ಆ್ಯಪ್ನಗರ

ಚುನಾವಣೆ ಫಲಿತಾಂಶ: ವಿಜಯೋತ್ಸವ ಆಚರಣೆ

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸ್ಥಳೀಯ ಎಸ್‌ಆರ್‌ಪಿಎಸ್‌ ಪಿಯು ಕಾಲೇಜಿನ ಮುಂಭಾಗ ಜಮಾಯಿಸಿದ್ದ ವಿವಿಧ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಪಕ್ಷ ಗಳ ಬಾವುಟ ಹಾರಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ಸೋಮವಾರ ವಿಜಯೋತ್ಸವ ಆಚರಿಸಿದರು.

Vijaya Karnataka 4 Sep 2018, 5:00 am
ರಾಯಚೂರು : ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸ್ಥಳೀಯ ಎಸ್‌ಆರ್‌ಪಿಎಸ್‌ ಪಿಯು ಕಾಲೇಜಿನ ಮುಂಭಾಗ ಜಮಾಯಿಸಿದ್ದ ವಿವಿಧ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಪಕ್ಷ ಗಳ ಬಾವುಟ ಹಾರಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ಸೋಮವಾರ ವಿಜಯೋತ್ಸವ ಆಚರಿಸಿದರು.
Vijaya Karnataka Web RAC-RCH03HD01


ಅಭ್ಯರ್ಥಿಗಳು ಕುಟುಂಬಸ್ಥರ ಜತೆ ಬೆಳ್ಳಂಬೆಳಗ್ಗೆ ನಾನಾ ದೇವಸ್ಥಾನಗಳಿಗೆ ತೆರಳಿ ಗೆಲುವಿಗಾಗಿ ಪ್ರಾರ್ಥಿಸಿ ಮತ ಎಣಿಕೆ ಕೇಂದ್ರಗಳತ್ತ ಹೆಜ್ಜೆ ಹಾಕಿದರು. ವಾರ್ಡ್‌ವಾರು ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿರುವ ಮಾಹಿತಿ ಧ್ವನಿವರ್ಧಕಗಳ ಮೂಲಕ ತಿಳಿಸುತ್ತಿದ್ದಂತೆ ಬೆಂಬಲಿಗರು, ಪಟಾಕಿ ಸಿಡಿಸಿ, ಮೈಮೇಲೆ ಪರಸ್ಪರ ರಂಗು ಎರಚಿಕೊಂಡು ಕೇಕೆ ಹಾಕಿ ಸಂಭ್ರಮಿಸಿದರು. ಗೆಲುವು ಸಾಧಿಸಿದ ಅಭ್ಯರ್ಥಿಗಳು ಫಲಿತಾಂಶ ಹೊರಬೀಳುತ್ತಲೇ ಚುನಾವಣಾಧಿಕಾರಿಗಳು ನೀಡಿದ ಚುನಾವಣಾ ಪ್ರಮಾಣ ಪತ್ರ ಹಿಡಿದು ಗೆಲುವಿನ ನಗೆಯಿಂದ ಹೊರಗಡೆ ಆಗಮಿಸಿ ಜನರತ್ತ ಗೆಲುವಿನ ಚಿಹ್ನೆ ತೋರಿಸಿ ಬೆಂಬಲಿಗರನ್ನು ಆಲಿಂಗಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಬೆಂಬಲಿಗರು ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಎತ್ತಿಕೊಂಡು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮೆರವಣಿಗೆ ನಡೆಸಿದರು. ಮತ್ತೆ ಕೆಲವರು ಔತಣಕೂಟ ಏರ್ಪಡಿಸಿ ಅಭ್ಯರ್ಥಿಗಳ ಜತೆ ಸಂಭ್ರಮದಲ್ಲಿ ತೇಲಾಡಿದರು. ಗೆದ್ದ ಅಭ್ಯರ್ಥಿಗಳ ಕುಟುಂಬಗಳಲ್ಲೂ ಸಂಭ್ರಮ ಕಂಡುಬಂತು.

ಪೊಲೀಸ್‌ ಬಂದೋಬಸ್ತ್‌ : ರಾಯಚೂರು ನಗರಸಭೆಗೆ ಸ್ಪರ್ಧಿಸಿದ್ದ ನಾನಾ ಪಕ್ಷ ಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಿನ್ನಡೆ ಸಾಧಿಸುತ್ತಿದ್ದಂತೆ ಕೆಲವರು ಮತ ಎಣಿಕೆ ಕೇಂದ್ರದಿಂದ ಕಾಲ್ಕಿತ್ತಿದರೆ, ಮತ್ತೆ ಕೆಲವರು ಗೆಲುವಿನ ದಾರಿ ನೋಡುತ್ತಾ ಕುಳಿತರು. ಇನ್ನು ಕೆಲ ಅಭ್ಯರ್ಥಿಗಳು ಕೆಲವೇ ಮತಗಳ ಅಂತರದಲ್ಲಿ ಸೋಲನುಭವಿಸಿ ನಿರಾಸೆಯಿಂದ ಮತ ಎಣಿಕೆ ಕೇಂದ್ರದಿಂದ ಹೊರನಡೆದರು. ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಸಾವಿರಾರು ಜನರು ನೆರೆದಿದ್ದರಿಂದ ಅವರನ್ನು ನಿಯಂತ್ರಿಸಲು ಅಗತ್ಯ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಕಾಲೇಜಿನ ಸುತ್ತಮುತ್ತ ವಾಹನ ಸಂಚಾರ ನಿಷೇಧಿಸಿ ಬ್ಯಾರಿಕೇಡ್‌ ಹಾಕಲಾಗಿತ್ತು. ಕಾಲೇಜಿನ ಸುತ್ತ ನಡೆದಾಡಲು ಅನುವು ಮಾಡಿಕೊಡುವುದರ ಜತೆಗೆ ವಿಜಯೋತ್ಸವ ಆಚರಣೆಯ ಸುತ್ತಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ