ಆ್ಯಪ್ನಗರ

ಕರೆಂಟ್‌ ಬಂತು, ನೆಟ್‌ವರ್ಕ್‌ ಹೋಯ್ತು!

ನಗರದ ಎಪಿಎಂಸಿಯಲ್ಲಿ ಇರುವ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿದ್ಯುತ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ.

Vijaya Karnataka Web 20 Apr 2018, 5:00 am
ಸಿಂಧನೂರು : ನಗರದ ಎಪಿಎಂಸಿಯಲ್ಲಿ ಇರುವ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿದ್ಯುತ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ.
Vijaya Karnataka Web RAC-RCH19SND2


ಕಳೆದ ಶುಕ್ರವಾರ ಹೊರತುಪಡಿಸಿದರೆ, ಇಲ್ಲಿಯವರೆಗೆ ಕಚೇರಿಯಲ್ಲಿ ನಿಗದಿತ ಕೆಲಸಗಳು ನಡೆಯುತ್ತಿಲ್ಲ. ಎಪಿಎಂಸಿಯವರು ವಿದ್ಯುತ್‌ ಕಂಬಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸೋಮವಾರ, ಮಂಗಳವಾರ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಈ ಸಮಸ್ಯೆ ಸರಿಪಡಿಸಿದ ಬಳಿಕ ಬುಧವಾರ ನೆಕ್‌ವರ್ಕ್‌ ಇಲ್ಲವಾಗಿದೆ. ಮೂರು ದಿನಗಳಿಂದ ವಿದ್ಯುತ್‌ ಹಾಗೂ ನೆಟ್‌ವರ್ಕ್‌ ಕೈಕೊಟ್ಟಿದ್ದರಿಂದ ಜನರಿಗೆ ತೊಂದರೆಯಾಗಿದೆ. ದಿನವೂ ಕಚೇರಿಗೆ ಬರುತ್ತಿರುವ ಜನ ಸಮಸ್ಯೆ ಕಂಡು ಗೋಳಾಡುವಂತಾಗಿದೆ.

ಹಿಡಿಶಾಪ: ಕಚೇರಿಯಲ್ಲಿ ನೆಟ್‌ವರ್ಕ್‌ ಇಲ್ಲದೇ ಇರುವುದರಿಂದ ಬುಧವಾರ ಬೆಳಗ್ಗೆ ಸಿಬ್ಬಂದಿಯೂ ಕಚೇರಿಯತ್ತ ಸುಳಿಯಲಿಲ್ಲ. ಕೆಲವರು ಬಂದರೂ ಅಲ್ಲಲ್ಲಿ ಸುತ್ತಾಡುತ್ತಿರುವುದು ಕಂಡುಬಂತು. ಜನರು ಮಾತ್ರ ಒಳಗಡೆ ಯಾರೂ ಇಲ್ಲದ್ದನ್ನು ನೋಡಿ ಮತ್ತೆ ಏನಾಯಿತು? ಎಂದು ಪ್ರಶ್ನಿಸುತ್ತಿರುವುದು ಕಂಡುಬಂತು. ಅಧಿಕಾರಿಗಳು ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸುವ ಕಾರಣಕ್ಕೆ ತಹಸಿಲ್‌ ಕಚೇರಿಯ ಕೆಎಸ್‌ಒನ್‌ ಕಚೇರಿಗೆ ಹೋಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು. ಆದರೆ ದಿನಗಳ ಕಾಲ ರಿಜಿಸ್ಟಾರ್‌ ಕಚೇರಿ ಕಾರ್ಯ ಸ್ಥಗಿತಗೊಳಿಸುವುದರಿಂದ ರಿಜಿಸ್ಪ್ರೇಷನ್‌, ಇಸಿ, ದಸ್ತಾವೇಜು ಸೇರಿ ಹಲವು ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ.

ನಿರುಪಯುಕ್ತ: ಉಪನೋಂದಣಿ ಕಚೇರಿಗಾಗಿ ಲಕ್ಷ ಗಟ್ಟಲೆ ಅನುದಾನ ಖರ್ಚು ಮಾಡಿ ಹಾಕಿರುವ ಜನರೇಟರ್‌ ನಿರುಪಯುಕ್ತವಾಗಿವೆ. ಕನೆಕ್ಷ ನ್‌ ಇಲ್ಲ ಎಂಬ ಕಾರಣಕ್ಕೆ ಜನರೇಟರ್‌ ಇಂದಿಗೂ ಆನ್‌ ಮಾಡಿಲ್ಲ. ಕೇವಲ ವೈಯಕ್ತಿಕ ಲಾಭಕ್ಕೆ ಬಡಿದಾಡುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಕಚೇರಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುತ್ತಿಲ್ಲ. ದಿನ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಮಧ್ಯವರ್ತಿಗಳ ಹಾವಳಿಯಿಂದ ಕಮಿಷನ್‌ ವ್ಯವಹಾರ ಹೆಚ್ಚಿದೆ. ಆದರೆ ಜನರಿಗೆ ಸೌಕರ್ಯ, ಕಚೇರಿಯಲ್ಲಿ ಸ್ವಚ್ಛತೆ ಮಾತ್ರ ಇಲ್ಲವಾಗಿದೆ. ಇದಲ್ಲದೇ ಕಳೆದ ಹಲವು ವರ್ಷಗಳಿಂದ ತಾಲೂಕಿನ ಕಾಯಂ ಉಪನೊಂದಣಾಧಿಕಾರಿ ಹುದ್ದೆ ಖಾಲಿ ಇದೆ. ಹೀಗಾಗಿ ಎಫ್‌ಡಿಸಿಯಾಗಿರುವ ಸಿಬ್ಬಂದಿಗೆ ಪ್ರಮುಖ ಹುದ್ದೆ ಭಾಗ್ಯ ಒದಗುತ್ತಿರುವುದು ನಿರಂತರವಾಗಿದೆ.

-----

ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದ್ದು, ಸರಿಹೋಗಲಿದೆ. ಜನರೇಟರ್‌ ಕನೆಕ್ಷ ನ್‌ ಇಲ್ಲದೇ ಇರುವುದರಿಂದ ಸ್ಥಗಿತಗೊಂಡಿದೆ.

-ನಾರಾಯಣ, ಉಪನೋಂದಣಾಧಿಕಾರಿ, ಸಿಂಧನೂರು

-------

ಮೂರು ದಿನಗಳಿಂದಲೂ ದಿನವೂ ರಿಜಿಸ್ಟರ್‌ ಕಚೇರಿಗೆ ಬರುತ್ತಿದ್ದೇನೆ. ಆದರೆ ಕರೆಂಟ್‌ ಇಲ್ಲ, ನೆಟ್‌ವರ್ಕ್‌ ಇಲ್ಲ ಎಂದು ಹೇಳುತ್ತಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಯೂ ಇರುವುದಿಲ್ಲ. ಹಳ್ಳಿಗಳಿಂದ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಬಂದು ಹಿಂದಿರುಗಬೇಕು. ಪ್ರತಿ ಕೆಲಸಕ್ಕೂ ಕಮಿಷನ್‌ ಕೊಡುವ ಪದ್ಧತಿ ಇಲ್ಲಿ ಹೆಚ್ಚಿದ್ದು, ಜನರ ಸಮಸ್ಯೆ ಆಲಿಸುವವರು ಇಲ್ಲವಾಗಿದೆ.

-ಬೀರಪ್ಪ, ಸಿಂಧನೂರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ