆ ಶಿಬಿರಕ್ಕೆ ಒಪ್ಪಿಸಿದ್ದರು. ವನ್ಯಜೀವಿಗಳ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಿದ್ದ ಅವರು ವೈಜ್ಞಾನಿಕವಾಗಿ ಚಿಂತಿಸುತ್ತಿದ್ದರು. ಯಾವ ಪ್ರಾಣಿಗಳಿಗೆ ಯಾವ ಆಹಾರ ನೀಡಬೇಕು? ಯಾವ ರೀತಿಯ ಕಾಯಿಲೆಗೆ ತುತ್ತಾಗುತ್ತವೆ? ಅವುಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂಬ ಅಂಶಗಳನ್ನು ಬಲ್ಲವರಾಗಿದ್ದರು. ಅದಲ್ಲದೇ, ಅವುಗಳ ರಕ್ಷಣೆಗಾಗಿ ತಮ್ಮದೇ ಹಣವನ್ನು ಮೀಸಲಿಟ್ಟಿದ್ದರು,'' ಎಂದು ಅವರ ಕುಟುಂಬದ ಸ್ನೇಹಿತರೊಬ್ಬರು ನೆನೆದರು.

* ಕಾಡು, ಪ್ರಾಣಿ, ಪಕ್ಷಿ ಎಂದರೆ ವಿಶೇಷ ಒಲವು ಹೊಂದಿದ್ದ ವಿಶಾಲಾಕ್ಷಿದೇವಿ ಅವರು ರಾಜವಂಶಸ್ಥರಾದರೂ ಯಾರನ್ನು ಕಡೆಗಣಿಸಿದವರಲ್ಲ. ಎಲ್ಲರಿಗೂ ಒಂದೇ ರೀತಿಯಾದ ಗೌರವವನ್ನು ನೀಡುತ್ತಿದ್ದರು. ಪ್ರಾಣಿಗಳ ಕುರಿತು ವೈಜ್ಞಾನಿಕವಾಗಿ ಯೋಚಿಸುತ್ತಿದ್ದರು. ಅವುಗಳ ಆರೋಗ್ಯ, ಆಹಾರ ಇತ್ಯಾದಿಗಳ ಕುರಿತು ಮಾಹಿತಿಗಾಗಿ ಅಪಾರ ಹಣವನ್ನು ಖರ್ಚು ಮಾಡುತ್ತಿದ್ದರು. ಕಾಡಿನ ಉಳಿವಿನ ಹೋರಾಟಕ್ಕೂ ಪ್ರೋತ್ಸಾಹ ನೀಡುತ್ತಿದ್ದರು.
-ರಾಜಕುಮಾರ್‌, ವನ್ಯಜೀವಿ ತಜ್ಞ.

* ಆ ಸಮಯದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಸರಕಾರ ಅಷ್ಟೊಂದು ಕಾಳಜಿ ವಹಿಸಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಆ ಚಿರತೆಗಳು ಆಕಸ್ಮಿಕವಾಗಿ ಸಿಕ್ಕಿದ್ದವು. ಅವುಗಳನ್ನು ತಾವೇ ಸಂರಕ್ಷಿಸಿ ಸೂಕ್ತ ತರಬೇತಿಯನ್ನು ನೀಡಿ ಕಾಡಿಗೆ ಬಿಟ್ಟರು. ಕೇವಲ ಚಿರತೆಗಳು ಮಾತ್ರವಲ್ಲದೇ, ಆನೆ ಮರಿಗಳನ್ನು ರಕ್ಷಿಸಿ ಅರಣ್ಯಕ್ಕೆ ಒಪ್ಪಿಸಿದ್ದು, ಅವರ ಪ್ರಾಣಿ ಪ್ರೀತಿಯನ್ನು ತಿಳಿಸುತ್ತದೆ.
- ಕಾಂತರಾಜ್‌, ನಿವೃತ್ತ ಅರಣ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ