ಆ್ಯಪ್ನಗರ

ನಲಿ-ಕಲಿ, ಗೋಡೆ ಬರಹಕ್ಕೆ ಹಣವಿಲ್ಲ

ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆಯಾಗದ ಪರಿಣಾಮ ಶಾಲೆಗಳ ಖರ್ಚು ವೆಚ್ಚ ಸೇರಿದಂತೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಅನಿವಾರ್ಯ ಎಂಬಂತೆ ಶಾಲಾ ಶಿಕ್ಷಕರು ದಾನಿಗಳ ಮೊರೆ ಹೋಗುತ್ತಿದ್ದಾರೆ.

Vijaya Karnataka 6 Sep 2018, 5:00 am
ಮಸ್ಕಿ ; ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆಯಾಗದ ಪರಿಣಾಮ ಶಾಲೆಗಳ ಖರ್ಚು ವೆಚ್ಚ ಸೇರಿದಂತೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಅನಿವಾರ್ಯ ಎಂಬಂತೆ ಶಾಲಾ ಶಿಕ್ಷಕರು ದಾನಿಗಳ ಮೊರೆ ಹೋಗುತ್ತಿದ್ದಾರೆ.
Vijaya Karnataka Web RAC-RCH05MSK01


ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮ, ಮಕ್ಕಳಿಗೆ ಪಠ್ಯೇತರ ಚಟುವಟಿಕೆ, ಕ್ರೀಡೆ ಸೇರಿ ಇತರೆ ಚಟುವಟಿಕೆ ನಡೆಸಲು ಶಾಲೆಯಲ್ಲಿ ನಯಾ ಪೈಸೆ ಇಲ್ಲದಂತಾಗಿದೆ. ಎಸ್ಡಿಎಂಸಿ ಖಾತೆ ಕೂಡ ಖಾಲಿಯಾಗಿದೆ. ಸರ್ವಶಿಕ್ಷಣ ಅಭಿಯಾನ ಯೋಜನೆ ಮುಕ್ತಾಯದ ಬಳಿಕ ಶಾಲೆಗಳಿಗೆ ಅನುದಾನ ಇಲ್ಲದಂತಾಗಿದೆ. 2018-19ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಗೊಂಡು 4 ತಿಂಗಳಾದರೂ ಬೀಡಿಗಾಸು ಇಲ್ಲದೇ ಶಾಲೆಗಳ ನಿರ್ವಹಣೆಗೆ ಕಷ್ಟವಾಗಿದೆ. ಮುಖ್ಯೋಪಾಧ್ಯಾಯರು ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿನ ಶಿಕ್ಷಕರು ದಾನಿಗಳ ಮೊರೆ ಹೋಗಿದ್ದಾರೆ. ತಾ.ಪಂ., ಗ್ರಾ.ಪಂ. ಹಾಗೂ ಎಸ್ಡಿಎಂಸಿ ಸದಸ್ಯರಿಂದ ಹಣ ಪಡೆದು ಶಾಲೆ ನಿರ್ವಹಣೆಗೆ ಮುಂದಾಗಿದ್ದಾರೆ.

ಬೋರ್ಡ್‌ ಇಲ್ಲದ ಶಾಲೆ: ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 233 ಶಾಲೆಗಳಿವೆ. ಆ ಪೈಕಿ 20 ಪ್ರೌಢ ಶಾಲೆಗಳು ಇವೆ. ಸಮೀಪದ ಹಸಮಕಲ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಶೌಚಾಲಯ ನಿರ್ವಹಣೆ ಇಲ್ಲದೇ ಹಾಗೇ ಉಳಿದಿವೆ. ಮಕ್ಕಳ ನಲಿ-ಕಲಿಗೆ ಸಂಬಂಧಿಧಿಸಿದ ಅಕ್ಷರಗಳು ಅಳಸಿ ಹೋಗಿವೆ. ನಾಲ್ಕೈದು ವರ್ಷಗಳ ಹಿಂದೆ ಬರೆಯಿಸಿರುವ ಗೋಡೆ ಬರಹಗಳು ಇಲ್ಲದಂತಾಗಿವೆ. ನಲಿ-ಕಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಗೌಡನಬಾವಿ ಪ್ರಾಥಮಿಕ ಶಾಲೆಯಲ್ಲಿ ಕೂಡ ಬೋರ್ಡ್‌ (ಕಪ್ಪು ಹಲಗೆ) ಇಲ್ಲದಂತಾಗಿದೆ. ದಶಕದ ಹಿಂದೆ ನಿರ್ಮಿಸಿರುವ ಬೋರ್ಡ್‌ ಮೇಲೆ ಗಣಿತ, ಡ್ರಾಯಿಂಗ್‌ ಚಿತ್ರ ಬಿಡಿಸಲಾಗುತ್ತಿದೆ. ಶುದ್ಧ ಕುಡಿವ ನೀರು ನಿರ್ವಹಣೆಗೆ ಹಣದ ಕೊರತೆ ಉಂಟಾಗಿದೆ. ಶಾಲೆಗಳ ಕಿಟಕಿ, ಬಾಗಿಲು ದುರಸ್ತಿ ಇಲ್ಲದಂತಾಗಿದೆ. ಗಡಿಭಾಗದ ಶಾಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ, ಕಟ್ಟಡಗಳ ದುರಸ್ತಿ ನಿರ್ವಹಣೆ, ಕಾಂಪೌಂಡ್‌ಗಳಿಲ್ಲದೇ ಶಾಲೆಗಳು ನಡೆಯುತ್ತಿವೆ.

ಯೋಜನೆ ಮುಕ್ತಾಯ: ಸರ್ವಶಿಕ್ಷ ಣ ಅಭಿಯಾನ ಯೋಜನೆ 2017-18ನೇ ಸಾಲಿನಲ್ಲಿ ಮುಕ್ತಾಯವಾದಾಗಿನಿಂದ ಪರ್ಯಾಯ ಯೋಜನೆ ಆರಂಭಿಸಿಲ್ಲ. ಕಿರಿಯ ಪ್ರಾಥಮಿಕ ಶಾಲೆಗಳಿಗೆ ವಾರ್ಷಿಕ 5 ಸಾವಿರ ರೂ., ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಾರ್ಷಿಕ 12,500 ರೂ. ಹಾಗೂ ದುರಸ್ತಿ ಅನುದಾನ 7,500 ರೂ. ನೀಡಲಾಗುತ್ತಿತ್ತು. ಈ ಅನುದಾನದಲ್ಲೇ ಶಿಕ್ಷ ಕರು ದಸ್ತಾವೇಜು, ರಿಜಿಸ್ಟರ್‌ ಕೊಳ್ಳುವ ವೆಚ್ಚವನ್ನು ನಿಭಾಯಿಸಬೇಕು. ಇತ್ತೀಚೆಗೆ ಶಿಕ್ಷ ಣ ಇಲಾಖೆ ಎಸ್‌ಟಿಎಸ್‌ ವ್ಯವಸ್ಥೆ ಜಾರಿಗೊಳಿಸಿದ ಮೇಲೆ ಶಾಲೆಯ ಮಕ್ಕಳ ದಾಖಲಾತಿಯನ್ನು ಇಲಾಖೆಯ ಎಸ್‌ಟಿಎಸ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕೆಂಬ ನಿಯಮ ಜಾರಿಯಾಗಿದೆ. ಇಲಾಖೆ ನಿಯಮ ಜಾರಿಗೊಳಿಸಿದೆಯಾದರೂ ಪ್ರತಿ ಶಾಲೆಗೆ ಒಂದು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ನೀಡಲಿಲ್ಲ. ಶಾಲೆಯ ಮುಖ್ಯಗುರು ಎಸ್‌ಟಿಎಸ್‌ಗೆ ಮಾಹಿತಿ ಅಪ್‌ಲೋಡ್‌ ಮಾಡಲು ಖಾಸಗಿ ಬ್ರೌಸಿಂಗ್‌ ಸೆಂಟರ್‌, ಡಿಟಿಪಿ ಸೆಂಟರ್‌ಗಳಿಗೆ ಹೋಗಿ ಪ್ರತಿ ಮಗುವಿನ ದಾಖಲಾತಿ ಅಪ್‌ಲೋಡ್‌ಗೆ 25-30 ರೂ. ಖರ್ಚು ಮಾಡಬೇಕಾಗಿದೆ.

ಇಲಾಖೆಯ ಸಭೆ, ತರಬೇತಿಗೆ ತೆರಳಿದಾಗ ಅವರಿಗೆ ಟಿಎ, ಡಿಎ ನೀಡಲಾಗುತ್ತದೆ. ಶಿಕ್ಷ ಕರು ಇಲಾಖೆಯ ಸಭೆಗಳಿಗೆ ಹಾಜರಾದರೆ ಅದಕ್ಕೆ ಟಿಎ ನೀಡುವ ವ್ಯವಸ್ಥೆ ಇಲ್ಲ. ನಾನಾ ಮಾಹಿತಿಯನ್ನು ಇಲಾಖೆ ಕೇಳುತ್ತಿದ್ದು, ಆ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಲು ಜೆರಾಕ್ಸ್‌ ಸೇರಿದಂತೆ ನಾನಾ ವೆಚ್ಚಗಳನ್ನು ಭರಿಸಲು ಪ್ರತ್ಯೇಕ ಅನುದಾನ ಇರುವುದಿಲ್ಲ. ಕ್ರೀಡಾ ಸಾಮಗ್ರಿ, ಪ್ರಥಮ ಚಿಕಿತ್ಸೆ ಕಿಟ್‌ ಖರೀದಿಗೂ ಅನುದಾನ ಇಲ್ಲ. ಶಾಲೆಗಳ ಆಂತರಿಕ ವೆಚ್ಚಗಳಿಗೆ ಸಾರ್ವಜನಿಕರಿಂದ ದೇಣಿಗೆ ಪಡೆಯಲೂ ಆಗದ್ದಕ್ಕೆ ಶಿಕ್ಷ ಕರು ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ನಾನಾ ಸರಕಾರಿ ಜಯಂತಿ ಆಚರಣೆಗೆ ಹೊರೆ ಆಗಿದೆ.

ಹೊಸ ಯೋಜನೆ: ಹಿಂದೆ ಜಾರಿಯಲ್ಲಿದ್ದ ಸರ್ವಶಿಕ್ಷ ಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷ ಣ ಅಭಿಯಾನ ಯೋಜನೆಗಳನ್ನು ಒಟ್ಟುಗೂಡಿಸಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ 2018-19ನೇ ಸಾಲಿನಿಂದ ಸಮಗ್ರ ಶಿಕ್ಷ ಣ ಅಭಿಯಾನ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆ ಜಾರಿ ಬೆನ್ನಲ್ಲೇ ಶಾಲೆಗಳಿಗೆ ಈ ಹಿಂದೆ ನೀಡುತ್ತಿದ್ದ ಅನುದಾನ ಪ್ರಮಾಣವನ್ನೂ ಪರಿಷ್ಕರಿಸಿದೆ. ಈ ನಿಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಎರಡಕ್ಕೂ ಅನ್ವಯವಾಗುತ್ತದೆ. 1ರಿಂದ 15 ಮಕ್ಕಳಿರುವ ಶಾಲೆಗಳಿಗೆ ವಾರ್ಷಿಕ 12,500ರೂ., 16 ರಿಂದ 100 ಮಕ್ಕಳಿರುವ ಶಾಲೆಗೆ 25 ಸಾವಿರ ರೂ., 101ರಿಂದ 250 ಮಕ್ಕಳಿರುವ ಶಾಲೆಗೆ 50 ಸಾವಿರ ರೂ., 251ರಿಂದ 1ಸಾವಿರ ಮಕ್ಕಳು ಇರುವ ಶಾಲೆಗೆ 75 ಸಾವಿರ ರೂ., 1ಸಾವಿರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಗೆ 1ಲಕ್ಷ ರೂ. ಅನುದಾನವನ್ನು ನಿಗದಿಗೊಳಿಸಿ ಆದೇಶ ಜಾರಿಗೊಳಿಸಿದೆ. ಈ ಅನುದಾನವನ್ನು ಕಚೇರಿಯ ದಾಖಲೆ ಪುಸ್ತಕಗಳ ಖರೀದಿ, ತರಗತಿಗೆ ಅಗತ್ಯ ಇರುವ ಅಂಕಪಟ್ಟಿ ಇತರೆ ಖರ್ಚುಗಳಿಗಾಗಿ, ಬೋಧನೋಪಕರಣಗಳ ತಯಾರಿಕೆಗೆ, ಬೋಧನೋಪಕರಣಗಳ ಖರೀದಿ, ಕಟ್ಟಡದ ಸಣ್ಣ-ಪುಟ್ಟ ದುರಸ್ತಿ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಪೀಠೋಪಕರಣಗಳ ದುರಸ್ತಿ, ಕ್ರೀಡಾ ಸಾಮಗ್ರಿಗಳ ಖರೀದಿ ಮತ್ತು ದುರಸ್ತಿ, ವಿದ್ಯುತ್‌ ದೂರವಾಣಿ ಬಿಲ್‌ ಪಾವತಿ, ದಿನಪತ್ರಿಕೆ ಮತ್ತು ವಾರಪತ್ರಿಕೆ ವೆಚ್ಚ, ಶಾಲಾ ಸ್ವಚ್ಛತಾ ವೆಚ್ಚವನ್ನು ಭರಿಸಲು ಆದೇಶಿಸಲಾಗಿದೆ.

---

ಶಾಲಾ ನಿರ್ವಹಣೆಗೆ ಅನುದಾನ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಕಾರಣ ತಡವಾಗಿರಬಹುದು. ಈ ಬಾರಿ ನಿಯಮ ಕೂಡ ಬದಲಾಗಿದೆ. ಈ ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ.

-ಸೋಮಶೇಖರಗೌಡ, ಪ್ರಭಾರಿ ಬಿಇಒ, ಮಸ್ಕಿ.
------

ಕಳೆದ ನಾಲ್ಕೈದು ತಿಂಗಳಿಂದ ಶಾಲೆಗೆ ಅನುದಾನ ಬಂದಿಲ್ಲ. ಹಾಗಾಗಿ ಶಾಲೆಯ ಮುಖ್ಯಗುರುಗಳು ನಾವು ಸ್ವಂತ ಹಣದಲ್ಲಿ ಸಣ್ಣ-ಪುಟ್ಟ ಕೆಲಸಗಳಿಗೆ ಹಣ ಖರ್ಚು ಮಾಡುತ್ತಿದ್ದೇವೆ. ಪ್ರತಿಭಾ ಕಾರಂಜಿ ಮತ್ತು ಕ್ರೀಡೆಗಳಿಗೆ ಬಾಡಿಗೆ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇವೆ.

-ಮಲ್ಲಯ್ಯ ಸಾಲಿಮಠ. ಎಸ್ಸಿಎಂಸಿ ಅಧ್ಯಕ್ಷರು, ಬಾಲಕರ ಸರಕಾರಿ ಪ್ರೌಢ ಶಾಲೆ, ಮಸ್ಕಿ.


------
ಸರಕಾರಿ ಶಾಲೆಗಳಿಗೆ ಬಿಡುಗಡೆಯಾಗುವ ಅನುದಾನ, ಸೌಲಭ್ಯ ಸಕಾಲದಲ್ಲಿ ಜಾರಿಯಾಗುವುದಿಲ್ಲ. ಶಾಲೆ ದುರಸ್ತಿ, ಕುಡಿವ ನೀರಿನ ತೊಂದರೆ ಹಾಗೇ ಇವೆ. ಇದರ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು.

-ದುರುಗಪ್ಪ ಗೌಡನಬಾವಿ, ವಿದ್ಯಾರ್ಥಿ ಪಾಲಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ