ಆ್ಯಪ್ನಗರ

ಅಂಗನವಾಡಿ ಮಕ್ಕಳಿಗೆ ಹಸಿವು ಭಾಗ್ಯ..! ಆಹಾರ ಪದಾರ್ಥ ಪೂರೈಕೆಯಲ್ಲಿ ಉದಾಸೀನ..?

ಕೋವಿಡ್‌ ಹಿನ್ನೆಲೆಯಲ್ಲಿ ಅಂಗನವಾಡಿಗಳು ಮುಚ್ಚಿದ್ದ ಕಾರಣ ಬಿಸಿಯೂಟದ ಬದಲು ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆದರೆ, ಅಂಗನವಾಡಿ ಕೇಂದ್ರ ಆರಂಭದ ಬಳಿಕ, ಅಲ್ಲಿಯೇ ಊಟೋಪಚರವನ್ನು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ನೀಡುವುದನ್ನೇ ಮರೆತಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಕಾರ‍್ಯ ನಿರ್ವಹಿಸುತ್ತಿರುವ 1,543 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳು 30ಟನ್‌ ನಷ್ಟು ಆಹಾರ ಪದಾರ್ಥ ಅವಶ್ಯಕತೆ ಇದೆ. ಬೇಡಿಕೆ ತಕ್ಕಂತೆ ಪೂರೈಕೆ ಮಾತ್ರ ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

Edited byದಿಲೀಪ್ ಡಿ. ಆರ್. | Vijaya Karnataka 21 Mar 2022, 2:04 pm

ಹೈಲೈಟ್ಸ್‌:

  • ಮನೆಯಿಂದಲೇ ಊಟ ಕಟ್ಟಿಕೊಂಡು ಬರಬೇಕಾದ ಪರಿಸ್ಥಿತಿಯಲ್ಲಿ ಮಕ್ಕಳು
  • ಜನವರಿ ತಿಂಗಳಿಗೆ ಸಂಬಂಧಿಸಿದ ಆಹಾರ ಪದಾರ್ಥ ಈಗ ವಿತರಣೆ
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಬಿಸಿಯೂಟ
ಸಾಂದರ್ಭಿಕ ಚಿತ್ರ
ರವಿಕಿರಣ್‌ ವಿ.
ರಾಮನಗರ:
ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ಪೂರೈಕೆ ವಿಷಯದಲ್ಲಿ ಸರಕಾರ ತೋರಿಸುತ್ತಿರುವ ಉದಾಸೀನ ನೋಡಿದರೆ ಅಂಗನವಾಡಿಗಳಿಗೆ ಹಸಿವು ಭಾಗ್ಯ ನೀಡಲು ಸರಕಾರ ಚಿಂತಿಸುತ್ತಿದೆಯೇ ಎಂಬ ಶಂಕೆಗೆ ಕಾರಣವಾಗಿದೆ. ಏಕೆಂದರೆ, ಅಂಗನಾಡಿಗಳಿಗೆ ಆಹಾರ ಪೂರೈಕೆ ವಿಷಯದಲ್ಲಿ ತೀವ್ರ ಉದಾಸೀನ ಕಂಡು ಬರುತ್ತಿದೆ. ಇದರಿಂದಾಗಿ ಪುಟಾಣಿ ಮಕ್ಕಳು ಮನೆಯಿಂದಲೇ ಊಟ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜನವರಿ ಆಹಾರ ಈಗ ಪೂರೈಕೆ: ಇನ್ನು 10 ದಿನ ಕಳೆದರೆ ಮಾರ್ಚ್ ತಿಂಗಳೇ ಮುಗಿಯುತ್ತಾ ಬರುತ್ತಿದೆ. ಆದ್ರೆ ಇದೀಗ ಕಳೆದ ಮೂರು ದಿನಗಳಿಂದ ಜನವರಿ ತಿಂಗಳಿಗೆ ಸಂಬಂಧಿಸಿದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ.

ಶಾಲೆಗಳಿಗೆ ಸೂರ್ಯಕಾಂತಿ ಎಣ್ಣೆ ಪೂರೈಸದ ಸರಕಾರ; ಅಧಿಕ ಮೊತ್ತ ನೀಡಿ ಬೇರೆ ಎಣ್ಣೆ ಖರೀದಿಗೆ ಇಲಾಖೆ ಸೂಚನೆ
ಅಷ್ಟಕ್ಕೂ ಆಗಿರುವುದೇನು?: ಮಕ್ಕಳಿಗೆ ಅಪೌಷ್ಟಿಕತೆ ಕಾಡಬಾರದೆಂದು ಸರಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡುತ್ತಿದೆ. ಪ್ರತಿ ತಿಂಗಳು ಇಂತಿಷ್ಟು ರೇಷನ್‌ ಕೂಡ ನೀಡಲಾಗುತ್ತಿದೆ. ಸಣ್ಣ ಮಕ್ಕಳ ಜತೆಗೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸಹ ಮಧ್ಯಾಹ್ನ ಊಟ ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಆದರೆ, ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಆಹಾರ ಸರಪಳಿಯು ಕಡಿತವಾಗಿದೆ.


ಕೋವಿಡ್‌ ಹಿನ್ನೆಲೆಯಲ್ಲಿ ಅಂಗನವಾಡಿಗಳು ಮುಚ್ಚಿದ್ದ ಕಾರಣ ಬಿಸಿಯೂಟದ ಬದಲು ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆದರೆ, ಅಂಗನವಾಡಿ ಕೇಂದ್ರ ಆರಂಭದ ಬಳಿಕ, ಅಲ್ಲಿಯೇ ಊಟೋಪಚರವನ್ನು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ನೀಡುವುದನ್ನೇ ಮರೆತಂತೆ ಕಾಣುತ್ತಿದೆ.

ಆಹಾರ ಇಂಡೇಟ್‌: ಜಿಲ್ಲೆಯಲ್ಲಿ ಕಾರ‍್ಯ ನಿರ್ವಹಿಸುತ್ತಿರುವ 1,543 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳು 30ಟನ್‌ ನಷ್ಟು ಆಹಾರ ಪದಾರ್ಥ ಅವಶ್ಯಕತೆ ಇದೆ. ಬೇಡಿಕೆ ತಕ್ಕಂತೆ ಪೂರೈಕೆ ಮಾತ್ರ ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಶಾಲಾ ಬಿಸಿಯೂಟದ ಆಹಾರ ಸಾಮಗ್ರಿ ಸರಬರಾಜಿನಲ್ಲಿ ತೊಡಕು; ಶಿಕ್ಷಕರ ಜೇಬಿಗೆ ಬೀಳುತ್ತಿದೆ ಕತ್ತರಿ!
ಜನವರಿ ತಿಂಗಳ ಆಹಾರ ಪದಾರ್ಥಗಳ ಪೂರೈಕೆಯು ಮಾರ್ಚ್ ತಿಂಗಳ ಅಂತ್ಯಕ್ಕೆ ಪೂರೈಕೆ ಮಾಡಲಾಗುತ್ತಿದೆ. ಅದರಲ್ಲೂ ರಾಮನಗರ ತಾಲೂಕಿನ ಅಂಗವಾಡಿ ಕೇಂದ್ರಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಬಾಕಿ ಉಳಿದಂತೆ ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕಿನಲ್ಲಿ ಬಾಕಿ ಇರುವುದಲ್ಲೇ ಸರಿದೂಗಿಸಲಾಗುತ್ತಿದೆ.

17 ಪದಾರ್ಥಗಳು: ಅಕ್ಕಿ, ಬೇಳೆ, ಕಡಲೇ ಬೀಜ, ಹಾಲಿನ ಪುಡಿ, ಬೆಲ್ಲ, ಹೆಸರು ಕಾಳು, ಹೆಸರು ಬೇಳೆ, ಎಣ್ಣೆ, ಸಾಸಿವೆ ಒಳಗೊಂಡಂತೆ ಸರಕಾರ 17 ಪದಾರ್ಥಗಳನ್ನು ವಿತರಣೆ ಮಾಡುತ್ತದೆ. ಇವುಗಳನ್ನು ಬಳಕೆ ಮಾಡಿಕೊಂಡು ಅಂಗನವಾಡಿ ಕೇಂದ್ರದಲ್ಲಿಯೇ ಆಹಾರ ತಯಾರಿಕೆ ಮಾಡಿ, ಮಕ್ಕಳಿಗೆ ನೀಡಬೇಕು.

ಆಹಾರ ಪದಾರ್ಥಗಳ ಕೊರತೆ ಇಲ್ಲ. ಒಂದು ತಿಂಗಳ ಮುಂಚಿತವಾಗಿಯೇ ಆಹಾರ ಪದಾರ್ಥಗಳ ಪೂರೈಕೆ ಮಾಡಲಾಗುತ್ತಿದೆ.
ನಾರಾಯಣಸ್ವಾಮಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ, ರಾಮನಗರ.

ಮನೆಯಿಂದಲೇ ಊಟ: ಸಮಸ್ಯೆ ಹೆಚ್ಚಾಗಿರುವ ರಾಮನಗರ ತಾಲೂಕು ಅಂಗನವಾಡಿ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಮಧ್ಯಾಹ್ನದ ಊಟಕ್ಕೆ ಮನೆಯಿಂದಲೇ ಡಬ್ಬಿ ತರುತ್ತಿದ್ದಾರೆ. ಈ ತಿಂಗಳು ಆಹಾರ ನೀಡಿರುವ ಕಾರಣ, ಕೆಲವು ಕಡೆ ಸಿಹಿ ಪೊಂಗಲ್‌ ಹೊರತುಪಡಿಸಿ, ಬೇರೆ ಊಟ ನೀಡುತ್ತಿಲ್ಲ ಎಂಬ ಗಂಭೀರವಾದ ಆರೋಪವು ಕೇಳಿ ಬರುತ್ತಿದೆ.

ಮಾರ್ಚ್ ಅಂತ್ಯಕ್ಕೆ: ಅರ್ಧ ತಿಂಗಳು ಮುಗಿಯುತ್ತಾ ಬರುತ್ತಿರುವ ವೇಳೆ ಜನವರಿ ತಿಂಗಳ ಕೋಟಾವನ್ನು ನೀಡಲಾಗುತ್ತಿದೆ. ಆದರೆ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕೋಟಾವನ್ನು ಯಾವ ತಿಂಗಳು ನೀಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಗರ್ಭಿಣಿ ಬಾಣಂತಿಯರಿಗೆ: ಈ ವರ್ಗದಲ್ಲಿಅಪೌಷ್ಠಿಕತೆಯನ್ನು ಕಡಿಮೆ ಮಾಡುವ ಸಲುವಾಗಿ ಬಿಸಿಯೂಟವನ್ನು ವಿತರಣೆ ಮಾಡಲಾಗುತ್ತಿದೆ. ಕೋವಿಡ್‌ ಹಿನ್ನಲೆಯಲ್ಲಿ ಮನೆಗೆ ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಪ್ರಸ್ತುತ ಇದನ್ನು ತಡೆ ಹಿಡಿಯಲಾಗಿದ್ದು, ಇಲ್ಲೇ ಊಟ ನೀಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ