ಆ್ಯಪ್ನಗರ

ಶಿಥಿಲಗೊಂಡಿದ್ದ ಸೇತುವೆ ದುರಸ್ತಿಗೆ ಕೊನೆಗೂ ಚಾಲನೆ

ಓವರ್‌ ಲೋಡ್‌ ಲಾರಿಗಳ ಓಡಾಟದಿಂದ ಶಿಥಿಲಗೊಂಡು ಯಾವುದೇ ಕ್ಷಣ ಕುಸಿಯುವ ಹಂತ ತಲುಪಿದ್ದ ಸೇತುವೆಯ ದುರಸ್ಥಿ ಕಾರ್ಯಕ್ಕೆ ಕೊನೆಗೂ ಚಾಲನೆ ದೊರೆತಿದೆ.

Vijaya Karnataka 19 May 2019, 5:00 am
ಬಿಡದಿ: ಓವರ್‌ ಲೋಡ್‌ ಲಾರಿಗಳ ಓಡಾಟದಿಂದ ಶಿಥಿಲಗೊಂಡು ಯಾವುದೇ ಕ್ಷಣ ಕುಸಿಯುವ ಹಂತ ತಲುಪಿದ್ದ ಸೇತುವೆಯ ದುರಸ್ಥಿ ಕಾರ್ಯಕ್ಕೆ ಕೊನೆಗೂ ಚಾಲನೆ ದೊರೆತಿದೆ.
Vijaya Karnataka Web drive to repair the dilapidated bridge
ಶಿಥಿಲಗೊಂಡಿದ್ದ ಸೇತುವೆ ದುರಸ್ತಿಗೆ ಕೊನೆಗೂ ಚಾಲನೆ


ಬಿಡದಿ ಹೋಬಳಿ ಗೋಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಶ್ರಮದೊಡ್ಡಿ ಸಮೀಪ ಕೊಳ್ಳಗನಹಳ್ಳಿ-ಬಿಡದಿ ಸಂಪರ್ಕ ರಸ್ತೆಯಲ್ಲಿ ತೊರೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲವಾಗಿ ಹಲವಾರು ವರ್ಷಗಳೇ ಕಳೆದಿದ್ದವು. ಸೇತುವೆ ಅಪಾಯದ ಸ್ಥಿತಿಯಲ್ಲಿದ್ದ ಕಾರಣ ಸೇತುವೆ ದಾಟುವವರೆಗೆ ಚಾಲಕರು ವಾಹನಗಳನ್ನು ಆತಂಕದಲ್ಲಿಯೇ ಚಾಲನೆ ಮಾಡಬೇಕಾದ ದುಸ್ಥಿತಿ ಎದುರಾಗಿತ್ತು. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಾಹನಗಳು ಸಹ ಸೇತುವೆ ಮುಖಾಂತರ ಸಂಚಾರ ಮಾಡುತ್ತಿದ್ದರಿಂದ ಮಕ್ಕಳು ಶಾಲೆಯಿಂದ ಮನೆಗೆ ವಾಪಸ್‌ ಬರುವವರೆಗೂ ಪೋಷಕರಲ್ಲಿ ಆತಂಕ ಕಾಡುತ್ತಿತ್ತು.

ಬೆಳಕು ಚೆಲ್ಲಿದ ವಿಕ ವರದಿ: ಸೇತುವೆ ದುಸ್ಥಿತಿ ಕುರಿತು 2018ರ ಮಾರ್ಚ್‌ 25ರ ಸಂಚಿಕೆಯಲ್ಲಿ ವಿಕ ವಿಸ್ಕೃತ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಅಂದಿನ ಶಾಸಕರಾಗಿದ್ದ ಎಚ್‌.ಸಿ.ಬಾಲಕೃಷ್ಣ ಅವರು ಹೊಸ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂಗಳ ಅನುದಾನ ಕೋರಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ನಂತರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತ್ತು. ಚುನಾವಣೆ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತಿದ್ದು, ಲೋಕೋಪಯೋಗಿ ಇಲಾಖೆಗೆ ಸೇತುವೆ ನಿರ್ಮಾಣ ಕಾಮಗಾರಿ ಹೊಣೆಯನ್ನು ನೀಡಲಾಗಿದೆ. ಇದೀಗ 1 ಕೋಟಿ ರೂಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು ಕಾಮಗಾರಿ ಭರದಿಂದ ಸಾಗಿದೆ.

ಸುತ್ತಿ ಬಳಸಿ ಬರಬೇಕಿತ್ತು: ಸದರಿ ಮಾರ್ಗ ಬಿಡದಿಗೆ ಅತಿ ಸಮೀಪದ ಮಾರ್ಗವಾಗಿದೆ. ಒಂದೊಮ್ಮೆ ಈ ಸಂಪರ್ಕ ತುಂಡರಿಸಿ ಹೋದರೆ, ಪರ್ಯಾಯ ರಸ್ತೆ ಮೂಲಕ ಏಳೆಂಟು ಕಿಲೋಮೀಟರ್‌ ಸುತ್ತಿಬಳಸಿ ಬಿಡದಿ ತಲುಪಬೇಕಿತ್ತು.ಹಾಗಾಗಿ ಈ ಸೇತುವೆ ದುರಸ್ತಿ ಅತೀ ತುರ್ತಾಗಿ ಆಗಬೇಕಿತ್ತು. ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ಈ ಮಾರ್ಗದಲ್ಲಿ ಸಂಚರಿಸುವ ಜನರಲ್ಲಿ ಹರ್ಷ ತಂದಿದೆ.

ಸೇತುವೆ ನಿರ್ಮಾಣ ಯಾವ ತೊರೆಗೆ?: ಬಿಡದಿ ಸಮೀಪದ ನಲ್ಲಿಗುಡ್ಡೆ ಕೆರೆಯ ಕೋಡಿ ನೀರು ಮತ್ತು ಭೈರಮಂಗಲ ಕೆರೆಯ ಕೊಳಕು ನೀರು ಹರಿಯುವ ತೊರೆಗೆ ಅಡ್ಡಲಾಗಿ ರಾಮನಹಳ್ಳಿಯ ಆಶ್ರಮದೊಡ್ಡಿ ಸಮೀಪ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಮಳೆಗಾಲದಲ್ಲಿ ನಲ್ಲಿಗುಡ್ಡೆ ಕೆರೆ ಕೋಡಿ ನೀರು ಮತ್ತು ಬೆಂಗಳೂರಿನಿಂದ ಹರಿದು ಬಂದು ಭೈರಮಂಗಲ ಕೆರೆ ಸೇರುವ ಕಲ್ಮಶ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಸೇತುವೆ ಮೇಲೆ ತುಂಬಿ ಹರಿದು ಗ್ರಾಮಗಳ ನಡುವಿನ ಸಂಪರ್ಕವೇ ಕಡಿದುಹೋದ ನಿರ್ದಶನಗಳಿವೆ.

ನಿತ್ಯ ನೂರಾರು ವಾಹನಗಳ ಸಂಚಾರ: ಈ ಸೇತುವೆಯ ಮೇಲೆ ದಿನನಿತ್ಯ ಬಿಎಂಟಿಸಿ ಬಸ್‌ಗಳು, ಮರಳು ಲಾರಿಗಳು, ಜಲ್ಲಿ ಕ್ರಷರ್‌ನ ಟಿಪ್ಪರ್‌ಗಳಂತಹ ಭಾರಿ ವಾಹನಗಳು ಸಂಚರಿಸುತ್ತಿದ್ದು, 20ಕ್ಕೂ ಹೆಚ್ಚು ಶಾಲಾ ವಾಹನಗಳು ಸಹ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಬಿಡದಿಗೆ ಇಟ್ಟಮಡು ಮೂಲಕ ಆಶ್ರಮದೊಡ್ಡಿ, ರಾಮನಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಸಹಜವಾಗಿ ಸೇತುವೆ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ.

ಅಪಾಯಕ್ಕೆ ಆಹ್ವಾನ ನೀಡಿತ್ತು: ಗೋಪಹಳ್ಳಿ, ಆಶ್ರಮದೊಡ್ಡಿ, ಇಟ್ಟಮಡು, ಬಾನಂದೂರು ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ಬಿಡದಿಗೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿರುವ ಸೇತುವೆಯ ಎರಡೂ ಬದಿಯಲ್ಲಿ ರಸ್ತೆ ಎತ್ತರವಾಗಿದ್ದು, ಸೇತುವೆ ತಗ್ಗು ಪ್ರದೇಶದಲ್ಲಿದೆ. ಸೇತುವೆಯ ಎರಡು ಕಡೆ ತಡೆಗೋಡೆಗಳಿಲ್ಲದ ಕಾರಣ ಅಪಾಯ ಇನ್ನಷ್ಟು ತೀವ್ರವಾಗಿತ್ತು.


ಕೊಳ್ಳಿಗನಹಳ್ಳಿ-ಬಿಡದಿ ರಸ್ತೆಯಲ್ಲಿ ಬಿಎಂಟಿಸಿ ಮತ್ತು ಶಾಲಾ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಅಪಾಯವಿದ್ದರೂ ಇದೇ ಸೇತುವೆಯನ್ನು ಆಶ್ರಯಿಸಬೇಕಾಗಿದೆ. ಕೆಲವೊಮ್ಮೆ ಅಪಾಯವನ್ನು ನೆನೆದರೆ ಎದೆ ಡವಗುಟ್ಟುತ್ತಿತ್ತು. ಸೇತುವೆ ಶಿಥಿಲವಾಗಿರುವ ಬಗ್ಗೆ ನಾವುಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರೂ ಉಪಯೋಗವಾಗಿರಲಿಲ್ಲ, ''ವಿಕ'' ಪತ್ರಿಕೆ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆದಿದ್ದರಿಂದ ಇಂದು ಹೊಸ ಸೇತುವೆಗೆ ಅನುದಾನ ಬಂದು ಕಾಮಗಾರಿ ಆರಂಭವಾಗಿದೆ.
-ಕುಮಾರ್‌ ರಾಮನಹಳ್ಳಿ, ಗ್ರಾಮಸ್ಥ

ಕೊಳ್ಳಿಗನಹಳ್ಳಿ-ಬಿಡದಿ ರಸ್ತೆಗೆ ಸಂಪರ್ಕ ಸಾಧಿಸುವ ಸೇತುವೆ ಶಿಥಿಲವಾಗಿದ್ದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ಸರಕಾರ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಶುರುವಾಗಿದೆ. ಮಳೆಗಾಲ ಆರಂಭವಾಗುವಷ್ಟರಲ್ಲಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ.
- ಶಂಕರ್‌, ಎಇಇ, ಲೋಕೋಪಯೋಗಿ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ