ಆ್ಯಪ್ನಗರ

ಅಂಗನವಾಡಿಗೆ ಮುಳ್ಳಿನ ಹಾದಿ-ಬಂಧಿಯಲ್ಲಿ ಕಂದಮ್ಮಗಳು!

ಸಮೀಪದ ಬಿ.ಗಣೇಕಲ್‌ ಗ್ರಾಮದ ಹೊರವಲಯದಲ್ಲಿರುವ ಅಂಗನವಾಡಿ ಕೇಂದ್ರ ಮುಳ್ಳುಕಂಟಿಯಲ್ಲಿ ಬಂಧಿ ಆಗಿದ್ದು, ಶಿಶು ಕೇಂದ್ರ ಪ್ರವೇಶಾತಿ ಮಕ್ಕಳಿಗೆ ಮುಳ್ಳಿನ ಹಾದಿಯೇ ಅನಿವಾರ್ಯವಾಗಿದೆ.

Vijaya Karnataka 21 Jun 2019, 5:00 am
ದೇವದುರ್ಗ : ಸಮೀಪದ ಬಿ.ಗಣೇಕಲ್‌ ಗ್ರಾಮದ ಹೊರವಲಯದಲ್ಲಿರುವ ಅಂಗನವಾಡಿ ಕೇಂದ್ರ ಮುಳ್ಳುಕಂಟಿಯಲ್ಲಿ ಬಂಧಿ ಆಗಿದ್ದು, ಶಿಶು ಕೇಂದ್ರ ಪ್ರವೇಶಾತಿ ಮಕ್ಕಳಿಗೆ ಮುಳ್ಳಿನ ಹಾದಿಯೇ ಅನಿವಾರ್ಯವಾಗಿದೆ.
Vijaya Karnataka Web children bonded with thorns
ಅಂಗನವಾಡಿಗೆ ಮುಳ್ಳಿನ ಹಾದಿ-ಬಂಧಿಯಲ್ಲಿ ಕಂದಮ್ಮಗಳು!


ಬಿ.ಗಣೇಕಲ್‌ ಗ್ರಾಮದ ಹೊರವಲಯದಲ್ಲಿರುವ ಅಂಗನವಾಡಿ ಕೇಂದ್ರದ ಹಿಂದುಗಡೆ ಬೆಟ್ಟವಿದೆ. ಹಿಂದೆಲ್ಲ ಬೃಹದಾಕಾರದ ಗಿಡಮರ ಮುಳ್ಳಿನಗಿಡಗಳು ಆಳೆತ್ತರಕ್ಕೆ ಬೆಳೆದಿವೆ. ಕಾಲಿಡದಷ್ಟು ಜಾಗವೂ ಇಲ್ಲದಂತಾಗಿದೆ. ಅಂಗನವಾಡಿ ಕೇಂದ್ರ ಪ್ರಾರಂಭದಿಂದಲೂ ಆಟದ ಮೈದಾನದಿಂದ ಇಲ್ಲಿಗೆ ಬರುವ ಮಕ್ಕಳು ವಂಚಿತರಾಗಿದ್ದಾರೆ. ಇದೀಗ ಕೇಂದ್ರದ ಎಡಬಲ ಸೇರಿ ಮುಂದಿನ ಮೈದಾನವೂ ಮುಳ್ಳುಕಂಟಿ ಗಿಡಗಳಿಂದ ಕೂಡಿದೆ. ಎಲ್ಲೇ ಕಾಲಿಟ್ಟರೂ ಮುಳ್ಳುಗಳು ತಾಕುತ್ತವೆ. ಸರೀಸೃಪಗಳ ಭೀತಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳಿಗೆ ಹೆಚ್ಚಿದೆ. ಕೇಂದ್ರದ ಸುತ್ತಲೂ ಬೆಳೆದಿರುವ ಮುಳ್ಳುಕಂಟಿ ಕಡಿದು ಸ್ವಚ್ಛತೆ ಕೈಗೊಳ್ಳುವಂತೆ ಹತ್ತಾರು ಬಾರಿ ಇಲಾಖೆ ಸೇರಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾರೊಬ್ಬರೂ ಮಕ್ಕಳ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬಂಧನದಲ್ಲಿ ಕಂದಮ್ಮಗಳು: ಬಿ.ಗಣೇಕಲ್‌ ಗ್ರಾಮದ ಹೊರವಲಯದಲ್ಲಿರುವ ಅಂಗನವಾಡಿ ಕೇಂದ್ರ ಸುತ್ತಲೂ ಆತಂಕ ಸೃಷ್ಟಿಸುವ ಪರಿಸರ ನಿರ್ಮಾಣ ಆಗಿರುವುದರಿಂದ ಪಾಲಕರು ಮಕ್ಕಳನ್ನು ಶಿಶು ಕೇಂದ್ರಕ್ಕೆ ಕಳಿಸಿಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಕೇಂದ್ರದಿಂದ ಮಕ್ಕಳನ್ನು ಹೊರಗಡೆ ಬಿಡುವುದಿಲ್ಲ ಎಂದರೆ ಮಾತ್ರ ಕಳಿಸಿಕೊಡುತ್ತೇವೆ ಎಂದು ಷರತ್ತು ವಿಧಿಸಿ ಕೆಲ ಪಾಲಕರು ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಿದ್ದಾರೆ. ಪಾಲಕರ ಆದೇಶದಂತೆ ಮಕ್ಕಳನ್ನು ಕಟ್ಟಡ ಕೇಂದ್ರದಿಂದ ಹೊರಗಡೆ ಆಟವಾಡÜಲು ಬಿಡುವುದು ಅಸಾಧ್ಯವಾಗಿದೆ. ಪರಿಣಾಮ, ಕುಣಿದಾಡುವ ಪಾದಗಳಿಗೆ ಸರಪಳಿ ಬಿಗಿದಂತಾಗಿದೆ. ಕೋಣೆಯಲ್ಲಿಯೇ ಮಕ್ಕಳು ಇರಬೇಕಾದ ಸ್ಥಿತಿ ಬಂದೊದಗಿದೆ. ಇದು ಮಕ್ಕಳ ಬೆಳವಣಿಗೆ ಸೇರಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರಜ್ಞಾವಂತರು.

ತಿಪ್ಪೆಗುಂಡಿ: ಬಿ.ಗಣೇಕಲ್‌ ಗ್ರಾಮದ ಹೊರವಲಯದಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತಲೂ ಮುಳ್ಳುಕಂಟಿ, ಮರಗಳು ಬೆಳದಿರುವುದು ಒಂದೆಡೆಯಾದರೆ ಇತ್ತೀಚೆಗೆ ಗ್ರಾಮದ ಪ್ರಭಾವಿ ನಾಯಕರೊಬ್ಬರು ಅಂಗನವಾಡಿ ಕೇಂದ್ರದ ಮುಂಭಾಗದಲ್ಲೇ ತಿಪ್ಪೆಗುಂಡಿ ಹಾಕಿ ಇಡೀ ವಾತಾವರಣವನ್ನೇ ಕಲುಷಿತಗೊಳಿಸಿದ್ದಾರೆ. ಕಳೆದ ವಾರ ಸುರಿದ ಮಳೆಗೆ ತಿಪ್ಪೆಯಲ್ಲಿನ ಸಗಣಿ ಅಂಗನವಾಡಿ ಕೇಂದ್ರದ ಮೈದಾನವೆಲ್ಲ ಆವರಿಸಿಕೊಂಡಿತ್ತು. ವಾರದವೆರೆಗೆ ಗಬ್ಬುವಾಸನೆ ಹರಡಿತ್ತು ಎಂದು ಕಾರ್ಯಕರ್ತೆಯರು ತಿಳಿಸಿದ್ದಾರೆ.

----

ಬಿ.ಗೇಣಕಲ್‌ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ಮೇಲ್ವಿಚಾರಕರಿಗೆ ಸೂಚಿಸುವೆ. ಅಲ್ಲಿನ ಗ್ರಾ.ಪಂ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕೇಂದ್ರ ಸುತ್ತಲೂ ಸ್ವಚ್ಛಗೊಳಿಸಲಾಗುತ್ತದೆ.

-ಬಿ.ಎಸ್‌.ಹೊಸಮನಿ, ಪ್ರಭಾರಿ ಸಿಡಿಪಿಒ ದೇವದುರ್ಗ

ಬಿ.ಗಣೇಕಲ್‌ ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತಲೂ ಮುಳ್ಳುಕಂಟಿಗಳು ಬೆಳೆದಿವೆ. ಹಾವು, ಚೇಳುಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಕೇಂದ್ರ ಮುಂಭಾಗದಲ್ಲೇ ತಿಪ್ಪೆಗುಂಡಿ ಹಾಕಿರುವುದರಿಂದ ಅಲ್ಲಿನ ವಾತಾವರಣ ಕಲುಷಿತಗೊಂಡಿದೆ. ಶಿಶು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸ್ವಚ್ಛಗೊಳಿಸುವಂತೆ ಗ್ರಾ.ಪಂ.ಗೆ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ.

-ಆಂಜಿನೇಯ ನಾಯಕ ಸಮುದ್ರ ಬಿ.ಗಣೇಕಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ