ಆ್ಯಪ್ನಗರ

ಧಾರಾಕಾರ ಮಳೆ: ಜಲ ವಿದ್ಯುತ್ ಭರಪೂರ ಉತ್ಪಾದನೆ

ರಾಜ್ಯದ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿರುವುದು ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಮತ್ತೊಂದೆಡೆ ಜಲವಿದ್ಯುತ್ ಉತ್ಪಾದನೆ ಕೊರತೆ ನೀಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಜಲವಿದ್ಯುತ್ ಉತ್ಪಾದನೆ ಜಿಗಿತಕ್ಕೆ ಆಸ್ಪದ ನೀಡಿದೆ.

Vijaya Karnataka 15 Aug 2018, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web BLR-23HPT-02 - Copy


ರಾಜ್ಯದ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿರುವುದು ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಮತ್ತೊಂದೆಡೆ ಜಲವಿದ್ಯುತ್ ಉತ್ಪಾದನೆ ಕೊರತೆ ನೀಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಜಲವಿದ್ಯುತ್ ಉತ್ಪಾದನೆ ಜಿಗಿತಕ್ಕೆ ಆಸ್ಪದ ನೀಡಿದೆ.

ರಾಜ್ಯದ ಬೇಡಿಕೆಯಷ್ಟು ವಿದ್ಯುತ್ ಜಲವಿದ್ಯುತ್ ಮೂಲದಿಂದಲೇ ದೊರೆಯುವಂತಾಗಿದ್ದು, ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನಿರಾಳತೆ ದೊರಕಿದೆ. ಕಳೆದ ಕೆಲ ವರ್ಷಗಳಿಂದ ಇಡೀ ರಾಜ್ಯ ವಿದ್ಯುತ್‌ಗಾಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ನೆಚ್ಚಿಕೊಂಡಿತ್ತು. ಕೆಲವು ಬಾರಿ ಜಲಾಶಯಗಳು ಭರ್ತಿಯಾಗದೇ, ಮತ್ತೆ ಕೆಲವು ಸಲ ಭರ್ತಿಯಾದರೂ ಬೇಸಿಗೆಯ ವಿದ್ಯುತ್ ಅಭಾವ ನೀಗಿಸಲು ನೀರು ಬಳಸದ ಸ್ಥಿತಿಯಿತ್ತು. ಆದರೆ, ಈ ಬಾರಿ ಮುಂಗಾರಿನ ಅಬ್ಬರಕ್ಕೆ ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಂಡು ಭರಪೂರ ವಿದ್ಯುತ್ ಉತ್ಪಾದನೆಗೆ ದಾರಿ ಮಾಡಿವೆ.

ಜಲವಿದ್ಯುತ್‌ನಲ್ಲಿ ಏರಿಕೆ: ಕಳೆದ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ 10800ಮೆವ್ಯಾ ದಾಟಿದಾಗ ಕರ್ನಾಟಕ ವಿದ್ಯುತ್ ನಿಗಮ ಒತ್ತಡದಲ್ಲಿತ್ತು. ಬೇಸಿಗೆ ಕಳೆಯುತ್ತಿದ್ದಂತೆ ಮುಂಗಾರು ಚುರುಕುಗೊಂಡು, ಬಿಡದೇ ಸುರಿದ ಮಳೆ ನೆರವಿಗೆ ಬಂದಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಕೇಂದ್ರಗಳನ್ನು ಹೊಂದಿರುವ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ವಿದ್ಯುತ್ ಉತ್ಪಾದನೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಿಸಿದ್ದ ಜಲವಿದ್ಯುದಾಗಾರಗಳು ಇದೀಗ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಲ್ಲಿ ಕೊಡಗಿವೆ. ಸಹಜವಾಗಿಯೇ ಕರ್ನಾಟಕ ವಿದ್ಯುತ್ ನಿಗಮ ನೆಮ್ಮದಿಯಲ್ಲಿದೆ.

ಶರಾವತಿ ವಿದ್ಯುತ್ ಕೇಂದ್ರದಲ್ಲಿ 1035 ಮೆವ್ಯಾಗೆ ಪ್ರತಿಯಾಗಿ 827ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ನಾಗಝರಿ ವಿದ್ಯುತ್ ಕೇಂದ್ರದಲ್ಲಿ 900ಮೆವ್ಯಾನ ಪೈಕಿ 400 ಮೆವ್ಯಾ, ವಾರಾಹಿ ಜಲ ವಿದ್ಯುತ್ ಕೇಂದ್ರದಲ್ಲಿ 460 ಮೆವ್ಯಾನ ಪೈಕಿ 456 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕೊಡಸಳ್ಳಿ ಜಲವಿದ್ಯುದಾಗಾರದಲ್ಲಿ 120 ಮೆವ್ಯಾಗೆ 118ಮೆವ್ಯಾ, ಕದ್ರಾದಲ್ಲಿ 150 ಮೆವ್ಯಾಗೆ 150 ಮೆವ್ಯಾ, ಗೇರುಸೊಪ್ಪಾದಲ್ಲಿ 240 ಮೆವ್ಯಾಗೆ 205 ಮೆವ್ಯಾ , ಶಿವನಸಮುದ್ರದಲ್ಲಿ 42ಮೆವ್ಯಾಗೆ ಪ್ರತಿಯಾಗಿ 42ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅನೇಕ ವರ್ಷಗಳಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಭರ್ತಿಯಾಗಿರಲಿಲ್ಲ. ಈ ಬಾರಿ ನಿರೀಕ್ಷೆಗೂ ಮುನ್ನವೇ ಜಲಾಶಯ ಭರ್ತಿಯಾಗಿದ್ದು, ಮುನಿರಾಬಾದ್‌ನಲ್ಲಿ 28ಮೆವ್ಯಾ ಗೆ 28 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಘಟಪ್ರಭಾದಲ್ಲಿ 32ಮೆವ್ಯಾಗೆ ಪ್ರತಿಯಾಗಿ 32 ಮೆವ್ಯಾ , ಆಲಮಟ್ಟಿಯಲ್ಲೂ ಪೂರ್ಣ ಪ್ರಮಾಣದ 290ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ತಳಕಚ್ಚಿದ ಬೇಡಿಕೆ: ರಾಜ್ಯದ ಅನೇಕ ಕಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯುತ್‌ನ ಬೇಡಿಕೆ ತೀವ್ರ ಕುಸಿತ ಕಂಡಿದೆ. ದಿನದ ವಿದ್ಯುತ್ ಬೇಡಿಕೆಯು ಸದ್ಯ 2500ಮೆವ್ಯಾ ನಿಂದ 3ಸಾವಿರ ಮೆವ್ಯಾ ಆಸುಪಾಸಿನಲ್ಲಿದೆ. ಸತತ ಮಳೆಯಾಗುತ್ತಿರುವುದರಿಂದ ಬಳಕೆ ಪ್ರಮಾಣ ಗಣನೀಯ ಕುಸಿದಿದೆ.

ಒಂದೂವರೆ ತಿಂಗಳಿಂದ ರಾಯಚೂರು ಬಳಿಯ ವೈಟಿಪಿಎಸ್ ವಿದ್ಯುತ್ ಕೇಂದ್ರ ಹಾಗೂ ಬಳ್ಳಾರಿಯ ಕುಡಿತಿನಿಯ ಬಿಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಶಕ್ತಿನಗರದ ಆರ್‌ಟಿಪಿಎಸ್‌ನ 2ಘಟಕಗಳಿಂದ ಕೇವಲ 350ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲೂ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳೇ ಗತಿ ಎಂಬಂತಿದ್ದ ಚಿತ್ರಣ ಇದೀಗ ಸಂಪೂರ್ಣ ಬದಲಾಗಿದೆ. ಜಲವಿದ್ಯುತ್ ಕೇಂದ್ರಗಳೂ ಧಾರಾಕಾರ ಮಳೆಯಿಂದ ರಾಜ್ಯದ ಕೈ ಹಿಡಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ