Please enable javascript.ತಿದ್ದುಪಡಿ ವಿಧೇಯಕಕ್ಕೆ ಎನ್‌ಡಿಎ ಬೆಂಬಲ: ಶೆಟ್ಟರ್ - ತಿದ್ದುಪಡಿ ವಿಧೇಯಕಕ್ಕೆ ಎನ್‌ಡಿಎ ಬೆಂಬಲ: ಶೆಟ್ಟರ್ - Vijay Karnataka

ತಿದ್ದುಪಡಿ ವಿಧೇಯಕಕ್ಕೆ ಎನ್‌ಡಿಎ ಬೆಂಬಲ: ಶೆಟ್ಟರ್

ವಿಕ ಸುದ್ದಿಲೋಕ 13 Oct 2012, 12:00 pm
Subscribe

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನಲ್ಲಿ ಬಿಜೆಪಿ ಜತೆಗೆ ಎನ್‌ಡಿಎ ಸಂಸದರು ಬೆಂಬಲಿಸಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಜಗದೀಶಶೆಟ್ಟರ್ ಶುಕ್ರವಾರ ಘೋಷಿಸಿದರು.

ತಿದ್ದುಪಡಿ ವಿಧೇಯಕಕ್ಕೆ ಎನ್‌ಡಿಎ ಬೆಂಬಲ: ಶೆಟ್ಟರ್

ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನಲ್ಲಿ ಬಿಜೆಪಿ ಜತೆಗೆ ಎನ್‌ಡಿಎ ಸಂಸದರು ಬೆಂಬಲಿಸಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಜಗದೀಶಶೆಟ್ಟರ್ ಶುಕ್ರವಾರ ಘೋಷಿಸಿದರು.

ನಗರ ಹೊರ ವಲಯದ ಅಸ್ಕಿಹಾಳದಲ್ಲಿ ರಾಯಚೂರು-ಸೊಲ್ಲಾಪುರ 765 ಕೆ.ವಿ. ವಿದ್ಯುತ್ ಪ್ರಸರಣಾ ವ್ಯವಸ್ಥೆಗೆ ಶಿಲಾನ್ಯಾಸ ನೆರವೇರಿದ ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದರು.ತಿದ್ದುಪಡಿ ವಿಧೇಯಕ ರೂಪಿಸುವ ವಿಷಯದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಕಾಳಜಿ ಶ್ಲಾಘನೀಯ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಬಿಜೆಪಿ ಬದ್ಧವಾಗಿದ್ದು, ರಾಜ್ಯ ಸರಕಾರ ಸ್ಪಂದಿಸಲಿದೆ. ವಿಧೇಯಕಕ್ಕೆ ಬಿಜೆಪಿ ಸಂಸದರು ಬೆಂಬಲಿಸಲಿದ್ದು, ಎನ್‌ಡಿಎ ಸದಸ್ಯರ ಮನವೊಲಿಸಿ ಬೆಂಬಲ ಕೊಡಿಸಲಿದೆ. ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಪಾಸು ಮಾಡಿಸಬೇಕು.

ಶಿಫಾರಸು

ಡಾ.ಡಿ.ಎಂ.ನಂಜುಂಡಪ್ಪ ವರದಿ ಶಿಫಾರಸು, ರಾಯಚೂರು ಜಿಲ್ಲೆ ಜನರ ಬೇಡಿಕೆಯಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಶಾಖೆ ರಾಯಚೂರಿಗೆ ಮಂಜೂರು ಮಾಡಲು ರಾಜ್ಯ ಸರಕಾರ ಶಿಫಾರಸು ಮಾಡಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದಾಗ ನೆರೆದ ಜನರು ಚಪ್ಪಾಳೆ ತಟ್ಟಿದರು.

ಗುಲ್ಬರ್ಗದಲ್ಲಿ ಇದೇ ಅ.18ಕ್ಕೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿ ಶಿಫಾರಸು ಮಾಡಲಿದ್ದು, ಕೇಂದ್ರ ಸರಕಾರದ ಒಪ್ಪಿಗೆ ಕೊಡಿಸುವುದಕ್ಕೆ ರಾಜ್ಯದ ಕೇಂದ್ರ ಸಚಿವರು ಒತ್ತಡ ತರಬೇಕು.

ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿದ್ದು, ಗುಲ್ಬರ್ಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಗದೀಶಶೆಟ್ಟರ್ ಭರವಸೆ ನೀಡಿದರು.



ಪಕ್ಕ ನೋಟ

ಕರೆಯದೇ ಬಂದರು

ಸಮಾರಂಭದ ಆಮಂತ್ರಣ ಪತ್ರದಲ್ಲಿ ಹೆಸರಿದ್ದಿಲ್ಲ. ಹೆಸರು ಹಿಡಿದು ಕರೆಯಲಿಲ್ಲ. ಆದರೂ ಬಿಜೆಪಿ, ಕಾಂಗ್ರೆಸ್‌ನ ಕೆಲ ಹಿರಿಯ-ಕಿರಿಯ ಮುಖಂಡರು ವೇದಿಕೆಯಲ್ಲಿ ಕುಳಿತು ಮುಂದಿನ ಸಾಲಿನಲ್ಲಿ ಕುಳಿತ ಸ್ವಪಕ್ಷದ ಮುಖಂಡರ ಟೀಕೆಗೆ ಗ್ರಾಸವಾದರು.

ಮುಸಿ ಮುಸಿ ನಗು

ಶಾಸಕ ಸೈಯದ್ ಯಾಸೀನ್ ಕನ್ನಡದಲ್ಲಿ ಮಾತನಾಡಲು ತಿಣುಕಾಟ, ಸಂಸದ ಪಕ್ಕೀರಪ್ಪ ತಡವರಿಕೆ ವೇದಿಕೆಯಲ್ಲಿದ್ದವರ ಮುಸಿ ಮುಸಿ ನಗುವಿಗೆ ಕಾರಣವಾಯಿತು. ಈ ನಗುವಿನಲ್ಲಿ ಕೇಂದ್ರ ಸಚಿವರಾದ ಮೊಯಿಲಿ, ಖರ್ಗೆ, ಮುಖ್ಯಮಂತ್ರಿ ಶೆಟ್ಟರ್, ಸಚಿವೆ ಕರಂದ್ಲಾಜೆ ಹಿಂದೆ ಬೀಳಲಿಲ್ಲ.

ಹೆಚ್ಚುವರಿ ಬಂಪರ್

ಚಳವಳಿ, ಪ್ರತಿಭಟನೆಗಳಿಗೆ ಅವಕಾಶವಿಲ್ಲದಂತೆ ಜಿಲ್ಲಾ ಆಡಳಿತ ಮುಂಚಿತವಾಗಿಯೇ ಪಾಬಂದಿ ಮಾಡಿತ್ತು. ಹೀಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದ ನಿಯೋಗಕ್ಕೆ ನೇರ ಭೇಟಿ ಅವಕಾಶ. ವಿದ್ಯುತ್ ಪ್ರಸರಣ ಮಾರ್ಗ, ಉಪ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚುವರಿ ಪರಿಹಾರ ಕೊಡಿಸುವುದು ಈ ಮಾತುಕತೆ ಫಲಶೃತಿ. ಕೇಂದ್ರ ಸಚಿವ ವೀರಪ್ಪ ಮೊಯಿಲಿ ನೀಡಿದ ಸೂಚನೆ ರಾಜ್ಯ ಸರಕಾರ ಪಾಲಿಸಬೇಕಷ್ಟೇ.

ಮಾತಿನ ಚಕಮಕಿ

ಸಮಾರಂಭದ ವಿಐಪಿ ಪ್ರವೇಶ ದ್ವಾರದಲ್ಲಿ ಪೊಲೀಸರ ಬಿಗಿ ಕಾವಲು. ಪಾಸ್ ಇದ್ದವರಿಗೆ ಮಾತ್ರ ಒಳಗೆ ಬರಲು ಅವಕಾಶ. ಪಾಸ್ ಇಲ್ಲದೇ ಒಳ ಬಂದ ಬಿಜೆಪಿ, ಕಾಂಗ್ರೆಸ್ ಮುಖಂಡರ ಜತೆ ಮಾತಿನ ಚಕಮಕಿ, ಪರಿಚಯದ ಪೊಲೀಸ್ ಅಧಿಕಾರಿ ಹೇಳಿದ ವಾತಾವರಣ ತಿಳಿ. ಸಮಾರಂಭ ಶುರುವಾಗುವ ತನಕ ಇದು ನಡೆದೇ ಇತ್ತು.

ಧಾರಾಳಿ

ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಧಾರಾಳತನವೂ ನೆರೆದವರ ಕಣ್ಣಿಗೆ ರಾಚಿತು. ಕೇವಲ ಮೂರು ತಾಸುಗಳಲ್ಲಿ ಮುಗಿದ ಸಮಾರಂಭಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿದೆ. ಹವಾನಿಯಂತ್ರಿತ ವೇದಿಕೆ, ಹಿಂಬದಿ ವಿಐಪಿ ಮತ್ತು ಮಾಧ್ಯಮದವರು, ಆಹ್ವಾನಿತರಿಗೆ ಭೋಜನ ಸಭಾಂಗಣ, ಮಾಧ್ಯಮ ಗೋಷ್ಠಿ ಕೊಠಡಿ, ಭವ್ಯ ಸಭಾಂಗಣ ಎಲ್ಲೆಡೆಯೂ ಅದ್ಧೂರಿತನ.

ಕಿಕ್-ಶಾಕ್

ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಯಾವಾಗಲೂ ಹೇಳುತ್ತಿದ್ದ ಮಾತನ್ನು ಸಮಾರಂಭದಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ನೆನಪಿಸಿದರು. ಜೆ.ಎಚ್.ಪಟೇಲ್ ನನ್ನ ಬಳಿ ಶಾಕ್ ಕೊಡುವ ಇಂಧನ, ಕಿಕ್ ನೀಡುವ ಅಬಕಾರಿ ಖಾತೆಯಿದೆ ಯಾವುದು ಬೇಕು ಅದನ್ನು ತಗೊಳ್ಳಿ ಅಂತಿದ್ರು. ಈಗ ವೀರಪ್ಪಮೊಯಿಲಿ, ಶೋಭಾ ಕರಂದ್ಲಾಜ್ ಪವರ್‌ಫುಲ್ ಮಿನಿಸ್ಟ್ರು. ವಿದ್ಯುತ್ ಬೇಕಿರುವುದರಿಂದ ಶಾಕ್ ಅನುಭವಿಸಲು ತಯಾರಿದ್ದೇವೆ ಎಂದು ಖರ್ಗೆ ಹೇಳಿದಾಗ ನೆರೆದ ಜನ ಗೊಳ್ಳನೆ ನಕ್ಕರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ