ಆ್ಯಪ್ನಗರ

ಮೋದಿ ಮಾತುಗಾರಿಕೆಗೆ ಬಲಿಯಾಗದಿರಿ: ಸಂಸದ ಡಿ.ಕೆ.ಸುರೇಶ್‌

ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಸುಳ್ಳು ಹೇಳಿಕೊಂಡು ಐದು ವರ್ಷ ಕಾಲ ಕಳೆದಿದ್ದಾರೆ...

Vijaya Karnataka 4 Apr 2019, 5:00 am
ಹಾರೋಹಳ್ಳಿ (ಕನಕಪುರ ತಾ.): ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಸುಳ್ಳು ಹೇಳಿಕೊಂಡು ಐದು ವರ್ಷ ಕಾಲ ಕಳೆದಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಮುಂದಾಗಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.
Vijaya Karnataka Web do not miss modis speech mp dk suresh
ಮೋದಿ ಮಾತುಗಾರಿಕೆಗೆ ಬಲಿಯಾಗದಿರಿ: ಸಂಸದ ಡಿ.ಕೆ.ಸುರೇಶ್‌


ತಾಲೂಕಿನ ಹಾರೋಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ''ಪ್ರಧಾನಮಂತ್ರಿ ಮನ್‌ಕಿಬಾತ್‌ ಸೇರಿದಂತೆ ಹಲವು ಪ್ರಚಾರಗಳ ಮೂಲಕ ಮತದಾರರನ್ನು ಮಂತ್ರಮುಗ್ಧರನ್ನಾಗಿ ಮಾಡುವ ಭಾಷಣದ ಕಲೆ ಇವರದ್ದಾಗಿದೆ. ಐದು ವರ್ಷದ ಅವಧಿಯಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಪ್ರಧಾನಮಂತ್ರಿ ಮೋದಿಯವರು ಜನರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದರು. ಇವರು ಯಾವುದೇ ಹಣವನ್ನೂ ಹಾಕದೇ ರೈತರಿಗಾಗಲೀ, ಜನರಿಗಾಗಲೀ ಶಾಶ್ವತ ಜನಪರ ಕಾರ್ಯಕ್ರಮಗಳು, ರೈತಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಕೇವಲ ಸುಳ್ಳು ಹೇಳುವುದನ್ನು ರೂಢಿಸಿಕೊಂಡಿರುವ ಇವರು ದೇಶ-ವಿದೇಶ ಪ್ರವಾಸ ಮಾಡುತ್ತಾ ಪ್ರಚಾರ ಪಡೆಯುತ್ತಿದ್ದಾರೆ,'' ಎಂದು ವಾಕ್‌ಪ್ರಹಾರ ನಡೆಸಿದರು.

ಐತಿಹಾಸಿಕ ಚುನಾವಣೆ: ''ಈ ಚುನಾವಣೆ ಐತಿಹಾಸಿಕ ಮಹತ್ವದ ಚುನಾವಣೆಯಾಗಿದ್ದು, ದೇಶದಲ್ಲಿ ಕೋಮುವಾದಿ ಭಾರತೀಯ ಜನತಾಪಕ್ಷ ವನ್ನು ಅಧಿಕಾರಕ್ಕೆ ತರಬಾರದು ಎಂಬ ದೃಷ್ಟಿಯಿಂದ ಆಯಾ ರಾಜ್ಯಗಳು ಮಹಾಘಟಬಂಧನ್‌ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ, ಆಂಧ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮಹಾಘಟಬಂಧನ್‌ ಹೊಂದಾಣಿಕೆಯಾಗಿದೆ. ದೀನ-ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ದುರ್ಬಲರ ಪರವಾದ ಆಡಳಿತವನ್ನು ನೀಡಲಾಗದೇ ಹಿಂದುಳಿದವರು ಆತಂಕದಿಂದ ಬದುಕುವಂತಾಗಿದೆ. ಹೀಗಾಗಿ ಬಿಜೆಪಿಯನ್ನು ಜನತೆ ಸಂಪೂರ್ಣ ತಿರಸ್ಕರಿಸಬೇಕು,'' ಎಂದು ಹೇಳಿದರು.

''ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ. ಈಗಾಗಲೇ ನೂರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿರುವುದರಿಂದ ಮತ್ತಷ್ಟು ಮುಂದಿನ ಅಭಿವೃದ್ಧಿಗಾಗಿ ಈ ಚುನಾವಣೆಯಲ್ಲಿ ಹಸ್ತದ ಅಭ್ಯರ್ಥಿ ನನ್ನನ್ನು ಗೆಲ್ಲಿಸಬೇಕು,'' ಎಂದು ಮನವಿ ಮಾಡಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ''ಡಿ.ಕೆ.ಸಹೋದರರು ಮುಖ್ಯಮಂತ್ರಿಗಳ ಜತೆ ಅಭಿವೃದ್ಧಿಗಾಗಿ ಸಂಪೂರ್ಣ ಕೈಜೋಡಿಸುತ್ತಿರುವುದರಿಂದ ಮುಂದಿನ ಕೆಲ ತಿಂಗಳಲ್ಲಿ ಅಭಿವೃದ್ಧಿ ಮತ್ತಷ್ಟು ಹೆಚ್ಚಾಗಲಿದೆ. ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿರುವುದು ಸಂತಸ ತಂದಿದೆ. ಇದರಿಂದ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳು ಕೂಡ ಶೀಘ್ರವೇ ಅಭಿವೃದ್ಧಿಯಾಗಲಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ,'' ಎಂದರು.

ಡಿಕೆಶಿ, ಸಿಎಂ ಪ್ರಚಾರ ಮಾಡ್ತಾರೆ: ''ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡೂ ಪಕ್ಷ ದ ಕಾರ್ಯಕರ್ತ ಮುಖಂಡರಿಗೆ ಒಟ್ಟಾಗಿ ಪ್ರಚಾರ ಮಾಡಿ, ಅತಿಹೆಚ್ಚಿನ ಬಹುಮತ ತಂದುಕೊಡಬೇಕೆಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಪಕ್ಷ ದ ಕಾರ್ಯಕರ್ತ ಮುಖಂಡರು ಜಂಟಿ ಪ್ರಚಾರವನ್ನೂ ಕೂಡ ನಡೆಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಅವರು ಸಮಯ ಸಿಕ್ಕಾಗ ಪ್ರಚಾರಕ್ಕೆ ಬರುತ್ತೇವೆಂದು ಹೇಳಿದ್ದಾರೆ. ಮುಖ್ಯಮಂತ್ರಿಗಳೂ ಸಹ ಸಮಯ ಸಿಕ್ಕರೆ ಪ್ರಚಾರಕ್ಕೆ ಬರುತ್ತಾರೆ,'' ಎಂದರು.

ಜಿ.ಪಂ. ಅಧ್ಯಕ್ಷ ಎಂ.ಎನ್‌.ನಾಗರಾಜು, ಸದಸ್ಯ ಎಚ್‌.ಕೆ.ನಾಗರಾಜು, ಜೆಡಿಎಸ್‌ ಮುಖಂಡರಾದ ರಾಜಶೇಖರ್‌, ಡಿ.ಎಸ್‌.ಭುಜಂಗಯ್ಯ, ರಾಮಕೃಷ್ಣ, ರಾಮ-ಲಕ್ಷ ್ಮಣ, ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಬ್ಲಾಕ್‌ ಅಧ್ಯಕ್ಷ ಜೆಸಿಬಿ ಅಶೋಕ್‌, ಕೇಬಲ್‌ರವಿ, ಗೀತಾಈಶ್ವರ್‌ ಸೇರಿದಂತೆ ಅನೇಕರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ