ಆ್ಯಪ್ನಗರ

ಫ್ಲೆಕ್ಸ್‌ ಬ್ಯಾನರ್‌ಗಳಿಗೆ ರಾಜಕೀಯ ಶ್ರೀರಕ್ಷೆ !

ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ ಜಿಲ್ಲೆಯಲ್ಲಿದ್ದು, ಫ್ಲೆಕ್ಸ್‌-ಬ್ಯಾನರ್‌ಗಳ ಹಾವಳಿ ಜನಪ್ರತಿನಿಧಿಗಳಿಂದಲೇ ಅವ್ಯಾಹತವಾಗಿ ಉಲ್ಲಂಘನೆಯಾಗುತ್ತಿದೆ..!

Vijaya Karnataka 20 Jan 2019, 5:00 am
ರಾಮನಗರ: ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ ಜಿಲ್ಲೆಯಲ್ಲಿದ್ದು, ಫ್ಲೆಕ್ಸ್‌-ಬ್ಯಾನರ್‌ಗಳ ಹಾವಳಿ ಜನಪ್ರತಿನಿಧಿಗಳಿಂದಲೇ ಅವ್ಯಾಹತವಾಗಿ ಉಲ್ಲಂಘನೆಯಾಗುತ್ತಿದೆ..!
Vijaya Karnataka Web political sacrifice for flex banners
ಫ್ಲೆಕ್ಸ್‌ ಬ್ಯಾನರ್‌ಗಳಿಗೆ ರಾಜಕೀಯ ಶ್ರೀರಕ್ಷೆ !


ಹೌದು, ಜನರಿಗೆ ಅರಿವು ಮೂಡಿಸಬೇಕಾದ ನಗರಸಭೆಯ ಅಧ್ಯಕ್ಷ ರು, ಸದಸ್ಯರ ಚಿತ್ರಗಳೂ ಇಂತಹ ಫ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿದ್ದು, ಸಚಿವರ ಸ್ವಾಗತ, ಅಧ್ಯಕ್ಷ ರು, ಸದಸ್ಯರ ಹುಟ್ಟುಹಬ್ಬದ ಶುಭಾಶಯಗಳ ಫಲಕಗಳು ವಿಪರೀತವಾಗಿದೆ. ಕೆಲವು ಕಡೆ ಬೀದಿ ದೀಪಗಳ ಬೆಳಕಿಗೆ ಅಡ್ಡಲಾಗಿ ಇಂತಹ ಫಲಕಗಳನ್ನು ಕಟ್ಟಲಾಗಿದೆ. ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳೇ ಹೆಚ್ಚಾಗಿದೆ.

ಶಾಸಕರು, ಸಚಿವರು, ಸಂಸದರು ಜಿಲ್ಲೆಗೆ ಬರುತ್ತಾರೆ. ಕಾರ‍್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಎಂದಾಕ್ಷಣ ಇಡೀ ಜಿಲ್ಲೆಯಲ್ಲಿ ಫ್ಲೆಕ್ಸ್‌-ಬ್ಯಾನರ್‌ಗಳ ಹಾವಳಿ ಮೀತಿ ಮಿರುತ್ತದೆ. ಇನ್ನು ಮುಖ್ಯಮಂತ್ರಿಗಳೇನಾದರೂ, ಕಾರ‍್ಯಕ್ರಮಗಳಲ್ಲಿ ಭಾಗಿಯಾದರೆ, ಇಡೀ ರಸ್ತೆಗಳೇ ಶುಭಾಶಯ ಕೋರುವ ಬ್ಯಾನರ್‌ಗಳಿಂದ ತುಂಬಿರುತ್ತದೆ.

ನಗರಗಳ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ಗಳ ಹಾವಳಿ ಮಿತಿಮೀರಿದೆ. ಅದರಲ್ಲೂ ಸಚಿವರು, ಶಾಸಕರಿಗೆ ಶುಭಾಶಯ ಕೋರುವ ಆಳೆತ್ತರದ ಕಟೌಟುಗಳನ್ನು ಪದೇಪದೆ ಹಾಕಲಾಗುತ್ತದೆ. ಅವಧಿ ಮುಗಿದ ನಂತರವೂ ಹಾಗೆಯೇ ನಿಂತಿರುತ್ತವೆ. ಇದರಿಂದಾಗಿ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ ಜತೆಗೆ ಜಾಹೀರಾತು ಆದಾಯಕ್ಕೂ ಕತ್ತರಿ ಬೀಳುತ್ತಿದೆ.

ಆಡಳಿತ ಪಕ್ಷ ದ್ದೇ ಅಧಿಕ: ಅಕ್ರಮ ಫ್ಲೆಕ್ಸ್‌ಗಳು, ಬ್ಯಾನರ್‌ಗಳನ್ನು ಹಾಕುವಲ್ಲಿ ರಾಜಕೀಯ ಪಕ್ಷ ಗಳ ಕಾರ್ಯಕರ್ತರು ಮುಂದಿದ್ದಾರೆ. ಅದರಲ್ಲೂ ಆಡಳಿತ ಪಕ್ಷ ದ ನಾಯಕರ ಭಾವಚಿತ್ರಗಳನ್ನು ಹೊತ್ತ ನೂರಾರು ಫಲಕಗಳು ನಗರದ ತುಂಬೆಲ್ಲ ಹರಡಿಕೊಂಡಿವೆ. ಪ್ರತಿಪಕ್ಷ ದ ಕಾರ್ಯಕರ್ತರು ಹಾಕಿರುವ ಫÜಲಕಗಳೂ ಸಾಕಷ್ಟಿವೆ.

ನಿಯಮಾವಳಿ ಇಲ್ಲ: ಅಕ್ರಮ ಜಾಹೀರಾತು ಫಲಕಗಳನ್ನು ಹಾಕುವವರ ವಿರುದ್ಧ ಕ್ರಮ ಜರುಗಿಸುವ ಇಲ್ಲವೇ ದಂಡ ವಿಧಿಸುವ ಕುರಿತು ನಗರಸಭೆಗೆ ಅಧಿಕಾರ ಇಲ್ಲ. ಈ ಕುರಿತು ನಿಯಮಾವಳಿ ರಚನೆಯು ಇನ್ನೂ ಪ್ರಸ್ತಾವದ ಹಂತದಲ್ಲಿಯೇ ಉಳಿದಿರುವುದು ಅಕ್ರಮ ಬ್ಯಾನರ್‌ ಹಾಕುವವರಿಗೆ ವರದಾನವಾಗಿದೆ. ಕೆಎಂಸಿ ಕಾಯ್ದೆಯ ಪ್ರಕಾರ ಜಾಹೀರಾತುಗಳಿಗೆ ಯಾವ ದರ ವಿಧಿಸಬಹುದು. ಅದರ ಸಂಗ್ರಹದ ಕುರಿತು ಅಷ್ಟೇ ನಿಯಮಗಳಿವೆ. ಆದರೆ ಫ್ಲೆಕ್ಸ್‌ಗಳ ಹಾವಳಿ ನಿಯಂತ್ರಣಕ್ಕೆ ಸ್ಪಷ್ಟ ನಿರ್ದೇಶನ ಇಲ್ಲ. ದಂಡ ವಿಧಿಸಲು ಅಥವಾ ಪ್ರಕರಣ ದಾಖಲಿಸಲು ಈಗ ಇರುವ ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕುರಿತು ನಿಯಮ ರೂಪಿಸುವ ಪ್ರಸ್ತಾಪವನ್ನು ಕೌನ್ಸಿಲ್‌ ಮುಂದೆ ಇಡಲಾಗಿದ್ದು, ಇನ್ನೂ ಚರ್ಚೆಗೆ ಚಾಲನೆಯೇ ದೊರೆತಿಲ್ಲ ಎಂಬುದು ವಿರ್ಪಯಾಸ.

ಅಕ್ರಮ ಫಲಕಗಳ ತೆರವು ಕಾರ್ಯಾಚರಣೆಯ ನಂತರ ಅವುಗಳ ನಿಯಂತ್ರಣಕ್ಕೆ ಬೈಲಾ ರಚಿಸುವ ಕಾರ್ಯಕ್ಕೆ ಚಾಲನೆ ದೊರೆಯುವ ನಿರೀಕ್ಷೆ ಈ ವರೆಗೂ ನನಸಾಗಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ತುರ್ತು ಸಭೆ ಕರೆದು ಚರ್ಚಿಸಲೂ ನಗರಸಭೆಯು ವರ್ಷಗಳಿಂದ ಯೋಚಿಸುತ್ತಲೇ ಇದೆ. ಬ್ಯಾನರ್‌ಗಳಿಗೆ ಯಾವ ದರ ವಿಧಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಯಾವ ಪ್ರಮಾಣದಲ್ಲಿ ದಂಡ ಹಾಕಬೇಕು ಎಂಬುದರ ಬಗ್ಗೆ ಈ ವರೆಗೂ ಇತ್ಯರ್ಥಗೊಳ್ಳದಿರುವುದು ನುಂಗಣ್ಣರಿಗೆ ವರವಾಗಿ ಪರಿಣಮಿಸಿದೆ.

ಕೆಎಸ್‌ಆರ್‌ಟಿಸಿಯನ್ನು ಬಿಟ್ಟಿಲ್ಲ..! : ರಸ್ತೆಗಳ ಬದಿ, ಮಧ್ಯದಲ್ಲಿ ಮಾತ್ರವಲ್ಲ, ಇದೀಗ ಫ್ಲೆಕ್ಸ್‌ಗಳ ಹಾವಳಿ ಕೆಎಸ್‌ಆರ್‌ಟಿಸಿಯನ್ನು ಬಿಟ್ಟಿಲ್ಲ. ಮುಖ್ಯಮಂತ್ರಿಗಳ ಮಗ ನಿಖಿಲ್‌ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಜಾಹೀರಾತು ಫ್ಲೆಕ್ಸ್‌, ಪೋಸ್ಟರ್‌ಗಳು ರಸ್ತೆಗಳಿಗಿಂತ ಹೆಚ್ಚಾಗಿ ಜಿಲ್ಲೆಯಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೇ ಜೋರಾಗಿದೆ. ಈ ಬಗ್ಗೆ ಅಧಿಕಾರಿಗಳು ಸಹ ಮೌನ ವಹಿಸಿರುವುದು ರಾಜಕೀಯ ಹಿಡಿತಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ.

ನಾಲ್ಕೇ ದಿನಕ್ಕೆ ಸೀಮಿತ: ಬ್ಯಾನರ್‌ಗಳ ಹಾವಳಿ ಕುರಿತು ಈ ಹಿಂದೆ, ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವರು ಉಪ ಲೋಕಾಯುಕ್ತರಲ್ಲಿ ದೂರು ದಾಖಲಿಸಿದ್ದರು. ಉಪ ಲೋಕಾಯುಕ್ತರು ಚನ್ನಪಟ್ಟಣ ಹಾಗೂ ರಾಮನಗರ ನಗರಸಭೆ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ನೆಪ ಮಾತ್ರಕ್ಕೆ ತೆರವು ಕಾರ್ಯಾಚರಣೆ ನಡೆಸಿದ್ದರು.

ಅನುಮತಿ ಇಲ್ಲದೆ ಕಟೌಟ್‌ಗಳನ್ನು ಹಾಕಿದ್ದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದ ಆರೋಪದ ಮೇಲೆ ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಮಾಂಜನೇಯ ಅವರಿಗೆ ನಗರಸಭೆಯು ನೋಟಿಸ್‌ ಜಾರಿ ಮಾಡಿತ್ತು. ಆದರೆ, ನೋಟಿಸ್‌ ಬಳಿಕ ವಿಚಾರಣೆ ನಡೆಸಿರುವ ಬಗ್ಗೆ ವರದಿಯೇ ಆಗಿಲ್ಲ. ಹೀಗೆ ರಾಜಕೀಯ ಮುಖಂಡರು, ದಂಡಾಸ್ತ್ರಗಳಿಂದ ಪರಾಗುತ್ತಿದ್ದಾರೆ. ಹೀಗಾಗಿ ನಗರಸಭೆಯು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಲ್ಲಿ ನಿರತವಾಗಿದೆ.

ಯಾರೇ ಆಗಲಿ ಜಾಹೀರಾತು ಫಲಕಗಳನ್ನು ಹಾಕುವ ಮುನ್ನ ನಗರಸಭೆಯಿಂದ ಪೂರ್ವಾನುಮತಿ ಪಡೆಯಬೇಕು. ಇದಲ್ಲವಾದಲ್ಲಿ ಅಂತಹ ಜಾಹೀರಾತುಗಳನ್ನು ಅಕ್ರಮ ಎಂದು ಪರಿಗಣಿಸಲಾಗುವುದು. ನಗರದ ವ್ಯಾಪ್ತಿಯಲ್ಲಿಯೂ ಅಕ್ರಮ ಬ್ಯಾನರ್‌ ಅಳವಡಿಕೆಗಳ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ಈಗಾಗಲೇ ಸಾಕಷ್ಟು ಅಕ್ರಮ ಫಲಕಗಳನ್ನು ತೆಗೆಯಲಾಗಿದೆ. ಜಾಹೀರಾತು ಫಲಕಗಳನ್ನು ಅಳವಡಿಸುವವರು ಅನುಮತಿ ಪಡೆದು, ಶುಲ್ಕ ಪಡೆಯಬೇಕು.

-ಶುಭಾ, ಆಯುಕ್ತೆ ನಗರಸಭೆ, ರಾಮನಗರ

ನಗರಸಭೆಯು ನೆಪಮಾತ್ರವಕ್ಕೆ ಮಾತ್ರ ಆಗಾಗ್ಗೆ ಕಾರ‍್ಯಚರಣೆ ನಡೆಸುತ್ತಿದೆ. ಸಾರ್ವಜನಿಕರ ಮೇಲೆ ಮಾತ್ರವೇ ಪ್ರತಾಪ ತೋರುತ್ತಿದೆ. ನಗರದಲ್ಲಿ ಅನುಮತಿ ಇಲ್ಲದೇ, ರಾಜಕೀಯ ಮುಖಂಡರು ಫ್ಲೆಕ್ಸ್‌ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆಗೆ ಆಗುತ್ತಿಲ್ಲ.

-ಚಂದ್ರಶೇಖರ್‌, ಸಾರ್ವಜನಿಕ ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ