ಆ್ಯಪ್ನಗರ

ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ವೈದ್ಯ ಪ್ರೇಮಿ

ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಪೋಷಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ವೈದ್ಯರಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ.

Vijaya Karnataka Web 3 Jul 2020, 11:17 am
ಬೆಂಗಳೂರು : ವೈದ್ಯರೊಬ್ಬರು ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅವರ ಪೋಷಕರು ಅಕ್ರಮ ಬಂಧನಲ್ಲಿಟ್ಟಿದ್ದಾರೆಂದು ಅರ್ಜಿ ಸಲ್ಲಿಸಿ, ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಘಟನೆ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ರಾಮನಗರದ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ವೈದ್ಯ ಆರ್‌. ಲೋಕನಾಥ್‌, ತಾನು ಪ್ರೀತಿಸುತ್ತಿರುವ ಯುವತಿಯನ್ನು ಪೋಷಕರು ಅಕ್ರಮ ಬಂಧನಲ್ಲಿಟ್ಟಿದ್ದಾರೆಂದು ಎಂದು ಆರೋಪಿಸಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಕುರಿತು ಸಿಜೆ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಆದರೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ಯುವತಿ ತಾನು ಪೋಷಕರ ಜತೆಗಿದ್ದು, ವೈದ್ಯರಿಂದಲೇ ತೊಂದರೆಯಾಗುತ್ತಿರುವುದಾಗಿ ದೂರಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವೈದ್ಯರಿಗೆ ಯುವತಿಯ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ
38 ವರ್ಷದ ಲೋಕನಾಥ್‌ ನೆಲಮಂಗಲದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬರುತ್ತಿದ್ದಾಗ 20 ವರ್ಷದ ಯುವತಿಯ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇತ್ತೀಚೆಗೆ ಪೋಷಕರು ಮಗಳನ್ನು ಒತ್ತಾಯಪೂರ್ವಕವಾಗಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದ ವೈದ್ಯ, ಆಕೆಯನ್ನು ಬಿಡುಗಡೆಗೊಳಿಸಲು ಕೋರಿ ಜೂ. 9ರಂದು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ಯುವತಿಯ ಪೋಷಕರ ಪರ ವಾದ ಮಂಡಿಸಿದ್ದ ವಕೀಲ ವೆಂಕಟೇಶ್‌ ದೊಡ್ಡೇರಿ, ''ಯುವತಿ ಪ್ರಾಪ್ತ ವಯಸ್ಕಳಾಗಿದ್ದಾಳೆ. ಆಕೆಯನ್ನು ಬಚ್ಚಿಡುವ ಅಗತ್ಯವಿಲ್ಲ. ಇತ್ತೀಚೆಗೆ ವೈದ್ಯ, ಯುವತಿ ಮನೆ ಬಳಿ ಹೋಗಿ ಗದ್ದಲ ಮಾಡುತ್ತಿರುವ ಆರೋಪಗಳಿವೆ. ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಸೂಚಿಸಬೇಕು'' ಎಂದು ಕೋರಿದ್ದರು. ಮನವಿ ಪುರಸ್ಕರಿಸಿರುವ ಪೀಠ, ಯುವತಿಗೆ ತೊಂದರೆ ನೀಡದಂತೆ ಆ ವೈದ್ಯನಿಗೆ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ