ಆ್ಯಪ್ನಗರ

ಪರಿಹಾರ ನೀಡದೇ ಕಾಮಗಾರಿ ವಿರುದ್ಧ ರೈತರ ಪ್ರತಿಭಟನೆ

ಭೂ ಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆಗಳನ್ನು ಪೂರೈಸದೆ ಏಕಾಏಕಿ ಕಾಮಗಾರಿ ಆರಂಭಿಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 14 Sep 2019, 3:11 pm
ರಾಮನಗರ(ಕೂಟಗಲ್‌): ಭೂ ಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆಗಳನ್ನು ಪೂರೈಸದೆ ಏಕಾಏಕಿ ಕಾಮಗಾರಿ ಆರಂಭಿಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web farmers protest against work without compensation
ಪರಿಹಾರ ನೀಡದೇ ಕಾಮಗಾರಿ ವಿರುದ್ಧ ರೈತರ ಪ್ರತಿಭಟನೆ


275 ಸಂಖ್ಯೆಯ ಬೆಂಗಳೂರು-ಮೈಸೂರು ಬೈಪಾಸ್‌ ರಾಷ್ಟ್ರೀಯ ಹೆದ್ದಾರಿಯನ್ನು 10 ಪಥಗಳನ್ನಾಗಿ ವಿಸ್ತರಿಸುವ ಯೋಜನೆಗೆ ದೊಡ್ಡಮಣ್ಣುಗುಡ್ಡೆ, ಜಯಪುರ, ವಿಜಯಪುರ ಹಾಗೂ ಹುಲ್ತಾರ್‌ ಹೊಸದೊಡ್ಡಿ ಗ್ರಾಮಗಳಲ್ಲಿಜಮೀನನ್ನು ಗುರುತಿಸಲಾಗಿದೆ. ಆದರೆ ಈವರೆಗೂ ಭೂ ಮಾಲೀಕರಿಗೆ ಯಾವುದೇ ನೋಟಿಸ್‌ ಅಥವಾ ಪರಿಹಾರವಾಗಲಿ ನೀಡಿಲ್ಲಎಂದು ಹೇಳಲಾಗುತ್ತಿದೆ.

ರೈತರು-ಅಧಿಕಾರಿಗಳ ನಡುವೆ ಜಟಾಪಟಿ: ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಕಂಪನಿ ನೌಕರರು ಶುಕ್ರವಾರ ಪರಿಹಾರ ನೀಡದ ಜಮೀನುಗಳಲ್ಲಿದ್ದ ನೂರಾರು ಮಾವಿನ ಮರಗಳನ್ನು ಯಂತ್ರಗಳ ಮೂಲಕ ತೆರವುಗೊಳಿಸಲು ಮುಂದಾದರು. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೆಲಸಕ್ಕೆ ಅಡ್ಡಿಪಡಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮುಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಹಿಟಾಚಿ ಚಾಲಕನಿಗೆ ರೈತರಿಂದ ಗೂಸಾ: ರೈತರ ಮಾತಿಗೆ ಸೊಪ್ಪು ಹಾಕದ ಬೈಪಾಸ್‌ ಹೈವೆ ನಿರ್ಮಾಣ ಯೋಜನೆ ಗುತ್ತಿಗೆ ಕಂಪೆನಿಯ ನೌಕರರು ಹಿಟಾಚಿ ಯಂತ್ರದಿಂದ ಮರಗಳನ್ನು ಧರೆಗುರಳಿಸುವ ಪ್ರಕ್ರಿಯೆ ಮುಂದುವರೆಸಿದರು. ಈ ಸುದ್ದಿ ಜಯಪುರ, ವಿಜಯಪುರ ಗ್ರಾಮಗಳಲ್ಲಿಹರಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿಗ್ರಾಮಸ್ಥರು ಜಮಾಯಿಸಿದರು. ಕೆಲವು ಯುವಕರು ಹಿಟಾಚಿ ಯಂತ್ರದ ಚಾಲಕನಿಗೆ ಗೂಸ ಕೊಟ್ಟು ಯಂತ್ರದ ಕೀಲಿಯನ್ನು ಕಿತ್ತುಕೊಂಡರು.

ಹಲ್ಲೆಗೆ ಮುಂದಾದ ಎಂಜಿಯರ್‌: ಈ ವೇಳೆ ಸ್ಥಳದಲ್ಲಿದ್ದ ದಿಲೀಪ್‌ ಬಿಲ್ಡ್‌ ಕಾನ್‌ ಲಿಮಿಟೆಡ್‌ ಕಂಪನಿಯ ಎಂಜಿನಿಯರ್‌ ಅವರು ರೈತರ ಮೇಲೆ ಹಲ್ಲೆಗೆ ಮುಂದಾದರು. ಇದರಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು ಅವರಿಗೂ ಧರ್ಮದೇಟು ಕೊಟ್ಟರು. ತಕ್ಷಣವೇ ಮಧ್ಯಪ್ರವೇಶಿಸಿದ ಗ್ರಾಮದ ಹಿರಿಯ ಮುಖಂಡರ,ು ಯುವಕರನ್ನು ಸಮಾಧಾನ ಪಡಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು: ಸ್ಥಳಕ್ಕೆ ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಜೀವನ್‌ ಹಾಗೂ ಪಿಎಸ್‌ಐ ಲಕ್ಷ್ಮಣಗೌಡ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಹೈವೆ ನಿರ್ಮಾಣ ಗುತ್ತಿಗೆ ಕಂಪನಿ ನೌಕರರು ಹಾಗೂ ಭೂ ಮಾಲೀಕರಿಂದ ಮಾಹಿತಿ ಪಡೆದುಕೊಂಡರು. ಪರಿಹಾರ ನೀಡದೆ ಕಾಮಗಾರಿ ಆರಂಭಿಸಿದ ನೌಕರರಿಗೆ ಪೊಲೀಸ್‌ ಅಧಿಕಾರಿಗಳು ಬುದ್ಧಿ ಮಾತು ಹೇಳಿದರು. ಅದರಂತೆ ನೌಕರರು ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಿಟಾಚಿಗಳನ್ನು ವಾಪಸ್‌ ಕೊಂಡೊಯ್ದರು.

ಅಧಿಕಾರಿಗಳಿಂದ ದೌರ್ಜನ್ಯದ ಆರೋಪ: ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿಕಣ್ವ ಮುಳುಗಡೆ ನಿರಾಶ್ರಿತರು ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದು, ಪಹಣಿ ಸೇರಿದಂತೆ ಎಲ್ಲಾದಾಖಲಾತಿಗಳನ್ನು ಹೊಂದಿದ್ದಾರೆ. ಆದರೂ, ಅವರಿಗೆ ಯಾವುದೇ ಮಾಹಿತಿ ನೀಡದೇ, ಅಧಿಕಾರಿಗಳು ಬಲವಂತದಿಂದ ರಸ್ತೆ ಕೆಲಸ ಆರಂಭಿಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬದು ರೈತರ ಆರೋಪ.

ಹುಸಿಯಾದ ಭರವಸೆ: ಬೆಂಗಳೂರು-ಮೈಸೂರು ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಒಳಪಡುವ ಭೂ ಮಾಲೀಕರ ಸಭೆಯನ್ನು ಕಳೆದ ವಾರವಷ್ಟೇ ಪ್ರಾಧಿಕಾರದ ಕಚೇರಿಯಲ್ಲಿಕರೆಯಲಾಗಿತ್ತು, ಕಂದಾಯ ಇಲಾಖೆ ಮತ್ತು ಪ್ರಾಧಿಕಾರದಿಂದ ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡು ಪರಿಹಾರ ವಿತರಿಸಿದ ನಂತರವಷ್ಟೇ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ರೈತರಿಗೆ ಅಧಿಕಾರಿಗಳು ಭರವಸೆ ನೀಡಿದ್ದರು.

ನೂರಾರು ಮಾವಿನ ಮರಗಳ ನಾಶ: ಆದರೆ, ಹೈವೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಕಂಪನಿಯ ನೌಕರರು, ದೌರ್ಜನ್ಯದಿಂದ ರೈತರಿಂದ ಭೂಮಿ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಬೃಹತ್‌ ಯಂತ್ರಗಳನ್ನು ಬಳಸಿ ರೈತರ ಮಾವಿನ ತೋಪುಗಳನ್ನು ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ. ರೈತರಾದ ವೆಂಕಟಸ್ವಾಮಿ ಜಮೀನಿನಲ್ಲಿ80, ತಿಮ್ಮಯ್ಯರವರ ಜಮೀನಿನಲ್ಲಿನ 35 ಮರಗಳು, ಶ್ರೀನಿವಾಸ ಜಮೀನಿನಲ್ಲಿ53 ಮಾವಿನ ಮರಗಳನ್ನು ಕಿತ್ತೆಸೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ