ಆ್ಯಪ್ನಗರ

ಸಹಕಾರ ಸಂಘಗಳ ಸಾಲ ಮನ್ನಾ ಮಾಡಲಿ: ಬಿಎಸ್‌ವೈ

ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದರೆ ತಾವು ಕೇಂದ್ರಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

ವಿಕ ಸುದ್ದಿಲೋಕ 31 May 2017, 8:03 am
ರಾಯಚೂರು: ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದರೆ ತಾವು ಕೇಂದ್ರಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
Vijaya Karnataka Web
ಸಹಕಾರ ಸಂಘಗಳ ಸಾಲ ಮನ್ನಾ ಮಾಡಲಿ: ಬಿಎಸ್‌ವೈ


ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ರೈತರು ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಲು ಮೊದಲು ಮುಂದಾಗಲಿ. ನಂತರ ಬಿಜೆಪಿ ರಾಜ್ಯ ಘಟಕವು ಕೇಂದ್ರಕ್ಕೆ ರೈತರ ಸಾಲಮನ್ನಾಕ್ಕೆ ಒತ್ತಾಯಿಸಲಿದೆ. ಅನಗತ್ಯ ಕೇಂದ್ರದ ಮೇಲೆ ಸಾಲ ಮನ್ನಾ ವಿಚಾರಕ್ಕೆ ಗೂಬೆ ಕೂಡಿಸುವುದು ಸಲ್ಲದು ಎಂದು ಎಚ್ಚರಿಸಿದರು. ಸಾಲ ಮುನ್ನಾಕ್ಕೆ ಆಗ್ರಹಿಸಿ ಜುಲೈನಲ್ಲಿ ಬೆಂಗಳೂರಿನಲ್ಲಿ ನಾಲ್ಕರಿಂದ ಐದು ಲಕ್ಷ ರೈತರನ್ನು ಸೇರಿಸಿ ಹೋರಾಟ ನಡೆಸಲಿದ್ದು, ಬಿಸಿ ಮುಟ್ಟಿಸಲಾಗುವುದು ಎಂದರು.

ಗಾಂಧೀಜಿ ಕನಸಾಗಿತ್ತು: ದೇಶದಲ್ಲಿ ಗೋಹತ್ಯ ನಿಷೇಧಿಸುವುದು ಮಹಾತ್ಮಾ ಗಾಂಧೀಜಿ ಅವರ ಕನಸಾಗಿತ್ತು. ಅದನ್ನು ಈಗಿನ ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ ನಡೆಸಿದ ಆರವತ್ತು ವರ್ಷದಲ್ಲಿ ಸಾಧಿಸಲಾಗದ ಕಾರ್ಯವನ್ನು ಮೋದಿ ಮೊದಲ ಅವಧಿಯಲ್ಲಿಯೇ ಮಾಡಿ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ಮರಳು ಮಾಫಿಯಾ; ರಾಜ್ಯದಲ್ಲಿ ಮರಳು ಮಾಫಿಯಾ ಪ್ರಬಲವಾಗಿ ಬೆಳೆದಿದೆ. ಅದಕ್ಕೆ ಕಾಂಗ್ರೆಸ್ ಸರಕಾರದ ಸಚಿವರ ಮಕ್ಕಳೇ ಅದರಲ್ಲಿ ಶಾಮೀಲಾಗಿರುವುದು ಕಾರಣ. ಲೋಕೋಪಯೋಗಿ ಸಚಿವರ ಪುತ್ರ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಅವರೂ ಈ ಮಾಫಿಯಾದಲ್ಲಿದ್ದಾರೆ. ಬಡವರಿಗೆ ಮರಳು ಮನೆ ಕಟ್ಟಲೂ ಸಿಗುತ್ತಿಲ್ಲ ಎಂದು ಆರೋಪಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂ.ಅಕ್ರಮ ಜಾಹೀರಾತು ಫಲಕಗಳ ಅಳವಡಿಕೆಯಲ್ಲಿ ನಡೆದಿದೆ. ಅದಕ್ಕೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಿದೆ. 4500ಕೋಟಿ ರೂ. ಫಸಲ್ ಬಿಮಾ ಯೋಜನೆಯ ಲಾಭ ರೈತರಿಗೆ ದೊರಕಿಸುವಲ್ಲಿಯೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸರಕಾರಕ್ಕೆ ಕಾಳಜಿಯಿಲ್ಲ; ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು ರೈತರು ಸ್ವಯಂಪ್ರೇರಣೆಯಿಂದ ತೆರವುಗೊಳಿಸಿದ್ದು, ರಾಜ್ಯ ಸರಕಾರ ಕನಿಷ್ಠ ಬೆಂಬಲಕ್ಕೂ ಬಂದಿಲ್ಲ. ಇದು ಸರಕಾರಕ್ಕಿರುವ ರೈತರ ಪರ ಕಾಳಜಿಯನ್ನು ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರ, ಹೈ-ಕ ಭಾಗದಲ್ಲಿ ಖಾಲಿಯಿರುವ 40 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ರಾಯಚೂರಿಗೆ ಐಐಟಿ ಮಂಜೂರು ವಿಷಯದಲ್ಲಿ ಬಿಜೆಪಿ ನಡೆ ಕುರಿತು ಪ್ರಶ್ನಿಸಿದಾಗ, ವಿಚಲಿತರಾದ ಜಗದೀಶ್ ಶೆಟ್ಟರ್ ಮತ್ತಿತರರು ಸುದ್ದಿಗೋಷ್ಠಿ ಮೊಟಕುಗೊಳಿಸಿ ತೆರಳಿದರು.

ಬಿಜೆಪಿ ಸೇರ್ಪಡೆ; ನಗರದ ಉದ್ಯಮಿ, ಅಬಕಾರಿ ಗುತ್ತಿಗೆದಾರ ಈ.ಆಂಜನೇಯ್ಯ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ