ಆ್ಯಪ್ನಗರ

ರಾಯಚೂರು ಕೃಷಿ ವಿವಿ 7ನೇ ಘಟಿಕೋತ್ಸವ ಜೂನ್ 3ಕ್ಕೆ

ರಾಯಚೂರು ಕೃಷಿ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ, ಜೂನ್ 3ರಂದು ಬೆಳಗ್ಗೆ 11ಕ್ಕೆ ನಡೆಯಲಿದ್ದು, ಒಟ್ಟು 33 ಚಿನ್ನದ ಪದಕಗಳನ್ನು ಸಾಧಕ ಪದವೀಧರರಿಗೆ ವಿತರಿಸಲಾಗುವುದು ಎಂದು ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ ಹೇಳಿದರು.

ವಿಕ ಸುದ್ದಿಲೋಕ 1 Jun 2017, 8:06 am
ರಾಯಚೂರು; ರಾಯಚೂರು ಕೃಷಿ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ, ಜೂನ್ 3ರಂದು ಬೆಳಗ್ಗೆ 11ಕ್ಕೆ ನಡೆಯಲಿದ್ದು, ಒಟ್ಟು 33 ಚಿನ್ನದ ಪದಕಗಳನ್ನು ಸಾಧಕ ಪದವೀಧರರಿಗೆ ವಿತರಿಸಲಾಗುವುದು ಎಂದು ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ ಹೇಳಿದರು.
Vijaya Karnataka Web  7 3
ರಾಯಚೂರು ಕೃಷಿ ವಿವಿ 7ನೇ ಘಟಿಕೋತ್ಸವ ಜೂನ್ 3ಕ್ಕೆ


ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘‘ವಿವಿ ಪ್ರೇಕ್ಷಾಗೃಹದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಕೇಂದ್ರದ ನೀತಿ ಆಯೋಗದ ಸದಸ್ಯ ಪ್ರೊ.ರಮೇಶ್ ಚಂದ್ ಅವರು ಮುಖ್ಯ ಅತಿಥಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಪಾಲ್ಗೊಳ್ಳುವ ಸಾಧ್ಯತೆಯಿದೆ’’ ಎಂದರು.

‘‘ಘಟಿಕೋತ್ಸವದಲ್ಲಿ ಒಟ್ಟು 374 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕ ವಿಭಾಗದಲ್ಲಿ 274 ಮಂದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 255 ಜನ ಖುದ್ದು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 107 ಜನ ಅರ್ಜಿ ಸಲ್ಲಿಸಿದ್ದು, ಈ ಪೈಕಿ 84 ಪದವೀಧರರು ಖುದ್ದು ಹಾಜರಾಗಲಿದ್ದಾರೆ. ಬಿಎಸ್ಸಿ(ಕೃಷಿ ವಿಭಾಗ)13 ಹಾಗೂ ಕೃಷಿ (ತಾಂತ್ರಿಕ)7 ಚಿನ್ನದ ಪದಕಗಳನ್ನು ನೀಡಲಾಗುತ್ತದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್ಸಿ(ಕೃಷಿ) 9 ಹಾಗೂ ಎಂಟೆಕ್(ಕೃಷಿ ತಾಂತ್ರಿಕ)ದಲ್ಲಿ 1 ಚಿನ್ನದ ಪದಕ ಮತ್ತು ಪಿಎಚ್‌ಡಿಯಲ್ಲಿ 5 ಚಿನ್ನದ ಪದಕಗಳನ್ನು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ’’ ಎಂದು ಪಿ.ಎಂ.ಸಾಲಿಮಠ ತಿಳಿಸಿದರು.

ಸಸಿಪ್ರಿಯಾ, ಗುರುನಾನಂದ್‌ಗೆ ಐದು ಚಿನ್ನ: ರಾಯಚೂರು ಕೃಷಿ ವಿವಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೇರಳ ಮೂಲದ ಸಸಿಪ್ರಿಯಾ ಹಾಗೂ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಗುರುನಾನಂದ್ ಅವರು ತಲಾ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ’’ ಎಂದು ಹೇಳಿದರು.

‘‘ಹೈ.ಕ. ಪ್ರಾದೇಶಿಕಾಭಿವೃದ್ಧಿ ಮಂಡಳಿಯಿಂದ ಕಲಬುರಗಿಯಲ್ಲಿರುವ ವಿವಿ ಪಿಜಿ ಸೆಂಟರ್‌ಗೆ 10 ಕೋಟಿ ರೂ. ಅನುದಾನ ದೊರೆತಿದ್ದು, ಮೂಲ ಸವಲತ್ತು ದೊರಕಿಸಲು ವ್ಯಯಿಸಲಾಗುತ್ತಿದೆ. ರಾಜ್ಯ ಸರಕಾರದಿಂದ 2017-18ನೇ ಸಾಲಿಗೆ ಯೋಜನೆ ಅಡಿ 35ಕೋಟಿ ರೂ. ಹಾಗೂ ಯೋಜನೇತರ ಅಡಿ 47ಕೋಟಿ ರೂ. ಮಂಜೂರಾಗಿದೆ. ಐಸಿಎಆರ್, ಇಕ್ರಿಸ್ಯಾಟ್ ಇತರ ಸಂಶೋಧನಾ ಸಂಸ್ಥೆಗಳಿಂದಲೂ ವಿವಿಗೆ ಸಾಕಷ್ಟು ಅನುದಾನ ಲಭ್ಯವಾಗುತ್ತಿದೆ’’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ವಿವಿ ಕುಲಸಚಿವ ಡಾ.ಚಂದರಗಿ, ಡಾ.ಶಂಕರಗೌಡ, ಡಾ.ಮೇಟಿ, ಡಾ.ಪ್ರಮೋದ್ ಕಟ್ಟಿ ಸೇರಿ ಇತರರಿದ್ದರು.

...............
ಇದುವರೆಗೆ 9 ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ನಡೆಸಿದ್ದು, 58 ಪದವೀಧರರಿಗೆ ನೌಕರಿ ದೊರಕಿಸಲಾಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ಕಚೇರಿಯಿಂದ ಒಬ್ಬ ಪ್ರತಿನಿಧಿ ನೇಮಕಗೊಳ್ಳುವಲ್ಲಿ ಆಗಿರುವ ವಿಳಂಬದಿಂದ ನೇಮಕಾತಿ ಪ್ರಕ್ರಿಯೆಗೆ ತಡವಾಗಿದೆ.

-ಡಾ.ಪಿ.ಎಂ.ಸಾಲಿಮಠ, ಕುಲಪತಿ, ರಾಯಚೂರು ಕೃಷಿ ವಿವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ