ಆ್ಯಪ್ನಗರ

ವಿದೇಶಕ್ಕೆ ಹಾರಿದ ರೈತ ಮಹಿಳೆ

ಕೃಷಿ ಕ್ಷೇತ್ರದಿಂದ ರೈತರು ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಆಧುನಿಕ ಸಂಶೋಧನೆಗಳ ಬಗ್ಗೆ ರೈತರಿಗೆ ಪರಿಚಯಿಸಲು ಮುಂದಾಗಿರುವ ಕೇಂದ್ರ ಸರಕಾರ, ಜಿಲ್ಲೆಯ ಸಿಂಧನೂರಿನ ರೈತ ಮಹಿಳೆಗೆ ವಿದೇಶಕ್ಕೆ ಹಾರುವ ಅವಕಾಶ ಕಲ್ಪಿಸಿದೆ.

Vijaya Karnataka 28 Sep 2018, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web RAC-RCH27JD02


ಕೃಷಿ ಕ್ಷೇತ್ರದಿಂದ ರೈತರು ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಆಧುನಿಕ ಸಂಶೋಧನೆಗಳ ಬಗ್ಗೆ ರೈತರಿಗೆ ಪರಿಚಯಿಸಲು ಮುಂದಾಗಿರುವ ಕೇಂದ್ರ ಸರಕಾರ, ಜಿಲ್ಲೆಯ ಸಿಂಧನೂರಿನ ರೈತ ಮಹಿಳೆಗೆ ವಿದೇಶಕ್ಕೆ ಹಾರುವ ಅವಕಾಶ ಕಲ್ಪಿಸಿದೆ.

ಫಿಲಿಪ್ಪಿನ್ಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ತರಬೇತಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ಪರವಾಗಿ ವಿದೇಶಕ್ಕೆ ಹೋಗಿರುವ ರೈತ ಮಹಿಳೆ, ಹೊಸ ಪ್ರಯೋಗದತ್ತ ಮುಖ ಮಾಡಿದ್ದಾರೆ. ಭತ್ತದ ಕಣಜ ಖ್ಯಾತಿಯ ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಲಕ್ಷ್ಮಿ ಅವರು, ಅಕ್ಕಿ ಉತ್ಪಾದನೆ ಕ್ಷೇತ್ರದಲ್ಲಿ ಹೊಸದನ್ನು ಅರಿಯಲು ಉತ್ಸುಕರಾದ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಅಕ್ಕಿ ಉತ್ಪಾದನೆಗೆ ಸಂಬಂಧಿಸಿ ನಡೆದಿರುವ ಹೊಸ ಆವಿಷ್ಕಾರಗಳ ಮಾಹಿತಿ ತಿಳಿಯಲು ತರಬೇತಿ ನೆರವಿಗೆ ಬರಲಿದೆ.

ಯಾವಾಗ ?: ಫಿಲಿಪ್ಪಿನ್ಸ್‌ನ ಲಾಸ್ ಬನೋಸ್ ಲಗೂನಾ ಎಂಬಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯಲ್ಲಿ ಸೆ.24 ರಿಂದ 28ರ ವರೆಗೆ ತರಬೇತಿಯಿದೆ. ದೇಶದ ವಿವಿಧ ರಾಜ್ಯಗಳಿಂದ ಆರು ಜನ ರೈತ ಮಹಿಳೆಯರನ್ನು ಆಯ್ಕೆ ಮಾಡಿ ಕೇಂದ್ರ ಸರಕಾರ ತರಬೇತಿ ಕಳಿಸಿಕೊಟ್ಟಿದೆ. ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗ ಅಸ್ಸಾಂ, ಆಂಧ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆರು ಜನ ಮಹಿಳೆಯರನ್ನು ಕಳಿಸಲಾಗಿದೆ. ಸೆ.23ರಂದೇ ಆಯ್ದ ರೈತ ಮಹಿಳೆಯರು ಫಿಲಿಪ್ಪಿನ್ಸ್ ತಲುಪಿದ್ದಾರೆ.

ಮಾಹಿತಿ ವಿನಿಮಿಯ: ಉತ್ತಮ ಗುಣಮಟ್ಟದ ಅಕ್ಕಿ ಉತ್ಪಾದನೆ ನಿಟ್ಟಿನಲ್ಲಿ ಕೃಷಿಕರು ಅನುಸರಿಸಬೇಕಾದ ತಂತ್ರಗಾರಿಕೆ, ತಂತ್ರಜ್ಞಾನದ ಅಳವಡಿಕೆ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಜಮೀನಿನ ಆರೋಗ್ಯ ತಪಾಸಣೆ, ಜಮೀನಿನ ಸಿದ್ಧಪಡಿಸುವ ಬಗೆ, ರೋಗ ಹತೋಟಿ ಕ್ರಮಗಳು ಮತ್ತು ಕೀಟ ನಿರ್ವಹಣೆಗೆ ಸಂಬಂಧಿಸಿ ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರು ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ರೈತ ಮಹಿಳೆಯರಿಗೆ ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೀರು ನಿರ್ವಹಣೆ; ಗುಣಮಟ್ಟದ ಅಕ್ಕಿ ಉತ್ಪಾದನೆಯಲ್ಲಿ ನೀರಿನ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಈಚೆಗೆ ಕೈಗೊಂಡ ಸಂಶೋಧನೆಯಿಂದ ಬಯಲಾಗಿದೆ. ಫಿಲಿಪ್ಪಿನ್ಸ್‌ನ ಸಂಸ್ಥೆಯು ಸಹ ಈ ನಿಟ್ಟಿನಲ್ಲಿ ಸಾಧಿಸಿರುವ ಸಾಧನೆಗಳನ್ನು ತಿಳಿಸುತ್ತಿದೆ. ತರಬೇತಿಯಲ್ಲಿ ರೈತ ಮಹಿಳೆ ಲಕ್ಷ್ಮಿ ಅವರೊಂದಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ್ ಅವರೂ ಪಾಲ್ಗೊಂಡಿದ್ದಾರೆ. ಹೊರದೇಶದ ಕೃಷಿ ಸಂಬಂಧಿ ತರಬೇತಿಗಳು ಪುರುಷರಿಗೆ ಸೀಮಿತವೆಂಬ ದೂರುಗಳಿಗೆ ಈ ಪ್ರಕರಣ ಅಪವಾದ ಎನಿಸಿದ್ದು, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ದಾರಿಯಾಗಿದೆ.

----

ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವಿದೇಶದಲ್ಲಿ ತರಬೇತಿಗೆ ಸಿಂಧನೂರಿನ ರೈತ ಮಹಿಳೆಯನ್ನು ಆಯ್ಕೆ ಮಾಡಲಾಗಿದೆ. ಅಕ್ಕಿ ಉತ್ಪಾದನೆಯಲ್ಲಿನ ಈಚೆಗಿನ ಸಂಶೋಧನೆಗಳ ಮತ್ತು ಕೀಟ ನಿರ್ವಹಣೆ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕ ಮಹಿಳೆಯರ ಸಾಧನೆಗೆ ಒತ್ತು ಕೊಡಲಾಗುತ್ತಿದೆ.

-ಡಾ.ಚೇತನಾ ಪಾಟೀಲ್, ಜೆಡಿ, ಕೃಷಿ ಇಲಾಖೆ, ರಾಯಚೂರು

---

ಇದೊಂದು ಹೊಸ ಅನುಭವ. ಕೇಂದ್ರ ಸರಕಾರವು ತರಬೇತಿಗೆ ವಿದೇಶಕ್ಕೆ ತೆರಳುವ ತಂಡಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ಸಂತಸ ತಂದಿದೆ. ಅಕ್ಕಿ ಉತ್ಪಾದನೆಯಲ್ಲಿನ ಹೊಸ ಸಂಶೋಧನೆಗಳನ್ನು ಅರಿಯುವ ಪ್ರಯತ್ನ ಮಾಡುವೆ.

-ಲಕ್ಷ್ಮಿ, ರೈತ ಮಹಿಳೆ, ಎಲೆಕೂಡ್ಲಿಗಿ, ಸಿಂಧನೂರು ತಾಲೂಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ