ಆ್ಯಪ್ನಗರ

ಗೋಣಿಚೀಲವೇ ಇಲ್ಲಿ ಸೊಳ್ಳೆ ಪರದೆ!

ಇಲ್ಲಿನ ಬಿಸಿಎಂ ಹಾಸ್ಟೆಲ್‌ ವಿದ್ಯಾರ್ಥಿಗಳ ಪಾಲಿಗೆ ಗೋಣಿಚೀಲವೇ ಸೊಳ್ಳೆ ಪರದೆ! ಚಳಿ ಮತ್ತು ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳೇ ಅನಿವಾರ್ಯವಾಗಿ ಈ ಮಾರ್ಗ ಕಂಡುಕೊಂಡಿದ್ದಾರೆ.

Vijaya Karnataka 17 Feb 2018, 9:04 am

ಖಾಜಾಹುಸೇನ್‌, ಲಿಂಗಸುಗೂರು

ಇಲ್ಲಿನ ಬಿಸಿಎಂ ಹಾಸ್ಟೆಲ್‌ ವಿದ್ಯಾರ್ಥಿಗಳ ಪಾಲಿಗೆ ಗೋಣಿಚೀಲವೇ ಸೊಳ್ಳೆ ಪರದೆ! ಚಳಿ ಮತ್ತು ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳೇ ಅನಿವಾರ್ಯವಾಗಿ ಈ ಮಾರ್ಗ ಕಂಡುಕೊಂಡಿದ್ದಾರೆ.

ಪಟ್ಟಣದ ಹೊರ ವಲಯದಲ್ಲಿರುವ ಮೆಟ್ರಿಕ್‌ ನಂತರದ ಬಿಸಿಎಂ ಹಾಸ್ಟೆಲ್‌ ನಾನಾ ಸವಲತ್ತುಗಳಿಂದ ವಂಚಿತವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗಿದ್ದರೂ ನಿಗದಿತ ಸಮಯಕ್ಕಿಲ್ಲಿ ಆಹಾರ ದೊರೆಯುವುದಿಲ್ಲ. ಶೌಚಾಲಯವಿಲ್ಲದೇ ಬಹಿರ್ದೆಸೆಗೆ ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸಿದ್ದಾರೆ. ಶುದ್ಧ ಕುಡಿವ ನೀರು ಇಲ್ಲಿ ಗಗನಕುಸುಮವಾಗಿದೆ. ಗುಣಮಟ್ಟದ ಆಹಾರವಂತೂ ಕೇಳಲೇ ಬೇಡಿ. ಕಿಟಕಿಗಳ ಬಾಗಿಲು ಮುರಿದುಹೋಗಿವೆ. ರಾತ್ರಿಹೊತ್ತು ಚಳಿ ಮತ್ತು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳೇ ಗೋಣಿಚೀಲಗಳನ್ನು ಕಿಟಕಿಗೆ ಕಟ್ಟಿಕೊಂಡು ಬದುಕುವಂಥಹ ದುಃಸ್ಥಿತಿ ನಿರ್ಮಾಣವಾಗಿದೆ. ತಮಗಾಗುತ್ತಿರುವ ಅನ್ಯಾಯವನ್ನು ಹೇಳಲಿಕ್ಕೂ ಆಗದೇ ವಿದ್ಯಾರ್ಥಿಗಳು ಗೋಡೆಯ ಮೇಲೆ ಬರೆದು ಶುದ್ಧ ನೀರಿನ ಬೇಡಿಕೆ ಇಟ್ಟಿದ್ದಾರೆ. ಇಷ್ಟಾದರೂ ಕ್ರಮ ಕೈಗೊಳ್ಳಬೇಕಿದ್ದ ವಾರ್ಡನ್‌ ಮತ್ತು ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾಂಕ್ರಾಮಿಕ ಭೀತಿ: 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಾಸವಿದ್ದಾರೆ. ಮೂವರು ಅಡುಗೆ ಸಿಬ್ಬಂದಿ ಇದ್ದಾಗ್ಯೂ ಒಬ್ಬರೇ ಕೆಲಸಕ್ಕೆ ಬರುತ್ತಾರೆ. ಬರುವ ಒಬ್ಬಾಕೆಗೆ ಅಡುಗೆ ಮಾಡಲು ಕಷ್ಟಸಾಧ್ಯವಾದ್ದರಿಂದ ಸ್ವಚ್ಛತೆ ಇಲ್ಲಿ ಗೌಣವಾಗಿದೆ. ವಿದ್ಯಾರ್ಥಿಗಳೇ ಕೆಲ ವೇಳೆ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತಾರೆ. ಅಡುಗೆ ಕೋಣೆ ಪಕ್ಕದಲ್ಲೇ ಚರಂಡಿ, ಮುಸುರಿ ನೀರು ಹರಿಬಿಡಲಾಗುತ್ತಿದೆ. ಹಂದಿ, ನಾಯಿಗಳು ಇಲ್ಲಿ ಬಂದು ಮತ್ತಷ್ಟು ಗಲೀಜು ಮಾಡುತ್ತವೆ. ಶುದ್ಧ ಕುಡಿವ ನೀರಿಲ್ಲದೇ ಕಲುಷಿತ ನೀರನ್ನೇ ವಿದ್ಯಾರ್ಥಿಗಳು ಸೇವಿಸುವ ಅನಿವಾರ್ಯತೆ ಇದೆ. ವಾರ್ಡನ್‌ ಮಾತ್ರ ಇದ್ಯಾವುದನ್ನೂ ಲೆಕ್ಕಸದೇ ವಿದ್ಯಾರ್ಥಿಗಳನ್ನೇ ದಬಾಯಿಸುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ. ಕಲುಷಿತ ವಾತಾವರಣದಿಂಧ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಮನೆ ಮಾಡಿದೆ.

ಆಗ್ರಹ:

ವಿದ್ಯುತ್‌ ವ್ಯವಸ್ಥೆಯೂ ಅಷ್ಟಕ್ಕಷ್ಟೇ ಇದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಮೇಲಧಿಕಾರಿಗಳು ಇತ್ತ ಸುಳಿಯುವುದು ಅಪರೂಪ. ವಿದ್ಯಾರ್ಥಿಗಳೇ ಅವ್ಯವಸ್ಥೆಗೆ ಬೇಸರ ಪಟ್ಟುಕೊಂಡು ಪ್ರತಿಭಟನೆಗೆ ಮುಂದಾದಾಗ ಬಂದು ಎಲ್ಲಾ ಸೌಕರ್ಯ ಮಾಡಿಕೊಡುವುದಾಗಿ ವಾರ್ಡನ್‌ ಅವರಿಗೆ ಸೂಚನೆ ನೀಡುತ್ತಾರೆಯೇ ವಿನಹ ಖುದ್ದಾಗಿ ಮಿಂಚಿನ ಸಂಚಾರ ನಡೆಸಿ ವಾಸ್ತವ ಅರಿಯಲು ಯತ್ನಿಸುವುದಿಲ್ಲ ಎನ್ನುವ ಆರೋಪಗಳೂ ಇವೆ. ತಾಲೂಕು ಬಿಸಿಎಂ ಅಧಿಕಾರಿಗಳು ಖುದ್ದಾಗಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿಯನ್ನು ಮನಗಂಡು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಮುಂದಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

-------

Vijaya Karnataka Web the mosquito screen is here in the sack
ಗೋಣಿಚೀಲವೇ ಇಲ್ಲಿ ಸೊಳ್ಳೆ ಪರದೆ!

ಹಾಸ್ಟೆಲ್‌ನಲ್ಲಿ ಯಾವುದೇ ಸೌಕರ್ಯ ಸರಿಯಾಗಿಲ್ಲ. ಶುದ್ಧ ಕುಡಿವ ನೀರಿನ ಅಗತ್ಯತೆ ತುಂಬಾ ಇದೆ. ಕೇಳಿ ಕೇಳಿ ಸಾಕಾಗಿ, ಗೋಡೆಗೆ ಬರೆದಿದ್ದೇವೆ. ಸಮಯಕ್ಕೆ ಸರಿಯಾಗಿ ಊಟ ಸಿಗುವುದಿಲ್ಲ. ಶೌಚಾಲಯ ಕೊರತೆ ಇದೆ. ಸಂಬಂಧಿಸಿದ ತಾಲೂಕು ಅಧಿಕಾರಿಗಳು ಭೇಟಿ ನೀಡಿ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಮಾಡಿಕೊಡಬೇಕು.

-ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ