ಆ್ಯಪ್ನಗರ

ಪ್ರಶ್ನೆ ಪತ್ರಿಕೆ ಸೋರಿಕೆ !

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡನೇ ಬಾರಿಗೂ ಸೋರಿಕೆಯಾಗಿದ್ದರಿಂದ ನಗರದಲ್ಲಿ ಗುರುವಾರ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟೈರ್ ಗೆ ಬೆಂಕಿಯಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ವಿಕ ಸುದ್ದಿಲೋಕ 1 Apr 2016, 6:32 am
ರಾಯಚೂರು; ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡನೇ ಬಾರಿಗೂ ಸೋರಿಕೆಯಾಗಿದ್ದರಿಂದ ನಗರದಲ್ಲಿ ಗುರುವಾರ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟೈರ್ ಗೆ ಬೆಂಕಿಯಿಟ್ಟು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
Vijaya Karnataka Web question paper leak
ಪ್ರಶ್ನೆ ಪತ್ರಿಕೆ ಸೋರಿಕೆ !


ನಗರದ ಲಿಂಗಸೂಗೂರು ರಸ್ತೆಯಲ್ಲಿರುವ ಜಸ್ಟಿಸ್ ಶಿವರಾಜ್ ಪಾಟೀಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ ಪರೀಕ್ಷೆ ಮುಂದೂಡಿದ ವಿಚಾರ ತಿಳಿಯುತ್ತಿದ್ದಂತೆಯೇ ಹೋರಾಟಕ್ಕಿಳಿದರು.

ಕಾಲೇಜು ಬಳಿ ರಸ್ತೆಯಲ್ಲಿ ಹೋರಾಟಕ್ಕಿಳಿದು ಟೈರ್ ಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿ ಸರಕಾರ ಮತ್ತು ಪಿಯು ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಬೆಳಗ್ಗೆ ನಗರಕ್ಕೆ ಲಿಂಗಸುಗೂರು ಸೇರಿದಂತೆ ಜಿಲ್ಲೆಯ ನಾನಾ ಕಡೆಯಿಂದ ಆಗಮಿಸುತ್ತಿದ್ದವರಿಗೆ ತೊಂದರೆಯಾಯಿತು. ಕೆಲಹೊತ್ತು ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಹೋರಾಟ ಹಿಂಪಡೆದರು.

ಎಐಡಿಎಸ್‌ಒ :

ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದನ್ನು ಖಂಡಿಸಿ ನಗರದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಹಾಗೂ ಎಸ್‌ಎಫ್‌ಐ ಸಹಯೋಗದಲ್ಲಿ ನಗರದ ತಹಸೀಲ್ದಾರ ಕಚೇರಿ ಮುಂದೆ ರಸ್ತೆ ತಡೆ ಚಳವಳಿ ನಡೆಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಕ್ರಮಕ್ಕೆ ಆಗ್ರಹ :

ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾಗಿರುವ ಅಧಿಕಾರಿಗಳು ಹಾಗೂ ವ್ಯಕ್ತಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ ಹೋರಾಟನಿರತರು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣರಾದವರನ್ನು ಬಂಧಿಸುವಲ್ಲಿ ಪೊಲೀಸರು ನಿಧಾನಗತಿ ಅನುಸರಿಸುತ್ತಿದ್ದಾರೆಂದು ಟೀಕಿಸಿದರು.

ಪದೇ ಪದೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು, ಮರು ಪರೀಕ್ಷಾ ದಿನವನ್ನು ಒಂದು ವಾರದ ಅವಧಿಗೆ ಮುಂದೂಡಲಾಗುತ್ತಿದೆ. ಇದರಿಂದ ಸಮಯ ಪೋಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮುಂದಿನ ಸಿಇಟಿ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ತೀವ್ರ ತರದ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.

ಕೂಡಲೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ಇಂತಹ ಅಚಾತುರ್ಯ ಘಟನೆಗಳು ನಡೆಯದಂತೆ ಶಿಕ್ಷಣ ಇಲಾಖೆ ಅಗತ್ಯ ಕ್ರಮವಹಿಸಬೇಕು. ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಲೀಕ್‌ಔಟ್ ಕರ್ಮಕಾಂಡ ಇನ್ನಿಲ್ಲದಂತೆ ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಹೋರಾಟದಲ್ಲಿ ನಾನಾ ಸಂಘಟನೆಗಳ ಪ್ರಮುಖರಾದ ಮಹೇಶ್ ಚೀಕಲಪರ್ವಿ, ಎಸ್.ಎಸ್.ಹಿರೇಮಠ, ಸಲೀಂ ಸೇರಿದಂತೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ