ಆ್ಯಪ್ನಗರ

ಹೈ.ಕ. ಮೀಸಲು ಕಸಿಯುವ ಹುನ್ನಾರ?

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೆಲವು ಉನ್ನತ ಹುದ್ದೆಗಳ ನೇಮಕಾತಿಗೆ 2016ರಲ್ಲೇ ಅಧಿಸೂಚನೆ ಹೊರಡಿಸಿದ್ದರೂ ನೇಮಕಾತಿ ಆದೇಶ ನೀಡಲು ಅನುಸರಿಸುತ್ತಿರುವ ವಿಳಂಬ ಧೋರಣೆ, ಹೈದರಾಬಾದ್ ಕರ್ನಾಟಕ ಪ್ರದೇಶದ ಆಕಾಂಕ್ಷಿಗಳಲ್ಲಿ ನಿರಾಸೆ ಹುಟ್ಟಿಸಿದೆ.

Vijaya Karnataka 7 Dec 2017, 7:53 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web hika reservation
ಹೈ.ಕ. ಮೀಸಲು ಕಸಿಯುವ ಹುನ್ನಾರ?


ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೆಲವು ಉನ್ನತ ಹುದ್ದೆಗಳ ನೇಮಕಾತಿಗೆ 2016ರಲ್ಲೇ ಅಧಿಸೂಚನೆ ಹೊರಡಿಸಿದ್ದರೂ ನೇಮಕಾತಿ ಆದೇಶ ನೀಡಲು ಅನುಸರಿಸುತ್ತಿರುವ ವಿಳಂಬ ಧೋರಣೆ, ಹೈದರಾಬಾದ್ ಕರ್ನಾಟಕ ಪ್ರದೇಶದ ಆಕಾಂಕ್ಷಿಗಳಲ್ಲಿ ನಿರಾಸೆ ಹುಟ್ಟಿಸಿದೆ.

ಹೈ.ಕ.ದವರಿಗೆ ವಿವಿಯ ಉನ್ನತ ಹುದ್ದೆಗಳು ದಕ್ಕಬಾರದೆಂಬ ದುರುದ್ದೇಶದಿಂದ ನೇಮಕಾತಿ ಆದೇಶ ನೀಡಲು ವಿವಿ ಆಡಳಿತ ವಿಳಂಬ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ವಿವಿಯ ಉನ್ನತ ಅಧಿಕಾರಿಗಳ ಹುದ್ದೆ ನೇಮಕಾತಿಗೆ ಸಂಬಂಧಿಸಿ 2016ರ ಏ.11ರಂದು ಅರ್ಜಿ ಕರೆಯಲಾಗಿತ್ತು. 20 ತಿಂಗಳ ನಂತರವೂ ನೇಮಕಾತಿ ಆದೇಶ ನೀಡದಿರುವುದು ವಿವಿ ಆಡಳಿತದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

ಹುದ್ದೆಗಳ ವಿವರ: ಕೃಷಿ ವಿವಿಯಲ್ಲಿ ಖಾಲಿಯಿರುವ ಒಟ್ಟು 11 ಹುದ್ದೆಗಳಿಗೆ ಮೂರು ವರ್ಷಗಳ ಅವಧಿಗೆ ನೇಮಿಸಲು ನಿರ್ಧರಿಸಲಾಗಿತ್ತು. ಶಿಕ್ಷಣ ನಿರ್ದೇಶಕ, ಕುಲಸಚಿವ, ಸಂಶೋಧನಾ ನಿರ್ದೇಶಕ, ಸ್ನಾತಕೋತ್ತರ ವಿಭಾಗದ ಡೀನ್, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ವಿಭಾಗದ ಡೀನ್, ರಾಯಚೂರು ಕೃಷಿ ಮಹಾವಿದ್ಯಾಲಯದ ಡೀನ್, ಕಲಬುರಗಿಯ ಕೃಷಿ ಮಹಾವಿದ್ಯಾಲಯದ ಡೀನ್, ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್, ವಿಸ್ತರಣಾ ನಿರ್ದೇಶಕ, ಭೀಮರಾಯನಗುಡಿಯಲ್ಲಿರುವ ಕೃಷಿ ಮಹಾವಿದ್ಯಾಲಯದ ಡೀನ್ ಹಾಗೂ ಗ್ರಂಥಪಾಲಕ ಸೇರಿ ಒಟ್ಟು 11ಹುದ್ದೆಗಳ ನೇಮಕಾತಿಗೆ ವಿವಿ ಮುಂದಾಗಿತ್ತು. ಆದರೆ, ರಾಜ್ಯ ಸರಕಾರವೇ ಕುಲಸಚಿವರ ಹುದ್ದೆಗೆ ನೇರವಾಗಿ ತಾನೇ ಆಯ್ಕೆಮಾಡಿ ಅಧಿಕಾರಿಯೊಬ್ಬರನ್ನು ನೇಮಿಸಿದ್ದರಿಂದ ಒಟ್ಟು ನೇಮಕಮಾಡಬೇಕಾದ ಹುದ್ದೆಗಳ ಸಂಖ್ಯೆ 10ಕ್ಕೆ ಕುಸಿಯಿತು.

ಸ್ಥಳೀಯೇತರ ನೌಕರರ ಲಾಬಿ: ಕೃಷಿ ವಿವಿಯಿಂದ ಹೊರಡಿಸಿದ ಅಧಿಸೂಚನೆಯಂತೆ ಒಟ್ಟು 10 ಹುದ್ದೆಗಳಲ್ಲಿ 8 ಹುದ್ದೆಗಳು ಹೈ.ಕ.ದವರ ಪಾಲಾಗಬೇಕಿದೆ. ಈ ವಿಚಾರವೇ ನೇಮಕಾತಿಯ ಒಟ್ಟು ಪ್ರಕ್ರಿಯೆಯನ್ನು ವಿಳಂಬವಾಗಿಸಿದೆ. ಸ್ಥಳೀಯೇತರ ನೌಕರರ ಲಾಬಿಗೆ ವಿವಿ ಆಡಳಿತ ಮಣಿದು ನೇಮಕಾತಿ ಪ್ರಕ್ರಿಯೆಯನ್ನೇ ನಿಧಾನಗೊಳಿಸಿದೆ. 20 ತಿಂಗಳ ನಂತರವೂ ನೇಮಕಾತಿ ಪ್ರಕ್ರಿಯೆ ವೇಗ ಪಡೆದಿಲ್ಲ.

ಕಳೆದ ಆಗಸ್ಟ್ ಅಂತ್ಯಕ್ಕೆ ನಡೆದ ವಿವಿ ಆಡಳಿತ ಮಂಡಳಿ ಸಭೆಯಲ್ಲಿ ನೇಮಕಾತಿ ವಿಚಾರ ಚರ್ಚೆಗೆ ಬಂತು. ಪ್ರಕ್ರಿಯೆ ತೀವ್ರಗೊಳಿಸಲು ಸದಸ್ಯರು ಒತ್ತಾಯಿಸಿದ ನಂತರವೇ ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ ಅವರು ಸಂದರ್ಶನ ನಡೆಸಲು ಮುಂದಾಗಿದ್ದರು. ಸೆಪ್ಟೆಂಬರ್‌ನಲ್ಲಿಯೇ ಸಂದರ್ಶನ ಪ್ರಕ್ರಿಯೆ ಮುಗಿದಿದ್ದರೂ ಇದುವರೆಗೆ ನೇಮಕಾತಿ ಆದೇಶ ನೀಡಲು ಹಿಂದೇಟು ಹಾಕುತ್ತಿರುವುದು ಹೈ.ಕ.ದವರಿಗೆ ಅನ್ಯಾಯ ಮಾಡುವ ಉದ್ದೇಶ ಅಡಗಿದೆ ಎಂಬುದು ಅರ್ಜಿದಾರರ ಶಂಕೆಯಾಗಿದೆ.

ಉಳಿದೆಡೆ ಮೀಸಲಾತಿ ಪಾಲನೆ: ರಾಜ್ಯದ ಬೇರೆ ಬೇರೆ ಕೃಷಿ ವಿವಿಗಳಲ್ಲಿ ಹೈ.ಕ.ಕ್ಕೆ ನಿಗದಿಯಾಗಿರುವ ಮೀಸಲಾತಿ ಪಾಲಿಸಲಾಗುತ್ತಿದೆ. ಆದರೆ, ಹೈ.ಕ.ದಲ್ಲಿಯೇ ಇರುವ ರಾಯಚೂರು ವಿವಿ ಆಡಳಿತವು ಮೀಸಲಾತಿ ಲಾಭ ದೊರೆಯದಂತೆ ಮಾಡಲು ಹಾಗೂ ಎಲ್ಲ ಉನ್ನತ ಹುದ್ದೆಗಳು ರಾಜ್ಯದ ಇತರ ಭಾಗದ ಅಧಿಕಾರಿಗಳ ಬಳಿಯಿರಬೇಕೆಂಬ ದುರಾಲೋಚನೆ ಕಾರಣದಿಂದಲೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸೆಪ್ಟೆಂಬರ್ ನಂತರ ಎರಡು ಬಾರಿ ಆಡಳಿತ ಮಂಡಳಿಯ ಸಭೆಗಳು ನಡೆದವು. ಆದರೆ, ಸಂದರ್ಶನದಲ್ಲಿ ಆಯ್ಕೆಯಾದವರ ಪಟ್ಟಿಯ ಅನುಮೋದನೆಗೆ ಈ ಸಭೆಗಳಲ್ಲಿ ಮೊದಲ ಆದ್ಯತೆ ದೊರೆಯಲಿಲ್ಲ. ಸಭೆಯ ಕೊನೆಗೆ ಈ ವಿಚಾರ ಪ್ರಸ್ತಾಪಿಸಿದ್ದರಿಂದ ಸದಸ್ಯರೂ ಅದಕ್ಕೆ ಅಷ್ಟಾಗಿ ಮಹತ್ವ ನೀಡಲಿಲ್ಲ. ಈ ಎಲ್ಲ ಅಂಶಗಳು ಹೈ.ಕ.ದವರಿಗೆ ಅನ್ಯಾಯವಾಗಲು ಮತ್ತಷ್ಟು ಬೆಂಬಲ ನೀಡಿದಂತಾಗಿದೆ ಎಂಬುದು ಹುದ್ದೆ ಆಕಾಂಕ್ಷಿಗಳ ಅಸಮಾಧಾನವಾಗಿದೆ.

................

ರಾಯಚೂರು ಕೃಷಿ ವಿವಿ ಅಧಿಕಾರಿಗಳ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿ 20 ತಿಂಗಳಾದರೂ ನೇಮಕಾತಿ ಆದೇಶ ನೀಡದಿರುವುದರ ಹಿಂದೆ ಹೈ.ಕ.ದವರ ಮೀಸಲಾತಿ ತಪ್ಪಿಸುವ ಹುನ್ನಾರವಿದೆ. ವಿವಿಯ ಎಲ್ಲ ಉನ್ನತ ಹುದ್ದೆಗಳು ರಾಜ್ಯದ ಹೈ.ಕ.ಯೇತರರ ಬಳಿಯಿರಬೇಕೆಂಬ ದುರುದ್ದೇಶದಿಂದಲೇ ವಿವಿ ಆಡಳಿತ ಮತ್ತು ಅಧಿಕಾರಿಗಳು ಒಗ್ಗೂಡಿ ಮೀಸಲಾತಿ ತಪ್ಪಿಸುವ ಹುನ್ನಾರ ನಡೆಸಲಾಗಿದೆ.

-ಡಾ.ರಝಾಕ್ ಉಸ್ತಾದ್, ರಾಜ್ಯ ಉಪಾಧ್ಯಕ್ಷರು, ಹೈ.ಕ. ಹೋರಾಟ ಸಮಿತಿ, ರಾಯಚೂರು

.............

ಅಧಿಕಾರಿಗಳ ಹುದ್ದೆ ಭರ್ತಿಗೆ ಸಂಬಂಧಿಸಿ ಈಗಾಗಲೇ ಸಂದರ್ಶನ ನಡೆಸಲಾಗಿದೆ. ನೇಮಕಾತಿ ಆದೇಶ ನೀಡುವುದು ವಿಳಂಬವಾಗುತ್ತಿದೆ. ಈ ಬಗ್ಗೆ ಕುಲಪತಿಗಳ ಗಮನಕ್ಕೆ ತರಲಾಗಿದೆ. ವಿವಿ ಆಡಳಿತದ ಆದೇಶಕ್ಕೆ ಕಾಯುತ್ತಿದ್ದೇವೆ.

-ವೀರನಗೌಡ, ಅಧ್ಯಕ್ಷರು, ಹೈ.ಕ. ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕೃಷಿ ವಿವಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ