ಆ್ಯಪ್ನಗರ

ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ: ಸಿಐಟಿಯು ಮಹಿಳಾ ಘಟಕದ ರಾಜ್ಯಧ್ಯಕ್ಷೆ ವರಲಕ್ಷ್ಮಿ

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌.ಕೆ.ಜಿ. ಯು.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು ಎಂದು ಸಿಐಟಿಯು ಮಹಿಳಾ ಘಟಕ ಹಾಗೂ ಅಂಗನವಾಡಿ ನೌಕರರ ಸಂಘದ ರಾಜ್ಯಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದರು.

Vijaya Karnataka 20 Dec 2018, 5:00 am
ರಾಮನಗರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌.ಕೆ.ಜಿ. ಯು.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು ಎಂದು ಸಿಐಟಿಯು ಮಹಿಳಾ ಘಟಕ ಹಾಗೂ ಅಂಗನವಾಡಿ ನೌಕರರ ಸಂಘದ ರಾಜ್ಯಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದರು.
Vijaya Karnataka Web lkg ukg begin in anganwadi centers cit womens unit presidential varalakshmi
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ: ಸಿಐಟಿಯು ಮಹಿಳಾ ಘಟಕದ ರಾಜ್ಯಧ್ಯಕ್ಷೆ ವರಲಕ್ಷ್ಮಿ


ನಗರದ ಗುರುಭವನದಲ್ಲಿ ಬುಧವಾರ ಅಂಗನವಾಡಿ ನೌಕರರ 6ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

''ಸದೃಢ ಪ್ರಜಾಪ್ರಭುತ್ವ ಕಟ್ಟುವಲ್ಲಿ ಅಂಗನವಾಡಿಗಳು ಸಹಕಾರಿಯಾಗಿವೆ. ಯಾವುದೆ ಜಾತಿ, ಧರ್ಮಗಳ ಆಧಾರದ ಮೇಲೆ ತಾರತಮ್ಯ ಮಾಡದೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತ ಜಾತ್ಯತೀತ ಸಮಾಜ ಕಟ್ಟಲಾಗುತ್ತಿದೆ. ಇಲ್ಲಿ ಅಂಗನವಾಡಿಗಳ ಜತೆಗೆ ಎಲ್‌.ಕೆ.ಜಿ. ಯು.ಕೆ.ಜಿ. ತರಗತಿಗಳನ್ನು ಆರಂಭಿಸಿ ಬಡ ಪೋಷಕರ ನೆರವಿಗೆ ಸರಕಾರಗಳು ಧಾವಿಸಬೇಕು,'' ಎಂದರು.

''ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ, ಶಿಕ್ಷ ಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸುವುದು ಸರಿಯಲ್ಲ. ಇದರಿಂದ ಮುಂದೆ ಭಾರಿ ಅನಾಹುತ ಉಂಟಾಗುತ್ತದೆ. ಸದೃಢ ಭಾರತ ದೇಶ ಕಟ್ಟಲು ಸಾಧ್ಯವಾಗುವುದಿಲ್ಲ,'' ಎಂದು ಎಚ್ಚರಿಕೆ ನೀಡಿದರು.

''ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ 10 ಕಾರ್ಮಿಕ ಸಂಘಟನೆಗಳ ಜತೆಗೂಡಿ ಸಿಐಟಿಯು ನೇತೃತ್ವದಲ್ಲಿ ಮುಂಬರುವ ಜನವರಿ 8 ಮತ್ತು 9 ರಂದು ರಾಜ್ಯದ ಎಲ್ಲೆಡೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದು ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು,'' ಎಂದು ಕಾರ್ಯಕರ್ತೆಯರಿಗೆ ಕರೆ ನೀಡಿದರು.

''ತೆರಿಗೆ ಸಂಗ್ರಹಕ್ಕಾಗಿ ದೇಶದಾದ್ಯಂತ ಏಕರೂಪದ ಜಿಎಸ್‌ಟಿ ಜಾರಿಗೆ ತರಲಾಗಿದೆ. ಶ್ರೀಮಂತರಿಗೆ ಸರಿಸಮನಾಗಿ ಬಡತನದಲ್ಲಿ ಜೀವನ ನಡೆಸುವವರು, ತಮ್ಮ ದಿನನಿತ್ಯದ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದಾಗಲೂ ತೆರಿಗೆ ಕಟ್ಟುತ್ತಾರೆ. ತೆರಿಗೆ ಕಟ್ಟಿಸಿಕೊಳ್ಳುವಲ್ಲಿ ಭೇದ-ಭಾವ ಮಾಡದ ಸರಕಾರ ಆದರೆ ತೆರಿಗೆಯ ಹಣವನ್ನು ಖರ್ಚು ಮಾಡುವಾಗ ಮಾತ್ರ ತಾರತಮ್ಯ ಮಾಡುತ್ತಿದೆ,'' ಎಂದು ದೂರಿದರು.

''ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವೇತನ ಹೆಚ್ಚಿಸಬೇಕು. ಸ್ವಾಭಿಮಾನದಿಂದ ಜೀವನ ನಡೆಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು 40 ವರ್ಷ ಸೇವೆ ಸಲ್ಲಿಸಿದರೂ ಸಹ ನಿವೃತ್ತಿ ಸಮಯದಲ್ಲಿ ಅವರ ಜೀವನಕ್ಕೆ ಭದ್ರತೆ ದೊರಕುತ್ತಿಲ್ಲ,'' ಎಂದರು.

''ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಲು ಹಾಗೂ ಪ್ರತಿಮೆಗಳನ್ನು ಕಟ್ಟಲು ಸರಕಾರಗಳ ಬಳಿ ಹಣ ಇದೆ. ಆದರೆ ದೇಶದ ಸದೃಢ ಮಾನವ ಸಂಪನ್ಮೂಲ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತಿರುವ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚು ಮಾಡಲು, ನಿವೃತ್ತಿ ವೇತನ ನೀಡಲು ಸರಕಾರದ ಬಳಿ ಹಣ ಇಲ್ಲ ಎಂದು ಹೇಳುವುದು ಸರಿಯಲ್ಲ,'' ಎಂದರು.

ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಅಂಗನವಾಡಿ ನೌಕರರ ತಾಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಜಯಲಕ್ಷ ್ಮಮ್ಮ, ಖಜಾಂಚಿ ಜಯಶೀಲ, ಪದಾಧಿಕಾರಿಗಳಾದ ಸಾವಿತ್ರಿ, ಭಾಗ್ಯಮ್ಮ, ಚಂದ್ರಿಕಾ, ಭಾಗ್ಯಮ್ಮ, ಲೀಲಾ, ಕಲಾ, ಶಿವಮ್ಮ, ನಾಗರತ್ನ, ಹೇಮಾ, ಸುವರ್ಣ, ಪಾರ್ವತಮ್ಮ, ಹನುಮಕ್ಕ, ನಾಗಮ್ಮ, ಯಶೋಧ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ