ಆ್ಯಪ್ನಗರ

ಮಕರ ಸಂಕ್ರಾಂತಿಗೆ ಸಿದ್ಧತೆ: ಸಿಲ್ಕ್‌ ಸಿಟಿಯಲ್ಲಿ ಖರೀದಿ ಜೋರು

ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡು ಎಳ್ಳು, ಬೆಲ್ಲ ಹಂಚಿ, ಒಳ್ಳೆಯ ಮಾತನಾಡುವ ಮೂಲಕ ಸೋದರತ್ವ ಸಂದೇಶ ಸಾರುವ ವರ್ಷದ ಮೊದಲ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ-ಸಡಗರ ನಗರದ ಎಲ್ಲೆಡೆ ಮನೆ ಮಾಡಿದೆ.

Vijaya Karnataka 15 Jan 2019, 5:00 am
ರಾಮನಗರ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡು ಎಳ್ಳು, ಬೆಲ್ಲ ಹಂಚಿ, ಒಳ್ಳೆಯ ಮಾತನಾಡುವ ಮೂಲಕ ಸೋದರತ್ವ ಸಂದೇಶ ಸಾರುವ ವರ್ಷದ ಮೊದಲ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ-ಸಡಗರ ನಗರದ ಎಲ್ಲೆಡೆ ಮನೆ ಮಾಡಿದೆ.
Vijaya Karnataka Web preparing for makar sankranti buy lick in silk city
ಮಕರ ಸಂಕ್ರಾಂತಿಗೆ ಸಿದ್ಧತೆ: ಸಿಲ್ಕ್‌ ಸಿಟಿಯಲ್ಲಿ ಖರೀದಿ ಜೋರು


ಬೆಲೆ ಏರಿಕೆಯ ನಡುವೆಯೂ ಹಬ್ಬಕ್ಕೆ ಎಳ್ಳು-ಬೆಲ್ಲ, ಕೊಬ್ಬರಿ, ಹೂವು-ಹಣ್ಣು, ಕಬ್ಬಿನ ಜಲ್ಲೆ ಸೇರಿದಂತೆ ಹಬ್ಬದ ಆಚರಣೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಅಂಗಡಿ, ಮಾರುಕಟ್ಟೆಗಳತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.

ನಗರದ ಬಹುತೇಕ ಮಾರುಕಟ್ಟೆ, ಪ್ರಮುಖ ರಸ್ತೆ, ಜಂಕ್ಷ ನ್‌ಗಳಲ್ಲಿ ಜನರ ದಂಡು ಹೆಚ್ಚಿದ್ದು, ಖರೀದಿ ಭರಾಟೆ ಜೋರಾಗಿದೆ. ಗ್ರಾಹಕರ ಬೇಡಿಕೆ ಅರಿತ ವ್ಯಾಪಾರಿಗಳು ಅದಕ್ಕನುಗುಣವಾಗಿ 10 ದಿನಕ್ಕಿಂತ ಮುಂಚಿತವಾಗಿಯೇ ಅಂಗಡಿ, ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ತಮ್ಮ ವ್ಯಾಪಾರ-ವಹಿವಾಟು ಪ್ರಾರಂಭಿಸಿದ್ದರು.

ಭಾರಿ ವ್ಯಾಪಾರ: ಭಾನುವಾರ ಮತ್ತು ಸೋಮವಾರ ಮಟಮಟ ಮಧ್ಯಾಹ್ನ ಮಾತ್ರ ವ್ಯಾಪಾರಿಗಳಿಗೆ ಕೊಂಚ ವಿಶ್ರಾಂತಿ ದೊರೆಯಿತು. ಸಂಜೆಯಾಗುತ್ತಿದ್ದಂತೆ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಸಂಕ್ರಾಂತಿ ಹಬ್ಬಕ್ಕೆ ಸಾಥ್‌ ನೀಡುವಂತೆ ಎಲ್ಲೆಡೆ ಸೀಸನ್‌ ಸೇಲ್‌ನ ಮಹಾಪೂರ. ರಸ್ತೆಬದಿ ಅಂಗಡಿಗಳಿಂದ ಹಿಡಿದು ಚಿಕ್ಕ ಪುಟ್ಟ ಅಂಗಡಿಗಳಲ್ಲೂ ವರ್ಷಾರಂಭವನ್ನು ಡಿಫರೆಂಟ್‌ ಆಗಿ ಸ್ಟಾರ್ಟ್‌ ಮಾಡುವ ಹುಮ್ಮಸ್ಸು ಕಾಣುತಿತ್ತು. ಇದರೊಂದಿಗೆ ಎಲ್ಲ ಅಂಗಡಿಗಳಲ್ಲಿ ಲಭ್ಯವಿರುವ ಇನ್‌ಸ್ಟಂಟ್‌ ಎಳ್ಳು-ಬೆಲ್ಲವು ಮಹಿಳೆಯರಿಗೆ ಸಂಕ್ರಾಂತಿ ಎಳ್ಳು ತಯಾರಿಸುವ ಕೆಲಸದ ಹೊರೆಯನ್ನು ಕಡಿಮೆ ಮಾಡಿದೆ.

ವೀಕೆಂಡ್‌ ರಜೆ ನಂತರ ಸಂಕ್ರಾಂತಿ: ಈ ಬಾರಿ ಸಂಕ್ರಾಂತಿ ವೀಕೆಂಡ್‌ ರಜೆ ನಂತರ ಆಗಮಿಸಿರುವುದು ಸಾಕಷ್ಟು ಜನರಿಗೆ ಸಂತಸ ತಂದಿದೆ. ಮಂಗಳವಾರದ ಸಂಕ್ರಾಂತಿಯ ಜತೆ ಜತೆಗೆ ಶನಿವಾರ ಹಾಗೂ ಭಾನುವಾರದ ರಜೆ ಸಿಕ್ಕಿರುವುದು ಹಬ್ಬದ ಆಚರಣೆಗೆ ಕೊಂಚ ಸಮಯ ನೀಡಿದಂತಿದೆ.

ಇನ್‌ಸ್ಟಂಟ್‌ ಎಳ್ಳು-ಬೆಲ್ಲ: ಸವಿರುಚಿಯ ಸಿದ್ದ ತಿನಿಸುಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಕೇವಲ ಹಬ್ಬದೂಟ ಮಾತ್ರವಲ್ಲ, ಬಗೆಬಗೆಯ ಕಲರ್‌ಫುಲ್‌ ಸಕ್ಕರೆ ಅಚ್ಚು, ಎಳ್ಳು-ಬೆಲ್ಲ ಮಿಕ್ಸ್‌ ಅಂಗಡಿಗಳಲ್ಲಿ ರಿಟೇಲ್‌ ಶಾಪ್‌ಗಳಲ್ಲಿ ದೊರೆಯುತ್ತಿವೆ. ಇನ್ನು ಅರ್ಗಾನಿಕ್‌, ಹೋಮ್‌ಮೇಡ್‌ ಟ್ಯಾಗ್‌ಲೈನ್‌ಗಳಲ್ಲೂ ಇವು ದೊರೆಯುತ್ತಿವೆ.

ವ್ಯಾಪಾರ ವಹಿವಾಟು ಜೋರು: ಹಬ್ಬ ಹಬ್ಬಕ್ಕೂ ಹೊಸ ಉಡುಗೆ-ತೊಡುಗೆ ಅಥವಾ ಇನ್ಯಾವುದೇ ವಸ್ತುಗಳನ್ನು ಕೊಳ್ಳುವವರಿಗೆ ಇದು ಸಕಾಲ. ಯಾಕೆಂದರೆ ಸೀಸನ್‌ ಸೇಲ್‌ ಎಲ್ಲೆಡೆ ನಡೆಯುತ್ತಿದೆ. ಡಿಸೈನರ್‌ವೇರ್‌ಗಳಿಂದ ಹಿಡಿದು, ರೇಷನ್‌, ಎಲೆಕ್ಟ್ರಾನಿಕ್‌ ಐಟಂಗಳ ಮೇಲೂ ರಿಯಾಯಿತಿ ಹಾಗೂ ವಿನಾಯಿತಿ ದೊರೆಯುತ್ತಿದೆ. ಹಾಗಾಗಿ, ಶಾಪಿಂಗ್‌ ಮಾಡಲು ಇದು ಸಕಾಲ ಎಂದು ಜನರು ಇತರೆ ಅಂಗಡಿಗಳಿಗೂ ಲಗ್ಗೆ ಇಟ್ಟಿದ್ದಾರೆ.

ಬೆಲೆ ಏರಿಕೆ ಬಿಸಿ: ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಡಲೆಕಾಯಿ 50-80, ಗೆಣಸು 40-50, ಎಳ್ಳು 200-300 ರೂ.ಗೆ ಮಾರಾಟವಾಗುತ್ತಿದೆ. ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಈ ವರ್ಷ ಸಂಕ್ರಾಂತಿಗೆ ಬೇಕಾಗಿರುವ ಪ್ರಮುಖ ಬೆಳೆಗಳಾದ ಅವರೆ, ಸೇಂಗಾ ಮತ್ತು ಗೆಣಸು ತೀವ್ರ ದುಬಾರಿಯಾಗಿವೆ.

ಗಗನಕ್ಕೇರಿದ ಹೂವಿನ ಬೆಲೆ: ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಬಹಳ ಹೆಚ್ಚಿದ್ದು, ಒಂದು ಮಾರು ಹೂವಿಗೆ 80 ರೂ. ಇದೆ. ಕನಕಾಂಬರ, ಮಲ್ಲಿಗೆ, ಮಲ್ಲೆ, ಸೇವಂತಿಗೆ ಸೇರಿದಂತೆ ವಿವಿಧ ಹೂವಿನ ಬೆಲೆಗಳು ದುಬಾರಿಯಾಗಿವೆ. ಹಣ್ಣುಗಳ ಬೆಲೆಯೂ ತೀವ್ರವಾಗಿತ್ತು. ಬಾಳೆಹಣ್ಣು 60 ರಿಂದ 70 ರೂ. ಕಬ್ಬು ಒಂದು ಜತೆಗೆ 50-80 ರೂ. ಹೀಗೆ ಎಲ್ಲಾ ಹಣ್ಣುಗಳ ಬೆಲೆಗಳು ದುಬಾರಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ