ಆ್ಯಪ್ನಗರ

ರಾಮನಗರ ಜಿಲ್ಲೆಯ 3 ತಾಲೂಕು ಬರಪೀಡಿತ, ಮುಂಗಾರಿನಲ್ಲಿ ಶೇ 69 ರಷ್ಟು ಮಳೆ ಕೊರತೆ

ರಾಮನಗರದ ಜಿಲ್ಲೆಯಲ್ಲಿ ತೀವ್ರ ಮುಂಗಾರು ಮಳೆ ಕೊರತೆಯಾಗಿದ್ದು, 69% ದಷ್ಟು ಮಳೆ ಕೊರತೆ ಆಗಿದೆ. ಈ ಹಿನ್ನೆಲೆಯಲ್ಲಿ ಸರ್ವೇ ಮಾಡಿರುವ ಅಧಿಕಾರಿಗಳು ರಾಮನಗರದ 3 ತಾಲೂಕುಗಳನ್ನು ಬರಪೀಡಿತ ಎಂದು ಪಟ್ಟಿಗೆ ಸೇರಿಸಿದ್ದಾರೆ. ಬರ ಘೋಷಿಸಿರುವ ಹಿನ್ನಲೆ ಆ ತಾಲೂಕಿನ ಬೆಳೆ ನಷ್ಟಕ್ಕೆ ಪರಿಹಾರ ಸಿಗಲಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸರ್ಕಾರ ಮಾಡಲಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka 5 Sep 2023, 8:58 am

ಹೈಲೈಟ್ಸ್‌:

  • ಜಿಲ್ಲೆಯಲ್ಲಿ ರಾಗಿ ಮತ್ತು ತೊಗರಿ ಪ್ರಮುಖ ಬೆಳೆಗಳಾಗಿವೆ. ಈ ಮುಂಗಾರಿನಲ್ಲಿ ಶೇ. 69ರಷ್ಟು ಮಳೆ ಕೊರತೆ ಉಂಟಾದ ಹಿನ್ನಲೆಯಲ್ಲಿ ಮೂರು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ.
  • ಸರ್ವೆ ಮಾಡಿದ ಅಧಿಕಾರಿಗಳು ರಾಮನಗರ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂಬುದಾಗಿ ಸರಕಾರಕ್ಕೆ ವರದಿ ನೀಡಿದ್ದರು.
  • ಸರಕಾರ ಒಂದು ತಾಲೂಕನ್ನು ಬರ ಎಂದು ಘೋಷಿಸಿದ ಬಳಿಕ ಆ ತಾಲೂಕಿಗೆ ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದ್ದರೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web drought karnataka
  • ರವಿಕಿರಣ್‌ ವಿ,
ರಾಮನಗರ:ಮಳೆ ಕೊರತೆ, ಬೆಳೆ ಪರಿಸ್ಥಿತಿ ಮತ್ತು ಮಣ್ಣಿನ ತೇವಾಂಶ ಕಡಿಮೆಯಿಂದಾಗಿ ಜಿಲ್ಲೆಯ ಐದು ತಾಲೂಕುಗಳ ಪೈಕಿ ಮೂರು ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ರಾಗಿ ಮತ್ತು ತೊಗರಿ ಪ್ರಮುಖ ಬೆಳೆಗಳಾಗಿವೆ. ಈ ಮುಂಗಾರಿನಲ್ಲಿ ಶೇ. 69ರಷ್ಟು ಮಳೆ ಕೊರತೆ ಉಂಟಾದ ಹಿನ್ನಲೆಯಲ್ಲಿ ಮೂರು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ.

ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧ: ಸೆ.8ಕ್ಕೆ ರಾಮನಗರ ಬಂದ್ , ಡಿಕೆಶಿ ಮನೆಗೆ ಮುತ್ತಿಗೆ

ಏನಿದು?:

ಈ ಬಾರಿ ಮುಂಗಾರು ಹಂಗಾಮು ಕೈಕೊಟ್ಟಿ ಹಿನ್ನೆಲೆಯಲ್ಲಿ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದವು. ಹಾಗಾಗಿ ಸರ್ವೆ ಮಾಡಿದ ಅಧಿಕಾರಿಗಳು ರಾಮನಗರ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂಬುದಾಗಿ ಸರಕಾರಕ್ಕೆ ವರದಿ ನೀಡಿದ್ದರು. ಮಳೆ ಮತ್ತು ಬೆಳೆ ಕೊರತೆ, ತೇವಾಂಶದ ಆಧಾರದ ಮೇಲೆ ಬರ ಪೀಡಿತ ಎಂದು ಘೋಷಿಸಲಾಗುತ್ತದೆ.

ಸರ್ವೆ ಕಾರ‍್ಯ:
ಇನ್ನು ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಾಯನ ಮಾಡುವ ಸಂಬಂಧ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ‍್ಯ ಮಾಡಿದ್ದಾರೆ. ಬರ ಪೀಡಿತ ವ್ಯಾಪ್ತಿಗೆ ಆಗಮಿಸಿದ ಒಟ್ಟು 3 ಮೂರು ತಾಲೂಕಿನ 40 ಹೆಚ್ಚು ಹಳ್ಳಿಗಳಲ್ಲಿ ಅನಿಯಮಿತ (ರಾರ‍ಯಂಡಮ್‌)ಆಗಿ ಸರ್ವೆ ಕಾರ‍್ಯ ಮಾಡಿದ್ದಾರೆ. ಇದರಲ್ಲಿ ರಾಮನಗರ ತಾಲೂಕಿನ 14 ಗ್ರಾಮಗಳು, ಕನಕಪುರದ 17 ಹಳ್ಳಿಗಳು, ಹಾರೋಹಳ್ಳಿಯ 9 ಗ್ರಾಮಗಳಲ್ಲಿ ಸರ್ವೆ ಕಾರ‍್ಯ ಮಾಡಿದ್ದಾರೆ.

ಮಳೆ ಕೊರತೆ:
ಮುಂಗಾರು ಹಂಗಾಮಿನ ಕಳೆದ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಶೇ. 69ರಷ್ಟು ಮಳೆ ಕೊರತೆ ಉಂಟಾಗಿದೆ. 108 ಮಿ.ಮೀಟರ್‌ ವಾಡಿಕೆ ಮಳೆಗೆ 35 ಮಿ.ಮೀಟರ್‌ ವಾಸ್ತವ ಮಳೆಯಾಗಿತ್ತು. ಜತೆಗೆ, ಮಾನ್ಸೂನ್‌ ವ್ಯಾಪ್ತಿಯ ಜೂ. 1ರಿಂದ ಸೆ. 3ರ ತನಕ ಜಿಲ್ಲೆಯಲ್ಲಿ 274 ಮಿ.ಮೀಟರ್‌ ವಾಡಿಕೆ ಮಳೆಗೆ 195 ಮಿ.ಮೀಟರ್‌ ವಾಸ್ತವ ಮಳೆಯಾಗಿದೆ. ಆ ಮೂಲಕ -29ರಷ್ಟು ಮಳೆ ಕೊರತೆ ಕಂಡು ಬಂದಿದೆ.

ಬರ ಘೋಷಣೆ ನಿಯಮಗಳು
ಬರ ಪೀಡಿತ ವ್ಯಾಪ್ತಿಗೆ ತಾಲೂಕು ಘೋಷಣೆ ಮಾಡಲು ಸರಕಾರ ಒಂದಿಷ್ಟು ಮಾನದಂಡವನ್ನು ಅನುರಿಸುತ್ತದೆ. ಈ ಪ್ರಕಾರ ಮೂರು ಹಂತಗಳಲ್ಲಿ ಪರಿಶೀಲನೆ ಹಾಗೂ ಸರ್ವೆ ಕಾರ‍್ಯ ಮುಗಿದ ಬಳಿಕ ಬರ ಪರಿಸ್ಥಿತಿ ಘೋಷಣೆ ಮಾಡುತ್ತದೆ.

ಹಂತ-1ರಲ್ಲಿ ಮಳೆ ಕೊರತೆಯು ಶೇ.60ಕ್ಕಿಂತ ಹೆಚ್ಚು ಮತ್ತು ಸತತ ಮೂರು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ ಕಂಡು ಬರಬೇಕು.

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹುಡುಗಿಯರೊಂದಿಗೆ ಬೈಕ್‌ ವೀಲಿಂಗ್ ಮಾಡಿದ್ದ ಭೂಪರು; ಈಗ ಪೊಲೀಸರ ಅತಿಥಿಗಳು
ಹಂತ-2ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲಸಂಪನ್ಮೂಲ ಸೂಚ್ಯಂಕಗಳಲ್ಲಿ ತೀವ್ರತೆಯನ್ನು ಆಧರಿಸಿ ಬರ ತೀವ್ರತೆಯನ್ನು ನಿರ್ಧಾರಿಸಲಾಗುತ್ತದೆ.

ಹಂತ-3 ರಲ್ಲಿ ಬರ ಪರಿಸ್ಥಿತಿ ಕಂಡುಬಂದ ತಾಲೂಕುಗಳಲ್ಲಿನ ಆಯ್ದೆ ಪ್ರದೇಶದಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಬರಪೀಡಿತ ತಾಲೂಕುಗಳಲ್ಲಿನ ಶೇ.10ರಷ್ಟು ಗ್ರಾಮ, ಪ್ರದೇಶಗಳನ್ನು ಆಯ್ಕೆ ಮಾಡಿ 5 ಪ್ರಮುಖ ಬೆಳೆ ಕ್ಷೇತ್ರಗಳಲ್ಲಿ ಬೆಳೆ ಹಾನಿಗೆ ಸಂಬಂಧಿಸಿದ್ದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಂಟಿ ಸಮೀಕ್ಷೆಯನ್ನು ಕೈಗೊಂಡು ದೃಢೀಕೃತ ವರದಿ ಸಲ್ಲಿಸಬೇಕಾಗುತ್ತದೆ.

ಉಳಿದ ತಾಲೂಕು ಘೋಷಣೆ ಸಾಧ್ಯತೆ
ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗದೆ ವಾತಾವರಣ ಇದೇ ರೀತಿ ಮುಂದುವರಿದರೆ ಮಾಗಡಿ ಹಾಗೂ ಚನ್ನಪಟ್ಟಣ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಈಗಾಗಲೇ ಚನ್ನಪಟ್ಟಣ ತಾಲೂಕಿನಲ್ಲಿ ಬಿತ್ತನೆ ಕಡಿಮೆಯಾಗಿದೆ. ಮಾಗಡಿ ತಾಲೂಕಿನಲ್ಲಿ ಬಿತ್ತನೆಯಾಗಿಲ್ಲ. ಸಕಾಲಕ್ಕೆ ಮಳೆಯಾಗದಿದ್ದರೆ, ಈ ಎರಡು ತಾಲೂಕು ಸಹ ಬರ ಪೀಡಿತವಾಗಲಿದೆ.

ಘೋಷಣೆ ಬಳಿಕ:
ಸರಕಾರ ಒಂದು ತಾಲೂಕನ್ನು ಬರ ಎಂದು ಘೋಷಿಸಿದ ಬಳಿಕ ಆ ತಾಲೂಕಿಗೆ ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದ್ದರೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸುವ ಸಂಬಂಧ ವ್ಯವಸ್ಥೆ ಮಾಡಲಾಗುತ್ತದೆ. ಗೋಶಾಲೆ ತೆರೆಯಲಾಗುತ್ತದೆ.

ರಾಮನಗರ ಜಿಲ್ಲೆಯ ಮಾಗಡಿ ಮತ್ತು ಚನ್ನಪಟ್ಟಣ ತಾಲೂಕುಗಳನ್ನು ಹೊರತು ಪಡಿಸಿ, ರಾಮನಗರ, ಕನಕಪುರ ಹಾಗೂ ಹಾರೋಹಳ್ಳಿಯನ್ನು ಬರಪೀಡಿತ ತಾಲೂಕುಗಳೆಂದು ಗುರುತಿಸಲಾಗಿದೆ ಎಂದು ರಾಮನಗರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅಂಬಿಕಾ ಹೇಳಿದ್ದಾರೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ