Please enable javascript.ಕಂಪನಿಗೆ ಸೇರ್ಪಡೆ ಮಾಡುವಂತೆ ಒತ್ತಾಯ - ಕಂಪನಿಗೆ ಸೇರ್ಪಡೆ ಮಾಡುವಂತೆ ಒತ್ತಾಯ - Vijay Karnataka

ಕಂಪನಿಗೆ ಸೇರ್ಪಡೆ ಮಾಡುವಂತೆ ಒತ್ತಾಯ

Vijaya Karnataka Web 21 Sep 2013, 12:00 pm
Subscribe

ಹಟ್ಟಿಚಿನ್ನದಗಣಿ ಕಂಪನಿ ಕೆಲಸಗಾರ ಗ್ರಾಹಕರ ಸಹಕಾರ ಸಂಘದ ನೌಕರರು ತಮ್ಮನ್ನು ಹಟ್ಟಿಗಣಿ ಕಂಪನಿಗೆ ಮರ್ಜ್‌ಮಾಡಿಕೊಳ್ಳಬೇಕು ಎಂದು ಬೇಡಿಕೆ ಸಲ್ಲಿಸಿ ಕಳೆದ 3 ತಿಂಗಳಿಂದ ವಹಿವಾಟು ಬಂದ್ ಮಾಡಿದ್ದಾರೆ.

ಕಂಪನಿಗೆ ಸೇರ್ಪಡೆ ಮಾಡುವಂತೆ ಒತ್ತಾಯ
ಹಟ್ಟಿಚಿನ್ನದಗಣಿ; ಹಟ್ಟಿಚಿನ್ನದಗಣಿ ಕಂಪನಿ ಕೆಲಸಗಾರ ಗ್ರಾಹಕರ ಸಹಕಾರ ಸಂಘದ ನೌಕರರು ತಮ್ಮನ್ನು ಹಟ್ಟಿಗಣಿ ಕಂಪನಿಗೆ ಮರ್ಜ್‌ಮಾಡಿಕೊಳ್ಳಬೇಕು ಎಂದು ಬೇಡಿಕೆ ಸಲ್ಲಿಸಿ ಕಳೆದ 3 ತಿಂಗಳಿಂದ ವಹಿವಾಟು ಬಂದ್ ಮಾಡಿದ್ದಾರೆ.

ಹಟ್ಟಿಚಿನ್ನದಗಣಿ ಕಂಪನಿ ಆಡಳಿತವರ್ಗದಿಂದ ಇವರ ಬೇಡಿಕೆ ಬಗ್ಗೆ ಸಕಾರತ್ಮಕ ಸೂಚನೆ ಇನ್ನೂ ಬಂದಿಲ್ಲ. ಆದರೆ ಚುನಾಯಿತ ಕಾರ್ಮಿಕ ಸಂಘದ ಮುಖಂಡರಿಂದ ಭರವಸೆ ಸಿಕ್ಕಿರುವುದರಿಂದ ಸಹಕಾರ ಸಂಘದ ವ್ಯವಹಾರವನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಅಡುಗೆ ಅನಿಲ, ಫುಡ್‌ಕಿಟ್ ಹಾಗೂ ಎಬಿ ಸ್ಕೀಂನ ಸಾಮಗ್ರಿಗಳ ವ್ಯವಹಾರ ಮಾತ್ರ ನಡೆಯುತ್ತಿದೆ. ಉಳಿದಂತೆ ಕಿರಾಣಿ, ಜನರಲ್ ಸ್ಟೋರ್, ಬಟ್ಟೆ ವ್ಯವಹಾರವನ್ನು ಕಳೆದ 3 ತಿಂಗಳಿಂದ ನಿಲ್ಲಿಸಲಾಗಿದೆ.

ಇತಿಹಾಸ: ಹಟ್ಟಿಚಿನ್ನದಗಣಿ ಕಂಪನಿಯು ಹೆದರಾಬಾದ್ ನಿಜಾಮನ ಆಡಳಿತದ ಸುರ್ಪದಿಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಅಂದರೆ 1947 ರಲ್ಲಿ ಈ ಸಹಕಾರ ಸಂಘವನ್ನು (ನೊ.ಸಂ: 18071) ಸ್ಥಾಪನೆ ಮಾಡಲಾಗಿದೆ. ಗಣಿ ಕಂಪನಿಯಲ್ಲಿದ್ದ ಆಗಿನ ಬ್ರಿಟಿಷ್‌ಅಧಿಕಾರಿಗಳು ಕಾರ್ಮಿಕ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ದೊರಕಿಸಿಕೊಡಲು ಈ ಸಹಕಾರ ಸಂಘ ಸ್ಥಾಪಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಅಂದರೆ 6 ದಶಕಕ್ಕೂ ಹೆಚ್ಚು ಕಾಲ ಸಹಕಾರ ಸಂಘ ನಿರಾಂತಕವಾಗಿ ನಡೆದುಕೊಂಡು ಬಂದಿದೆ. ಹಟ್ಟಿಚಿನ್ನದಗಣಿ ಕಂಪನಿ ನೌಕರರು ಮಾತ್ರ ಇದರ ಷೇರುದಾರರಾಗಿದ್ದು, ಅವರಿಗೆ ಮಾತ್ರ ಈ ಸಹಕಾರ ಸಂಘದಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸಹಕಾರ ಸಂಘದಲ್ಲಿ ಖರೀದಿ ಮಾಡಿದ ವಸ್ತುಗಳ ಮೊತ್ತವನ್ನು ಗಣಿ ಕಂಪನಿ ಕಾರ್ಮಿಕರ ತಿಂಗಳ ಸಂಬಳದಲ್ಲಿ ಕಡಿತಮಾಡಿ ಸಹಕಾರ ಸಂಘಕ್ಕೆ ವರ್ಗಾಯಿಸುವ ವ್ಯವಸ್ಥೆ ಮೊದಲಿನಿಂದ ಮಾಡಲಾಗಿತ್ತು.

ಕಾರಣ: ಕಳೆದ 3 ತಿಂಗಳಿಂದ ವ್ಯವಹಾರ ನಿಲ್ಲಿಸಲು ಪ್ರಮುಖ ಕಾರಣ ಸಹಕಾರ ಸಂಘ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ವ್ಯಾಪಾರಿಗಳಿಂದ ಸ್ಪರ್ಧೆ ಎದುರಿಸಿ ಅತಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಕೊಡಲಾಗದೆ ತನ್ನ ವ್ಯವಹಾರದಲ್ಲಿ ಇಳಿಮುಖ ಕಾಣುತ್ತ ಬಂದಿದೆ. ಇದಲ್ಲದೆ ಸದ್ಯ ಸಹಕಾರ ಸಂಘದಲ್ಲಿ 2,500 ಜನ ಸದಸ್ಯ ಷೇರುದಾರ ಕಾರ್ಮಿಕರಿದ್ದರೂ ಇದರಲ್ಲಿ ಬಹುತೇಕರು ಇಲ್ಲಿಂದ ವಸ್ತುಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಿದ್ದು , ವ್ಯವಹಾರ ಕುಂದಲು ಕಾರಣವಾಗಿದೆ.

ಬೇಡಿಕೆ: ಕಳೆದ ಮೂರ್ನಾಲ್ಕು ವರ್ಷಗಳಿಂದ ವ್ಯವಹಾರದಲ್ಲಿ ಇಳಿಮುಖಗೊಂಡಿದ್ದರಿಂದ ಸಹಕಾರ ಸಂಘದಲ್ಲಿ ಕೆಲಸ ಮಾಡುವ 32 ಜನ ಸಿಬ್ಬಂದಿ, ಮುಂದೆ ಸಂಬಳಕ್ಕೆ ಪರದಾಡಬೇಕಾಗುತ್ತದೆ ಎಂದು ಮುಂದಾಲೋಚಿಸಿ ಸಹಕಾರ ಸಂಘವನ್ನು ಗಣಿ ಕಂಪನಿಯೇ ಒಂದು ಡಿರ್ಪಾಟ್‌ಮೆಂಟ್ ಸ್ಟೋರ್ ಎಂದು ಬದಲಾಯಿಸಿಕೊಂಡು ನಮ್ಮನ್ನು ಹಟ್ಟಿಚಿನ್ನದಗಣಿ ಕಂಪನಿಗೆ ಮರ್ಜ್‌ಮಾಡಿಕೊಳ್ಳಿ ಎಂದು ಕಳೆದ ಎರಡು ವರ್ಷದಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಈ ಮಧ್ಯೆ ಸಹಕಾರ ಸಂಘದ ನಿರ್ದೇಶಕ ಮಂಡಳಿ ಇದೇ ಭಾನುವಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿದ್ದು, ಸಭೆಯಲ್ಲಿ ಸಂಘದ ಕಾಯಿದೆ ರೀತ್ಯ ಸ್ಥಾಪನೆಗೊಳಿಸಲು ನಿರ್ಣಯ ತೆಗೆದುಕೊಳ್ಳಲಿದೆ ಎಂದು ಗೊತ್ತಾಗಿದೆ.

ಕೋಟ್...

ಸಹಕಾರ ಸಂಘವು ವ್ಯವಹಾರ ನಡೆಸುವುದು, ನಿಲ್ಲಿಸುವುದು ಅದರ ನಿರ್ದೇಶಕ ಮಂಡಳಿಗೆ ಬಿಟ್ಟಿದ್ದು. ಗಣಿ ಕಂಪನಿಯ ಕಾರ್ಮಿಕರ ಅನುಕೂಲಕ್ಕಾಗಿ ಕಾರ್ಮಿಕರ ಕಲ್ಯಾಣ ಅಡಿ ಡಿರ್ಪಾಟ್‌ಮೆಂಟ್ ಸ್ಟೋರ್ ಸ್ಥಾಪನೆ ಮಾಡುವ ಚಿಂತನೆ ಇದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರನ್ನೊಳಗೊಂಡ ಉಪಪ್ರಧಾನ ವ್ಯವಸ್ಥಾಪಕ(ಭದ್ರತಾ) ಬಸವರಾಜ ದೊಡ್ಡಮನಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಗಿದೆ. ಸಮಿತಿ ವರದಿ ನೀಡಿದ ನಂತರ ಮುಂದಿನ ಕ್ರಮ ಆಡಳಿತವರ್ಗ ತೆಗೆದುಕೊಳ್ಳಲಿದೆ.

-ಅಶೋಕ,ಆರ್.ವಾಲ್ಮೀಕಿ, ಪ್ರಧಾನ ವ್ಯವಸ್ಥಾಪಕರು ಹಚಿಗ

ಹಟ್ಟಿಚಿನ್ನದಗಣಿ ಕಂಪನಿಯೇ ಒಂದು ಡಿರ್ಪಾಟ್‌ಮೆಂಟ್ ಸ್ಟೋರ್ ಮಾಡಿ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಹೊರೆಯಾಗದ ಬೆಲೆಯಲ್ಲಿ ಕೊಡಬೇಕು. ಈಗಿನ ಸಹಕಾರ ಸಂಘದ ಸಿಬ್ಬಂದಿಯನ್ನು ಹಟ್ಟಿಚಿನ್ನದಗಣಿ ಕಂಪನಿಗೆ ಮರ್ಜ್‌ಮಾಡಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆ. ಈ ತಿಂಗಳ 27 ರಂದು ಬೆಂಗಳೂರಲ್ಲಿ ನಡೆಯುವ ಕಂಪನಿಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ವಿಶ್ವಾಸವಿದೆ.

-ಎಸ್.ಎಂ.ಶಫಿ, ಅಧ್ಯಕ್ಷ, ಹಚಿಗ ಕಂಪನಿ ಕಾರ್ಮಿಕ ಸಂಘ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ