ಆ್ಯಪ್ನಗರ

ಕೆಪಿಸಿಗೆ ವರವಾದ ವರುಣ

ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಶಾಖೋತ್ಪನ್ನ ವಿದ್ಯುತ್ ಘಟಕಗಳ ಮೇಲೆ ಒತ್ತಡ ಇಳಿಕೆಯಾಗಿದ್ದು, ಕೆಲವು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ.

Vijaya Karnataka 15 May 2018, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web RAC-RCH14JD01


ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಶಾಖೋತ್ಪನ್ನ ವಿದ್ಯುತ್ ಘಟಕಗಳ ಮೇಲೆ ಒತ್ತಡ ಇಳಿಕೆಯಾಗಿದ್ದು, ಕೆಲವು ಘಟಕಗಳಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ.

ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್)ದ ಮೂರನೇ ಘಟಕವನ್ನು ದುರಸ್ತಿ ನಂತರವೂ ಉತ್ಪಾದನೆಗೆ ತೊಡಗಿಸಿಲ್ಲ. ಬಳ್ಳಾರಿ ಜಿಲ್ಲೆ ಕುಡಿತಿನಿ ಬಳಿಯ ಬಿಟಿಪಿಎಸ್‌ನ ಒಂದು ಘಟಕದಲ್ಲೂ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಬಿರುಬಿಸಿಲಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಅಜಗಜಾಂತರವಾಗಿತ್ತು. ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು. ಬಿಸಿಲ ತಾಪ ಮೇ ಆರಂಭದಿಂದಲೂ 42 ಡಿಗ್ರಿಯ ಗಡಿ ದಾಟಿತ್ತು. ವಿದ್ಯುತ್ ಬಳಕೆಯೂ ಗಗನಮುಖಿಯಾಗಿತ್ತು. ಬೇಡಿಕೆ ಹಾಗೂ ಪೂರೈಕೆಯಲ್ಲಿ ಭಾರೀ ಏರುಪೇರು ಕಂಡುಬಂದಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಕೆಪಿಸಿ ಹೆಣಗಾಡಿತ್ತು.

ಬೇಡಿಕೆ ಗಣನೀಯ ಇಳಿಕೆ:ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ನಾನಾ ಕಡೆ ಸಂಜೆಯಾಗುತ್ತಿದ್ದಂತೆಯೇ ಮಳೆಯಾಗುತ್ತಿದೆ. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಮಳೆಯಾಗುತ್ತಿರುವುದು ವಿದ್ಯುತ್ ಬಳಕೆಯನ್ನು ಗಣನೀಯ ತಗ್ಗಿಸಿದೆ. ಒಂದೊಮ್ಮೆ ಅತೀ ಹೆಚ್ಚಿನ ಬೇಡಿಕೆ 10,880ಮೆಗಾ ವ್ಯಾಟ್ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಬೇಸಿಗೆ ಅಂತ್ಯದವರೆಗೂ ಈ ಪ್ರಮಾಣ ತಗ್ಗುವುದು ಅನುಮಾನ ಎಂದೇ ಲೆಕ್ಕಾಚಾರ ಮಾಡಲಾಗಿತ್ತು. ಆದರೆ, ಬೇಸಿಗೆ ಅಂತ್ಯಕ್ಕೂ ಮುನ್ನವೇ ಮಳೆಯಾಗುತ್ತಿರುವುದು ಕೆಪಿಸಿಗೆ ವರವಾಗಿ ಪರಿಣಮಿಸಿದೆ. ವಿದ್ಯುತ್ ಬೇಡಿಕೆಯ ಪ್ರಮಾಣ ಕಳೆದ ನಾಲ್ಕೈದು ದಿನಗಳಲ್ಲಿ 6 ರಿಂದ 7 ಸಾವಿರ ಮೆಗಾ ವ್ಯಾಟ್‌ಗೆ ಇಳಿಕೆ ಕಂಡಿದೆ. ಇದರಿಂದಾಗಿ ಸದ್ಯ ವಿದ್ಯುತ್ ಉತ್ಪಾದನೆಯನ್ನು ಇಳಿಸಲು ಕೆಪಿಸಿ ನಿರ್ಧರಿಸಿದೆ. ಬೇಸಿಗೆಯ ದಿನಗಳಲ್ಲಿ ಶಾಖೋತ್ಪನ್ನ ಘಟಕಗಳ ಮೇಲೆ ಉಂಟಾಗಿದ್ದ ಉತ್ಪಾದನೆಯ ಹೊರೆ ಇಳಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮೂರನೇ ಘಟಕ ಉತ್ಪಾದನೆಗೆ ಸಿದ್ಧವಾಗಿದೆ. ಆದರೆ, ರಾಜ್ಯದಲ್ಲಿ ಬೇಡಿಕೆ ಕುಸಿದಿದ್ದರಿಂದ ಈ ಘಟಕವನ್ನು ಸದ್ಯಕ್ಕೆ ಮತ್ತೆ ಉತ್ಪಾದನೆಗೆ ತೊಡಗಿಸದಿರಲು ನಿರ್ಧರಿಸಲಾಗಿದೆ. ಅದೇ ರೀತಿ ಬಿಟಿಪಿಎಸ್‌ನಲ್ಲಿಯೂ ಮೂರನೇ ಘಟಕದಲ್ಲಿ ಇಂಥದೇ ಕಾರಣಕ್ಕೆ ಉತ್ಪಾದನೆ ನಿಲ್ಲಿಸಲಾಗಿದೆ.

ಕಲ್ಲಿದ್ದಲು ಸಂಗ್ರಹ ಹೆಚ್ಚಳ:ಕಳೆದ ಆಗಸ್ಟ್ ನಿಂದಲೇ ರಾಜ್ಯದ ಶಾಖೋತ್ಪನ್ನ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆಯಾಗಿತ್ತು. ನಿತ್ಯ ಆರರಿಂದ ಏಳು ರೇಕ್ ಬದಲಿಗೆ ನಾಲ್ಕರಿಂದ ಐದು ರೇಕ್‌ಗಳಲ್ಲಿ ಗಣಿಗಳಿಂದ ಕಲ್ಲಿದ್ದಲು ಬಂದು ವಿದ್ಯುತ್ ಕೇಂದ್ರಗಳಿಗೆ ಸೇರುತ್ತಿತ್ತು. ಕೆಪಿಸಿ ಅಳೆದು ತೂಗಿ ಕಲ್ಲಿದ್ದಲು ಬಳಕೆ ಮಾಡುವಂತಾಗಿತ್ತು. ಆದರೆ, ಸದ್ಯ ಮಳೆಯಾಗುತ್ತಿರುವುದರಿಂದ ವಿದ್ಯುತ್‌ಗೆ ಬೇಡಿಕೆ ತಗ್ಗಿದೆ. ಕೆಲವು ಶಾಖೋತ್ಪನ್ನ ಘಟಕಗಳಿಗೆ ವಿಶ್ರಾಂತಿ ನೀಡಿದ್ದರಿಂದ ಕಲ್ಲಿದ್ದಲು ಸಂಗ್ರಹ ಹೆಚ್ಚಳಕ್ಕೆ ದಾರಿಮಾಡಿದೆ. ಆರ್‌ಟಿಪಿಎಸ್‌ನಲ್ಲಿ ಸುಮಾರು 50ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲಿದೆ. ಬಿಟಿಪಿಎಸ್‌ನಲ್ಲಿ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಯರಮರಸ್ ಸೂಪರ್ ಕ್ರಿಟಿಕಲ್ ಥರ್ಮಲ್ ಕೇಂದ್ರ(ವೈಟಿಪಿಎಸ್)ದ ಎರಡೂ ಘಟಕಗಳು ಸದ್ಯ ವಿದ್ಯುತ್ ಉತ್ಪಾದಿಸುತ್ತಿಲ್ಲ. ಹೀಗಾಗಿ ಅಲ್ಲಿಯೂ 1.50ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲಿದೆ. ಸದ್ಯಕ್ಕೆ ಕಲ್ಲಿದ್ದಲು ಸಮಸ್ಯೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿರುವುದರಿಂದ ವಾತಾವರಣದಲ್ಲಿ ತಂಪು ಮೂಡಿದೆ. ಇದರಿಂದ ವಿದ್ಯುತ್‌ಗೆ ಸಹಜವಾಗಿ ಬೇಡಿಕೆ ಕುಗ್ಗಿದೆ. ಈ ಮಧ್ಯೆ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸುತ್ತಿರುವುದರಿಂದ ಬೇಸಿಗೆಯ ವಿದ್ಯುತ್ ಬೇಡಿಕೆ ಮುಂದೆಯೂ ಏರಿಕೆ ಕಾಣುವ ಸಾಧ್ಯತೆಯಿಲ್ಲ ಎಂಬ ಮಾತು ಕೇಳಿಬಂದಿದೆ.

............

ರಾಜ್ಯದಲ್ಲಿ ನಾನಾ ಕಡೆ ಮಳೆಯಾಗಿರುವುದರಿಂದ ಆರ್‌ಟಿಪಿಎಸ್‌ನ ಮೂರನೇ ಘಟಕವನ್ನು ಉತ್ಪಾದನೆಗೆ ತೊಡಗಿಸದಂತೆ ಕೇಂದ್ರ ಕಚೇರಿಯಿಂದ ನಿರ್ದೇಶನವಿದೆ. ಮುಂದಿನ ಸೂಚನೆಯವರೆಗೆ ಈ ಘಟಕದಲ್ಲಿ ಉತ್ಪಾದನೆ ಮಾಡುತ್ತಿಲ್ಲ.

-ಚಂದ್ರಶೇಖರ್ ಯಲ್ಲಟ್ಟಿ, ಇಡಿ, ಆರ್‌ಟಿಪಿಎಸ್, ಶಕ್ತಿನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ