ಆ್ಯಪ್ನಗರ

'ಜೈಲಿನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ', ನಿರ್ಭಯಾ ಅತ್ಯಾಚಾರಿಯ ಹೊಸ ವರಸೆ!

ಮುಖೇಶ್ ಸಿಂಗ್‌ಗೆ ‘ಜೈಲಿನಲ್ಲಿ ಪದೇ ಪದೇ ಲೈಂಗಿಕ ಕಿರುಕುಳ ನೀಡಲಾಗಿದೆ’ ಎಂದ ವಕೀಲೆ ಅಂಜನಾ ಪ್ರಕಾಶ್, "ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವ ಮೊದಲೇ ಆತನನ್ನು ಏಕಾಂತದ ಬಂಧನದಲ್ಲಿರಿಸಲಾಗಿತ್ತು. ಇದು ಜೈಲು ನಿಯಮಗಳಿಗೆ ವಿರುದ್ಧವಾಗಿದೆ," ಎಂದು ವಾದಿಸಿದರು.

Agencies 28 Jan 2020, 6:21 pm
ಹೊಸದಿಲ್ಲಿ: ಗಲ್ಲಿಗೇರಲು ಇನ್ನು ಕೆಲವೇ ದಿನಗಳು ಇದೆ ಎನ್ನುವಾಗ ನಿರ್ಭಯಾ ಅತ್ಯಾಚಾರಿಗಳು ದಿನಕ್ಕೊಂದು ತಕರಾರು ತೆಗೆಯಲು ಆರಂಭಿಸಿದ್ದಾರೆ. ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್‌ ಸಿಂಗ್‌ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿಯವರ ನಿರ್ಧಾರವನ್ನೇ ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ. ಮಂಗಳವಾರದ ವಿಚಾರಣೆ ವೇಳೆ ಆತ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾನೆ.
Vijaya Karnataka Web Mukesh Singh


ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಮುಕೇಶ್‌ ಸಿಂಗ್‌ ವಕೀಲರು, ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಲ್ಲ. ಹೀಗಾಗಿ ಕ್ಷಮಾದಾನವನ್ನು ತಿರಸ್ಕರಿಸಿರುವ ಅವರ ನಿರ್ಧಾರವು ನಿರಂಕುಶ ಮತ್ತು ದುರುದ್ಧೇಶದ ನಿರ್ಧಾರ ಎಂದಿದ್ದಾರೆ. ಆದರೆ ರಾಷ್ಟ್ರಪತಿಗಳಿಗೆ ದಾಖಲೆಗಳನ್ನು ತೋರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

'ದಾಖಲೆಗಳಲ್ಲಿ ಮುಕೇಶ್‌ ಸಿಂಗ್‌ ಮೇಲೆ ಜೈಲಿನಲ್ಲಿ ಹಲ್ಲೆಯಾಗಿದೆ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವಿವರಗಳಿವೆ' ಎಂದು ವಕೀಲರು ವಾದಿಸಿದ್ದಾರೆ. “ನೀವು ಇನ್ನೊಬ್ಬರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಿ. ನೀವು ನಿಮ್ಮ ಬುದ್ಧಿಯನ್ನು ಬಳಸಬೇಕು,” ಎಂದು ಮುಕೇಶ್‌ ವಕೀಲೆ ಅಂಜನಾ ಪ್ರಕಾಶ್‌ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್‌, “ರಾಷ್ಟ್ರಪತಿಗಳು ಎಲ್ಲಾ ದಾಖಲೆಗಳನ್ನು ನೋಡಬೇಕು ಮತ್ತು ಆ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ?” ಎಂದು ಪ್ರಶ್ನಿಸಿದರು. "ಈ ಸಂಗತಿಗಳನ್ನು ರಾಷ್ಟ್ರಪತಿಗಳ ಮುಂದೆ ಇಡಲಾಗಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ರಾಷ್ಟ್ರಪತಿಗಳು ಬುದ್ದಿಯನ್ನು ಅನ್ವಯಿಸಲಿಲ್ಲ ಎಂದು ನೀವು ಹೇಗೆ ಹೇಳುತ್ತಿದ್ದೀರಿ?" ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

ಮುಖೇಶ್ ಸಿಂಗ್‌ಗೆ ‘ಜೈಲಿನಲ್ಲಿ ಪದೇ ಪದೇ ಲೈಂಗಿಕ ಕಿರುಕುಳ ನೀಡಲಾಗಿದೆ’ ಎಂದ ಅಂಜನಾ ಪ್ರಕಾಶ್, "ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವ ಮೊದಲೇ ಆತನನ್ನು ಏಕಾಂತದ ಬಂಧನದಲ್ಲಿರಿಸಲಾಗಿತ್ತು. ಇದು ಜೈಲು ನಿಯಮಗಳಿಗೆ ವಿರುದ್ಧವಾಗಿದೆ," ಎಂದು ವಾದಿಸಿದರು.

ಪೊಲೀಸರ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಜೈಲಿನಲ್ಲಿ ಅನುಭವಿಸುವ ನೋವು ಕ್ಷಮಾದಾನಕ್ಕೆ ಆಧಾರವಾಗುವುದಿಲ್ಲ. ಆತನನ್ನು ಏಕಾಂತ ಬಂಧನದಲ್ಲಿ ಇರಿಸಿರಲಿಲ್ಲ,” ಎಂದು ವಿವರಿಸಿದರು. ಕೆಲವೊಮ್ಮೆ ಅಪರಾಧಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಗಲ್ಲು ಶಿಕ್ಷೆ ನೀಡಲಾಗದಂಥ ಪರಿಸ್ಥಿತಿ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಅಪರಾಧಿಯ ವೈದ್ಯಕೀಯ ಪರಿಸ್ಥಿತಿ ಉತ್ತಮವಾಗಿದೆ,” ಎಂದು ವಿವರಿಸಿದರು.

ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಇದರ ನಡುವೆ ಇದೇ ಶನಿವಾರ ಬೆಳಿಗ್ಗೆ 6 ಗಂಟೆಗೆ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಕುಮಾರ್‌ ಶರ್ಮಾ ಮತ್ತು ಅಕ್ಷಯ್‌ ಕುಮಾರ್‌ಗೆ ನೇಣಿಗೇರಿಸಲು ಸಮಯ ನಿಗದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ