ಆ್ಯಪ್ನಗರ

ಯಾವುದೇ ರೀತಿಯ ಯುದ್ಧ ಎದುರಿಸಲು ಸಿದ್ಧ, ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ನರವಾಣೆ ವಾರ್ನಿಂಗ್

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹಾಗೂ ಅಕ್ರಮ ನುಸುಳುವಿಕೆಗೆ ಪೂರ್ಣ ಅಂಕುಶ ಹಾಕುವ ನೀತಿ ಭಾರತದ ಕಡೆಯಿಂದ ಮುಂದೆವರೆಯಲಿದೆ. ಸಂವಿಧಾನದ 370ನೇ ವಿಧಿ ರದ್ದತಿ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಪಶ್ಚಿಮದಲ್ಲಿನ ಶತ್ರುಗಳಿಗೆ ಭಾರಿ ಸಮಸ್ಯೆ ಎದುರಾಗಿದೆ ಎಂದು ಭೂಸೇನಾ ಮುಖ್ಯಸ್ಥ ನರವಾಣೆ ಪಾಕ್ ಗೆ ವಾರ್ನಿಂಗ್ ಮಾಡಿದ್ದಾರೆ.

Vijaya Karnataka Web 16 Jan 2020, 8:19 am
ಹೊಸದಿಲ್ಲಿ: ಭವಿಷ್ಯದಲ್ಲಿಎದುರಾಗಬಹುದಾದ ಯಾವುದೇ ರೀತಿಯ ಯುದ್ಧಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಾಣೆ ಅವರು ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.
Vijaya Karnataka Web Manoj Mukund Naravane


ಬುಧವಾರ ನಡೆದ 72ನೇ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹಾಗೂ ಅಕ್ರಮ ನುಸುಳುವಿಕೆಗೆ ಪೂರ್ಣ ಅಂಕುಶ ಹಾಕುವ ನೀತಿ ಮುಂದುವರಿಯಲಿದೆ. ಆದರೆ ಯಾರಾದರೂ ನಮ್ಮ ತಂಟೆಗೆ ಬಂದರೆ ಸಹಿಸಲ್ಲ. ಯಾವುದೇ ರೀತಿಯ ಸಮರಕ್ಕೂ ನಾವು ಸನ್ನದ್ಧರಾಗಿದ್ದೇವೆ ಎಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರದ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು. ''ಸಂವಿಧಾನದ 370ನೇ ವಿಧಿ ರದ್ದತಿ ಒಂದು ಐತಿಹಾಸಿಕ ಹೆಜ್ಜೆ. ಇದರಿಂದ ನಮ್ಮ ಪಶ್ಚಿಮದಲ್ಲಿನ ಶತ್ರುಗಳಿಗೆ ಭಾರಿ ಸಮಸ್ಯೆ ಎದುರಾಗಿದೆ. ಏಕೆಂದರೆ ಆ ರಾಷ್ಟ್ರ ನಡೆಸುತ್ತಿದ್ದ ಪರೋಕ್ಷ ಸಮರಕ್ಕೆ ಪೆಟ್ಟು ಬಿದ್ದಿದೆ. ಹೀಗಾಗಿ ಆ ದೇಶ ಕಂಗಾಲಾಗಿದೆ,'' ಎಂದು ಪಾಕಿಸ್ತಾನಕ್ಕೆ ಚಾಟಿ ಬೀಸಿದರು.

'' ಭಾರತೀಯ ಸೇನೆ ಜಾಗರೂಕವಾಗಿದ್ದು ಜಾಗತಿಕ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ಬೇಕಾದಷ್ಟು ಪರ್ಯಾಯ ಮಾರ್ಗಗಳಿವೆ. ಅವೆಲ್ಲವುಗಳನ್ನು ಬಳಸಲು ಕೂಡ ಸೇನೆ ಸದಾಕಾಲ ಸನ್ನದ್ಧವಾಗಿದೆ,'' ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭಡೌರಿಯಾ ಮತ್ತು ನೌಕಾಪಡೆ ಮುಖ್ಯಸ್ಥ ಚೀಫ್‌ ಅಡ್ಮೀರಲ್‌ ಕರಮ್‌ಬೀರ್‌ ಸಿಂಗ್‌ ಕೂಡ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರ ಜತೆಗೂಡಿ ನರವಾಣೆ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಕಾರಿಯಪ್ಪ ಮೈದಾನದಲ್ಲಿ ನಡೆದ ವಾರ್ಷಿಕ ಪರೇಡ್‌ನಲ್ಲಿ ಗೌರವ ನಮನ ಸ್ವೀಕರಿಸಿದರು.



ವೃತ್ತಿಪರತೆ ಮತ್ತು ಶೌರ್ಯಕ್ಕಾಗಿ ಭಾರತೀಯ ಸೇನೆ ಹೆಸರುವಾಸಿ. ಮಾನವೀಯತೆಗೆ ಸ್ಫೂರ್ತಿದಾಯಕವಾಗಿರುವುದಕ್ಕೂ ಸೇನೆಗೆ ಗೌರವ ಸಲ್ಲಿಸಲಾಗುತ್ತದೆ. ಜನಸಾಮಾನ್ಯರಿಗೆ ತೊಂದರೆಯಾದಾಗಲೆಲ್ಲ ಯೋಧರು ನೆರವಿಗೆ ಧಾವಿಸಿದ್ದಾರೆ. ನಮ್ಮ ಸೇನೆ ಬಗ್ಗೆ ಸದಾ ಹೆಮ್ಮೆಯಿದೆ.
- ನರೇಂದ್ರ ಮೋದಿ, ಪ್ರಧಾನಿ



ಭಾರತೀಯ ಸೇನೆಯ ಧೈರ್ಯಶಾಲಿ ಯೋಧರು, ಮಾಜಿ ಯೋಧರು ಹಾಗೂ ಗಡಿಯಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ಮತ್ತು ಕುಟುಂಬಸ್ಥರಿಗೆ ಸೇನಾ ದಿನದ ಶುಭಾಶಯಗಳು. ಜೈ ಹಿಂದ್‌.
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ