ಆ್ಯಪ್ನಗರ

ಪ್ರತಿಭಟನಾನಿರತ ಬಿಡಿಎಸ್ ವಿದ್ಯಾರ್ಥಿನಿ ಅಸ್ವಸ್ಥ

ಪರೀಕ್ಷೆಗೆ ಅವಕಾಶ ನಿರಾಕರಣೆ ಹಿನ್ನೆಲೆಯಲ್ಲಿ ಇಲ್ಲಿನ ಎಎಂಇ ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರ ಪೈಕಿ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಿಕ ಸುದ್ದಿಲೋಕ 21 Sep 2016, 8:01 am
ರಾಯಚೂರು: ಪರೀಕ್ಷೆಗೆ ಅವಕಾಶ ನಿರಾಕರಣೆ ಹಿನ್ನೆಲೆಯಲ್ಲಿ ಇಲ್ಲಿನ ಎಎಂಇ ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರ ಪೈಕಿ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Vijaya Karnataka Web
ಪ್ರತಿಭಟನಾನಿರತ ಬಿಡಿಎಸ್ ವಿದ್ಯಾರ್ಥಿನಿ ಅಸ್ವಸ್ಥ


ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ರಾಜೀವಗಾಂಧಿ ಆರೋಗ್ಯ ವಿವಿಯು ಪ್ರವೇಶಕ್ಕೆ ಮಾನ್ಯತೆ ನೀಡದ್ದರಿಂದ ಆಡಳಿತ ಮಂಡಳಿ ವ್ಯಾಸಂಗಕ್ಕೆ ಅವಕಾಶ ನಿರಾಕರಿಸಿದೆ. ಇದನ್ನು ಖಂಡಿಸಿ, ಕಾಲೇಜಿನ 21 ವಿದ್ಯಾರ್ಥಿಗಳು ಉಪವಾಸ ಆರಂಭಿಸಿದ್ದಾರೆ. ಎಎಂಇ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಎಸ್.ವಿ.ರಮೇಶ ಅವರು ಹೋರಾಟ ನಿರತರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ವಿದ್ಯಾರ್ಥಿನಿ ಸ್ನೇಹಿತಾ ಏಕಾಏಕಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

‘‘ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಮಾತ್ರ ಆಹಾರ ಸೇವಿಸುವೆ’’ ಎಂದು ಸ್ನೇಹಿತಾ ಸೇರಿ ಇತರ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ‘‘ಸೆ.29ರಂದು ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಚಾರಣೆಯಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಸಹಕರಿಸಬೇಕು’’ ಎಂದು ಪ್ರಾಚಾರ್ಯರು ಮನವಿ ಮಾಡಿದ್ದಾರೆ. ಆದರೆ, ವಿದ್ಯಾರ್ಥಿಗಳು, ‘‘ತಮಗಾಗಿರುವ ಅನ್ಯಾಯ ಸರಿ ಹೋಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ’’ ಎಂದೇ ಎಚ್ಚರಿಸಿದ್ದಾರೆ.

‘‘ಎರಡು ವರ್ಷ ಪರೀಕ್ಷೆ ಬರೆಯುವಾಗ ಯಾವುದೇ ಮಾಹಿತಿ ನೀಡಿರಲಿಲ್ಲ. ಅಂತಿಮ ವರ್ಷದ ಪರೀಕ್ಷೆ ವೇಳೆ ಏಕಾಏಕಿ ಅವಕಾಶ ನಿರಾಕರಿಸಲಾಗಿದೆ. ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ’’ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ