ಆ್ಯಪ್ನಗರ

ಅಧಿಕಾರಿಗಳೇ ರಜೆಯ ಮೋಜಿನಿಂದ ಹೊರ ಬನ್ನಿ!

ಅಧಿಕಾರಿಗಳೇ , ಸಾಲು ಸಾಲು ರಜೆಯ ಮೋಜಿನಿಂದ ಹೊರ ಬನ್ನಿ, ಜನರ ಸಮಸ್ಯೆಗೆ ಸ್ಪಂದಿಸಿ ಎಂಬ ಕೂಗು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

Vijaya Karnataka 13 Aug 2019, 5:00 am
ತ್ಯಾಜ್ಯ ವಿಲೇವಾರಿ ಆಗದೇ ಗಬ್ಬು ನಾರುತ್ತಿರುವ ರಾಮನಗರ| ಹದಿನೈದು ದಿನಕ್ಕೊಮ್ಮೆ ಕಾವೇರಿ ನೀರು
Vijaya Karnataka Web government holidays no works in district
ಅಧಿಕಾರಿಗಳೇ ರಜೆಯ ಮೋಜಿನಿಂದ ಹೊರ ಬನ್ನಿ!


* ರವಿಕಿರಣ್‌.ವಿ. ರಾಮನಗರ

ಅಧಿಕಾರಿಗಳೇ , ಸಾಲು ಸಾಲು ರಜೆಯ ಮೋಜಿನಿಂದ ಹೊರ ಬನ್ನಿ, ಜನರ ಸಮಸ್ಯೆಗೆ ಸ್ಪಂದಿಸಿ ಎಂಬ ಕೂಗು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

ರಾಜ್ಯದ ಮುಕ್ಕಾಲು ಪಾಲು ಅತಿವೃಷ್ಠಿಯಿಂದ ತತ್ತರಿಸುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಭೀಕರ ಬರ ತಾಂಡವವಾಡುತ್ತಿದೆ. ಕಾವೇರಿಯಲ್ಲಿ ಲಕ್ಷಕ್ಕೂ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಹೋಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಹನಿ ಕಾವೇರಿ ನೀರಿಗಾಗಿ ಹದಿನೈದು ದಿನ ಕಾಯುವಂತಾಗಿದೆ. ಇದಲ್ಲದೇ ಹತ್ತು ಹಲವು ಜ್ವಲಂತ ಸಮಸ್ಯೆಗಳು ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಆದರೆ, ಅಧಿಕಾರಿಗಳು ಮಾತ್ರ ಸಾಲುಸಾಲು ರಜೆಯ ಮೋಜು ಅನುಭವಿಸುತ್ತಿದ್ದಾರೆ.

ಕರೆಗೆ ಸ್ಪಂದಿಸದ ಅಧಿಕಾರಿಗಳು:

ಕಷ್ಟ ಹೇಳಿಕೊಳ್ಳಲು ಜನರು ಕರೆ ಮಾಡಿದರೂ ಯಾವ ಅಧಿಕಾರಿಯೂ ಕರೆ ಸ್ವೀಕರಿಸುತ್ತಿಲ್ಲ. ಒಂದೊಮ್ಮೆ ಕರೆ ಸ್ವೀಕರಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ರಜೆಯಲ್ಲಿದ್ದೇನೆ. ಬಂದ ಬಳಿಕ ಪರಿಶೀಲಿಸುತ್ತೇನೆ ಎಂದು ಹೇಳಿ ಕರೆ ಕಟ್‌ ಮಾಡುತ್ತಿದ್ದಾರೆ. ಕಳೆದ ಶುಕ್ರವಾರ ಆರಂಭವಾದ ರಜೆ ಮೋಜು ಸೋಮವಾರದ ವರೆಗೂ ಮುಟ್ಟಿದೆ. ಇನ್ನೆರಡು ದಿನಗಳ ಕಳೆದರೆ ಮತ್ತೆ ಸ್ವಾತಂತ್ರ್ಯೋತ್ಸವದ ರಜೆ ಮತ್ತೆ ವೀಕೆಂಡ್‌ ಹೀಗಾಗಿ ಇನ್ನೊಂದು ವಾರ ಜನರ ಗೋಳು ಕೇಳೋರೆ ಇಲ್ಲ.

ಎಲ್ಲೆಲ್ಲೂ ಕಸದ ರಾಶಿ:

ರಾಮನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗದೇ ಇಡೀ ನಗರ ಗಬ್ಬು ನಾರುತ್ತಿದೆ. ಪುರಸಭೆ ಸಿಬ್ಬಂದಿ ಕಸ ಸಂಗ್ರಹಕ್ಕೆ ಬಂದು ಆಗಲೇ ಹದಿನೈದು ದಿನಗಳೇ ಕಳೆದಿವೆ. ಇದು ಕಸದ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಪ್ರಮುಖ ರಸ್ತೆಗಳಲ್ಲೆವೂ ಕಸದ ರಾಶಿಯಿಂದ ತುಂಬಿವೆ. ಎಲ್ಲೆಂದರೆಲ್ಲಿ ಕಸ ರಾಚುತ್ತಿದೆ. ನಗರಸಭೆ ಸಿಬ್ಬಂದಿ ಮಾತ್ರ ಇದಕ್ಕೂ ತನಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಹಬ್ಬಗಳಿಂದ ಹೆಚ್ಚಾದ ಸಮಸ್ಯೆ:

ಮೂರು ದಿನಗಳ ಅಂತರದಲ್ಲಿ ವರಮಹಾಲಕ್ಷ್ಮೇ ಹಾಗೂ ಬಕ್ರೀದ್‌ ಹಬ್ಬ ಆಗಮಿಸಿರುವ ಕಾರಣ ತ್ಯಾಜ್ಯ ಉತ್ಪಾದನೆ ದ್ವಿಗುಣಗೊಂಡಿದೆ. ಜತೆಗೆ ಮಳೆಗಾಲ ಆದ ಕಾರಣ ತ್ಯಾಜ್ಯವನ್ನು ಬಹುಬೇಕ ವಿಲೇವಾರಿ ಮಾಡಬೇಕು. ಇಲ್ಲವಾದರೇ, ಅದು ಕೊಳತು ಡೆಂಗೆ, ಮಲೇರಿಯಾ, ಚಿಕೂನ್‌ ಗೂನ್ಯದಂತಹ ಸಾಂಕ್ರಾಮಿಕ ಕಾಯಿಲೆ ಹರಡುವುದು ಖಚಿತ.

ಜನಪ್ರತಿನಿಧಿಗಳಿಲ್ಲದೇ ಅನಾಥ:

ಬಿಡದಿ ಪುರಸಭೆ ಹೊರತು ಪಡಿಸಿ, ಬಾಕಿ ಉಳಿದಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳು ವಿಸರ್ಜಿಸಲಾಗಿದೆ. ಪೌರಾಯುಕ್ತರೇ, ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು, ಇದರ ಉಸ್ತುವಾರಿ ಇವರೇ ವಹಿಸಿಕೊಂಡಿದ್ದಾರೆ. ಅಧಿಕಾರಿಗಳು ರಜೆಗೆ ಹೋಗಿರುವುದರಿಂದ ತಮ್ಮ ಗೋಳು ಕೇಳುವವರಿಲ್ಲದೇ ಜನರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ.

ನೀರು ಕೊಡಿ:

ರಾಮನಗರ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಮಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲಾ ಕೇಂದ್ರದಲ್ಲೇ ಕಾವೇರಿ ನೀರಿಗಾಗಿ ಜನತೆ 15ದಿನಗಳ ಕಾಲ ಕಾಯುವ ಸ್ಥಿತಿಯಲ್ಲಿದ್ದಾರೆ. ಬೋರ್‌ವೆಲ್‌ ನೀರು ಬಿಟ್ಟರೂ, ಒಂದು ಗಂಟೆಯೊಳಗೆ ನಿಲ್ಲಿಸಲಾಗುತ್ತಿದೆ. ಈ ಅವಧಿಯಲ್ಲಿ ಜನತೆ ಕನಿಷ್ಠ ಐದು ಬಿಂದಿಗೆ ನೀರು ಹಿಡಿಯಲಷ್ಟೇ ಶಕ್ತರಾಗುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಇಂದಿಗೂ ಕುಡಿಯವ ನೀರಿಗೂ ಸಮಸ್ಯೆ ಬಾದಿಸುತ್ತಿದೆ. ಅನಿವಾರ‍್ಯವಾಗಿ ಜನತೆ ದುಡ್ಡು ಕೊಟ್ಟು ಖಾಸಗಿ ಟ್ಯಾಂಕರ್‌ ನೀರು ತೆಗೆದುಕೊಳ್ಳುತ್ತಿದ್ದಾರೆ.

ಕಾಡಂಚಿನಲ್ಲಿ ಪ್ರಾಣಿ ಹಾವಳಿ:

ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕರಡಿ, ಆನೆ ಹಾಗೂ ಚಿರತೆಯ ಉಪಟಳ ಜನತೆಯನ್ನು ಹೈರಾಣಾಗಿಸಿದೆ. ಇದರ ನಡುವೆ, ಕಾಡಂಚಿಗೆ ಸೀಮಿತವಾಗಿದ್ದ ಕಾಡು ಪ್ರಾಣಿಗಳ ಹಾವಳಿ ಈಗ, ಟೌನ್‌ ವ್ಯಾಪ್ತಿಗೂ ವಿಸ್ತರಿಸಿದೆ. ಇವುಗಳ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಬೋನಿನ ಕೊರತೆ ಇದೆ. ಒಟ್ಟಿಗೆ ಎರಡು ಕಡೇ ಪ್ರಾಣಿ ಪ್ರಾತ್ಯಕ್ಷವಾದರೇ, ಒಂದು ಸ್ಥಳದಲ್ಲಿ ಇರಿಸಿರುವ ಬೋನನ್ನೇ ಅಲ್ಲಿಗೂ ಸಾಗಿಬೇಕಾದ ಅನಿವಾರ‍್ಯತೆ ಸಿಬ್ಬಂದಿಗಳದ್ದು.

ವರ್ಗಾವಣೆ:

ಜಿಲ್ಲೆಯ ಆಡಳಿತ ಯಂತ್ರ ಕುಸಿಯಲು ಸಾಲುಸಾಲು ವರ್ಗಾವಣೆ ಕಾರಣ ಎಂಬುದು ಜನರ ದೂರು. ಕಳೆದ ವಾರ ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅ ಸ್ಥಳಕ್ಕೆ ಶಿವಕುಮಾರ್‌ ಎಂಬುವವರನ್ನು ನೇಮಕ ಮಾಡಲಾಗಿತ್ತು. ಅವರು ಇನ್ನು ಅಧಿಕಾರ ವಹಿಸಿಕೊಳ್ಳದ ಕಾರಣ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಅವರಿಗೆ ಹೆಚ್ಚುವರಿಯಾಗಿ ಆ ಹುದ್ದೆ ನೀಡಲಾಗಿದೆ. ಇದರ ಜತೆಗೆ ಸಾಕಷ್ಟು ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೇ ಇಲ್ಲ. ಮತ್ತೊಂದು ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿರುವುದು ಆಡಳಿತ ಯಂತ್ರ ಕುಸಿಯಲು ಕಾರಣವಾಗಿದೆ.

-----

ಅರ್ಕಾವತಿ ನದಿ ನೀರು ಸಂಪೂರ್ಣವಾಗಿ ಖಾಲಿಯಾಗಿತ್ತು. ಹಾಗಾಗಿ ಸೋಮವಾರ ಸಂಜೆ ಮಂಚನಬೆಲೆ ಡ್ಯಾಂ ನಿಂದ 160 ಕ್ಯೂಸೆಕ್‌ ನೀರು ಬಿಡಿಸಿಕೊಂಡು ಬಂದೆವು. ನೀರು ತಲುಪಿದ್ದು ಗುರುವಾರ ಸಂಜೆ. ಈ ವೇಳೆ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ನಿವಾಸಿಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.

-ಅನಿಲ್‌ ಗೌಡ, ಎಇ, ಜಲಮಂಡಳಿ, ರಾಮನಗರ.

ಸ್ಥಳೀಯ ಸಂಸ್ಥೆ ವಿಸರ್ಜನೆ ಆದಾಗಿನಿಂದ ಯಾವುದೇ ನಗರಸಭೆ ಸಿಬ್ಬಂದಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಯುಜಿಡಿ ಪೈಪ್‌ಲೈನ್‌ ಒಡೆದು ಹೋಗಿ ನಾಲ್ಕು ದಿನವಾದರೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ತ್ಯಾಜ್ಯ ನಿರ್ವಹಣೆಯನ್ನು ಕೇಳುವಂತೆಯೇ ಇಲ್ಲ. ಏನಾದರೂ ಕೇಳಿದರೆ ಜಿಲ್ಲಾಧಿಕಾರಿ ಜತೆ ಸಭೆ ಮಾಡಿದ್ದೇವೆ ಎಂದು ಹೇಳಿ ಜಾರಿಕೊಳ್ಳುತ್ತಾರೆ.

-ನಾಗೇಶ್‌, ನಗರಸಭೆ ಮಾಜಿ ಸದಸ್ಯ, ರಾಮನಗರ.

ಕಳೆದ 15 ದಿನಗಳಿಂದ ನಗರಸಭೆ ಸಿಬ್ಬಂದಿ ವಾರ್ಡ್‌ಗಳತ್ತ ಮುಖ ಮಾಡಿಲ್ಲ. ಕಾವೇರಿ ನೀರು ಬಂದು ಎರಡು ವಾರಗಳೇ ಆಗಿದೆ. ಜನತೆಯ ಕಷ್ಟಕ್ಕೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ.

-ಸದಾಶಿವ, ನಿವಾಸಿ, ರಾಮನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ