ಆ್ಯಪ್ನಗರ

ಪಶು ಆಹಾರ ದರ ಏರಿಕೆಗೆ ವಿರೋಧ: ಜಯ ಕರ್ನಾಟಕ ಪ್ರತಿಭಟನೆ

ಕೆಎಂಎಫ್‌(ನಂದಿನಿ ಗೋಲ್ಡ್‌) ಪಶು ಆಹಾರ ದರ ಏರಿಕೆಯನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಗಳವಾರ ನಗರದ ಕೆಂಪೇಗೌಡ ವೃತ್ತದ ಬಳಿಯ ...

Vijaya Karnataka 9 Jan 2019, 5:00 am
ರಾಮನಗರ: ಕೆಎಂಎಫ್‌(ನಂದಿನಿ ಗೋಲ್ಡ್‌) ಪಶು ಆಹಾರ ದರ ಏರಿಕೆಯನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಗಳವಾರ ನಗರದ ಕೆಂಪೇಗೌಡ ವೃತ್ತದ ಬಳಿಯ ಬಮೂಲ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web opposition to animal husbandry cuts
ಪಶು ಆಹಾರ ದರ ಏರಿಕೆಗೆ ವಿರೋಧ: ಜಯ ಕರ್ನಾಟಕ ಪ್ರತಿಭಟನೆ


ಹಾಲಿನ ದರಕ್ಕಿಂತಲೂ ಪಶು ಆಹಾರ ದರ ದಿನಗಳೆದಂತೆ ದುಬಾರಿ ಆಗುತ್ತಿದೆ. ಬರಗಾಲದಲ್ಲಿ ಗರಿಕೆ ಹುಲ್ಲಿನಂತೆ ಬದಕಲೂ ಆಗದೆ ಅತ್ತ ಸಾಯಲೂ ಆಗದೆ ಹೈನುಗಾರರು ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಗಾಯದ ಮೇಲೆ ಕೆಎಂಎಫ್‌ ಬರೆ ಎಳೆಯುತ್ತಿದೆ. ಹಾಲು ಉತ್ಪಾದಕರಿಗೆ ಹಾಲು ಮಹಾಮಂಡಳಿ ಕೊಡುವ ದರ 1 ಲೀಟರ್‌ಗೆ 24 ರೂ. ಈ ಹಾಲನ್ನು ಗ್ರಾಹಕರಿಗೆ 40 ರೂ.ಗೆ ಅಂದರೆ 16 ರೂ. ಲಾಭಕ್ಕೆ ಮಾರಾಟ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಪ್ರಮಾಣದಲ್ಲಿ ಲಾಭ ಪಡೆಯುತ್ತಿದ್ದರೂ, ಹೈನುಗಾರರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಹೈನುಗಾರರ ಪಾಲಿಕೆ ಕೆಎಂಎಫ್‌ ಇಂದು ಇದ್ದೂ ಇಲ್ಲದಂತಾಗಿದೆ. ಈ ಮೊದಲು ಪಶು ಆಹಾರ ದರ ಒಂದು ಚೀಲಕ್ಕೆ 800 ರೂ. ಇತ್ತು. ನಂತರ ಇದನ್ನು 882 ರೂ.,ಗೆ ಏರಿಕೆ ಮಾಡಲಾಗಿದೆ. ಇದೀಗ 957 ರೂ.,ಗೆ ನಿಗದಿ ಮಾಡಿದ್ದಾರೆ. ಕೆಎಂಎಫ್‌ ಒಮ್ಮೆಗೆ 70 ರೂ.ಗಳನ್ನು ಏರಿಕೆ ಮಾಡಿರುವುದು ಹೈನುಗಾರರಿಗೆ ಭಾರಿ ಹೊರೆಯಾಗಿದೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಆಗಿದೆ. ಬರಗಾಲದಲ್ಲಿ ರಾಸುಗಳ ಜೀವ ಉಳಿಸಿಕೊಳ್ಳಲು ಮೇವು ಕೊಟ್ಟರೆ ಸಾಕು ಎನ್ನುವಷ್ಟರಲ್ಲಿ ಕೆಎಂಎಫ್‌ ಇಂತಹ ಅವೈಜ್ಞಾನಿಕ ನಿರ್ಧಾರ ತೆಗೆದುಕೊಂಡಿದೆ. ಕೂಡಲೇ ಪಶು ಆಹಾರ ದರವನ್ನು ಕಡಿತ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೂಡಲೇ ಪಶು ಆಹಾರ ದರವನ್ನು ಕಡಿಮೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಲೇಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದರು. ನಂತರ ಬಮೂಲ್‌ ಎಂ.ಡಿ ಶಿವಶಂಕರ್‌ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ರವಿ, ತಾಲೂಕು ಅಧ್ಯಕ್ಷ ಅರುಣ್‌ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಜಿ.ಕುಮಾರ್‌, ಪದಾಧಿಕಾರಿಗಳಾದ ಮಧುಸೂದನ್‌, ಪ್ರಕಾಶ್‌, ಪ್ರಶಾಂತ್‌, ವಿಜಯ್‌ ಕುಮಾರ್‌, ಅಜಯ್‌ ಇತರರಿದ್ದರು.

ಬೇಡಿಕೆಗಳೇನು

ಕೆಎಂಎಫ್‌ ಮತ್ತು ಬಮೂಲ್‌ ಪಶು ಆಹಾರ ಬೆಲೆಯನ್ನು ಕೂಡಲೇ ಇಳಿಸಬೇಕು. ಹೈನುಗಾರರಿಗೆ ನೀಡುತ್ತಿರುವ ಹಾಲಿನ ದರವನ್ನು ಹೆಚ್ಚಳ ಮಾಡಬೇಕು. ನಿಗದಿತ ಸಮಯದಲ್ಲಿ ಪಶು ಆಹಾರ ರೈತರಿಗೆ ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು. ಪೋತ್ಸಾಹಧನವನ್ನು ಶೀಘ್ರ ಪಾವತಿ ಮಾಡಬೇಕು. ಹಾಲು ಸರಬರಾಜಿಗೆ ತಕ್ಕಂತೆ ಉಪ ಉತ್ಪನ್ನಗಳನ್ನು ತಯಾರಿಸಿ, ಅವುಗಳಿಗೆ ಮಾರುಕಟ್ಟೆ ವಿಸ್ತರಿಸಬೇಕು. ಬೇರೆ ರಾಜ್ಯಗಳಿಂದ ಬರುವ ಹಾಲನ್ನು ನಿಷೇಧಿಸಬೇಕು. ನಂದಿನ ಉತ್ಪನ್ನಗಳಿಗೆ ಹೆಚ್ಚು ಪ್ರಚಾರ ನೀಡಬೇಕು. ಹಾಲು ಉತ್ಪಾದಕರಿಗೆ ನಂದಿನಿ ತುಪ್ಪವನ್ನು ಉಚಿತವಾಗಿ ನೀಡಬೇಕು. ಡೇರಿಗಳಲ್ಲಿ ಹಾಲು ಸ್ವೀಕರಿಸುವ ಸಮಯವನ್ನು ಹೆಚ್ಚಳ ಮಾಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ