ಆ್ಯಪ್ನಗರ

‘ಚುನಾವಣೆ’ಯ ಕಾವಿನೊಳಗೆ ಕುದಿದ ರೇಷ್ಮೆ ರೈತ

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ರೇಷ್ಮೆ ಬೆಳೆಗಾರರ ಜೀವ ಸುಡುತ್ತಿದೆ..!

Vijaya Karnataka 4 Nov 2018, 4:04 pm
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ರೇಷ್ಮೆ ಬೆಳೆಗಾರರ ಜೀವ ಸುಡುತ್ತಿದೆ..!
Vijaya Karnataka Web the silk farmer buried inside the polls
‘ಚುನಾವಣೆ’ಯ ಕಾವಿನೊಳಗೆ ಕುದಿದ ರೇಷ್ಮೆ ರೈತ


ಏಷ್ಯಾದ ಅತಿ ದೊಡ್ಡದಾದ ರಾಮನಗರ ರೇಷ್ಮೆ ಮಾರುಕಟ್ಟೆಗೆ ಚುನಾವಣೆ ಹಿನ್ನೆಲೆಯಲ್ಲಿ ಬೀಗ ಜಡಿದಿದ್ದು, ರೇಷ್ಮೆ ಬೆಳೆಗಾರರ ಬದುಕು ಬೀದಿಗೆ ಬಂದಿದೆ.

ಯಾವುದೇ ಮುನ್ಸೂಚನೆ ಇಲ್ಲದೆ, ಏಕಾಏಕಿ ಮಾರುಕಟ್ಟೆ ವ್ಯವಹಾರ ಸ್ಥಗಿತಗೊಳಿಸಿದ್ದರಿಂದ ಬೇರೆ ರಾಜ್ಯಗಳಿಂದ ಮಾರುಗಟ್ಟೆಗೆ ಬಂದಿದ್ದ ಬೆಳೆಗಾರರು ಜಾಲರಿಯಲ್ಲಿ ಗೂಡು ಹಾಕಿಕೊಂಡು ಖಾಲಿ ಹೊಡೆಯುತ್ತಿದ್ದ ಹರಾಜಿನ ಮಳಿಗೆ ಕಡೆಗೆ ನೋಡುತ್ತಿದ್ದರು. ಒಂದು ದಿನಕ್ಕೆ 2 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ರೇಷ್ಮೆ ಮಾರುಕಟ್ಟೆಯು ಚುನಾವಣೆ ಕಾರಣಕ್ಕೆ ಬಣಗುಡುತ್ತಿದೆ. ಮಾಹಿತಿ ಇಲ್ಲದ ರೈತರು ಗೂಡು ಹರಾಜಿಗೆ ಇನ್ನೊಂದು ದಿನ ಕಳೆಯಬೇಕಲ್ಲ ಎಂದು ಪರಿತಪಿಸುವಂತಾಗಿದೆ.

ಹೊರಗಿನವರೇ ಹೆಚ್ಚು: ತಮಿಳು ನಾಡು, ಆಂಧ್ರ, ಮಹರಾಷ್ಟ್ರ, ಅಸ್ಸಾಂ ಸೇರಿದಂತೆ ದೇಶದ ವಿವಿಧೆಡೆಗಳಿಂದ ರಾಮನಗರದ ರೇಷ್ಮೆ ಮಾರುಕಟ್ಟೆಗೆ ರೈತರು ಆಗಮಿಸಿದ್ದರು. ಉತ್ತರ ಕರ್ನಾಟಕ ಭಾಗದ ರೈತರು ಕೂಡ ಮಾರುಕಟ್ಟೆಯಲ್ಲಿ ಗೂಡು ಹಾಕಿಕೊಂಡು ನಿದ್ದೆ ಮಾಡುತ್ತಿದ್ದರು. ಇನ್ನೊಂದೆಡೆ ಊಜಿ ಕಾಟಕ್ಕೆ ಹೈರಾಣಾಗಿದ್ದ ರೈತರು ದಿಕ್ಕು ಕಾಣದೆ ಕಂಗಲಾಗಿದ್ದರು. ಹೊರ ರಾಜ್ಯದ ರೈತರು, ಭಾಷಾ ಸಮಸ್ಯೆಯಿಂದ ಇನ್ನಷ್ಟು ಒದ್ದಾಡಿದರು. ಒಂದೆಡೆ ಮಾರುಕಟ್ಟೆಯು ಇಲ್ಲ. ಇನ್ನೊಂದೆಡೆ ಈ ಬಗ್ಗೆ ಮಾಹಿತಿ ನೀಡುವವರು ಇಲ್ಲದೇ ಅಡ್ಡಕತ್ತರಿಯಲ್ಲಿ ಸಿಲುಕಿದ್ದರು.

7 ಗಂಟೆ ನಂತರ ಅಯೋಮಯ !: ಬೆಳಗ್ಗೆ 7 ಗಂಟೆಯೊಳಗೆ ಮಾರುಕಟ್ಟೆ ಪ್ರವೇಶಿಸಿದ ಕೆಲವು ರೈತರು ರೇಷ್ಮೆ ಮಾರುಕಟ್ಟೆಗೆ ಬೀಗ ಹಾಕಿರುವುದನ್ನು ಕಂಡು ಒಂದು ಕ್ಷಣ ಬೆಚ್ಚಿ ಬಿದ್ದರು, ವಿಧಿ ಇಲ್ಲದೇ, ಕೊಳ್ಳೆಗಾರ, ಶಿಡ್ಲಘಟ್ಟ ಮಾರುಕಟ್ಟೆಗಳಿಗೆ ತರಾತುರಿಯಲ್ಲಿ ಗೂಡು ಸಾಗಿಸಿದರು. ಇತರೆ ಮಾರುಕಟ್ಟೆಗಳಲ್ಲಿ ಮಾರಾಟಗಾರರ ಸಂಖ್ಯೆ ಹೆಚ್ಚಾಗಿದ್ದರಿಂದ ರೇಷ್ಮೆ ಬೆಲೆ ಕುಸಿತವಾಗಿತ್ತು. ಗೂಡು ಹರಡಲು ಜಾಲರಿಗಳಿಲ್ಲದೆ ಒದ್ದಾಡಿದರು. 7 ಗಂಟೆ ಬಳಿಕ ಮಾರುಕಟ್ಟೆ ಪ್ರವೇಶಿಸಿದವರು ಗೂಡು ಸ್ಥಳಾಂತರಿಸಲು ಆಗದೆ, ವ್ಯವಹಾರವೇ ನಡೆಯದ ರಾಮನಗರ ಮಾರುಕಟ್ಟೆಯಲ್ಲಿಯೇ ಗೂಡುಗಳನ್ನು ಹರಡಿ ಅಸಹಾಯಕ ಪರಿಸ್ಥಿತಿಯಲ್ಲಿದ್ದರು.

ಮಧ್ಯವರ್ತಿಗಳ ಕಾಟ: ಮಾರುಕಟ್ಟೆಗೆ ರಜೆ ಘೋಷಣೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲದ ರೈತರ ಅಸಹಾಯಕತೆಯನ್ನೆ ಕೆಲ ಮದ್ಯವರ್ತಿಗಳು ಲಾಭ ಮಾಡಿಕೊಂಡಿದ್ದರು. ರಾಜಾರೋಷವಾಗಿ ಮಾರುಕಟ್ಟೆಯೊಳಗೆ ಅನಧಿಕೃತ ವ್ಯವಹಾರ ನಡೆಸುವಲ್ಲಿ ನಿರತರಾಗಿದ್ದರು. 'ಉಂಡು ಹೋದ-ಕೊಂಡು ಹೋದ' ಎಂಬಂತೆ ಮಧ್ಯವರ್ತಿಗಳು ಬಹಿರಂಗ ಹರಾಜು ಮೂಲಕ ಬೇಕಾಬಿಟ್ಟಿ ಬೆಲೆಗೆ ಕೊಂಡುಕೊಳ್ಳುತ್ತಿದ್ದರು. ಬೆಳೆಗಾರರು ವಿಧಿ ಇಲ್ಲದೆ ಸಿಕ್ಕಷ್ಟೆ ಸೀರುಂಡೆ ಎಂದು ಸುಮ್ಮನಾಗುತ್ತಿದ್ದರು.ಕೆಲವರು ರಾತ್ರಿಯಿಡಿ ಮಾರುಕಟ್ಟೆಯಲ್ಲೆ ಕಳೆಯಬೇಕಾದ ಅನಿವಾರ‍್ಯತೆ ರೈತರಿಗೆ ಎದುರಾಗಿತ್ತು.

ನಾಯಿಪಾಡು: ಮಹರಾಷ್ಟ ರಾಜ್ಯದಿಂದ ಬಂದ ಹಲವು ರೈತರು ದಿಕ್ಕು ಕಾಣದೆ ಹೈರಾಣಾಗಿದ್ದರು. ಸಿಕ್ಕಷ್ಟು ಬೆಲೆಗೆ ಗೂಡು ಮಾರಾಟ ಮಾಡಲು ಆಗದೆ, ವಾಪಸ್ಸಾಗಲು ಆಗದೇ ನರಳಾಡುತ್ತಿದ್ದರು. ಸಾವಿರಾರು ಕಿ.ಮೀ ದೂರದಿಂದ ಗೂಡು ತರಲು 2 ದಿನ ಬೇಕು. ಇಲ್ಲಿಂದ ವಾಪಸ್ಸಾಗಲು ಇನ್ನೆರಡು ದಿನ ಬೇಕು. ಇದರ ಮಧ್ಯೆ 1 ದಿನ ರಜೆ ಇದ್ದರೆ ಗತಿ ಏನು ? ಎಂಬ ಆತಂಕ ಅರವನ್ನು ಕಾಡುತ್ತಿತ್ತು.

ನಮಗೆ ಚುನಾವಣೆ ಇದೆ ಎಂಬ ಬಗ್ಗೆ ಮಹಿತಿಯೇ ಇಲ್ಲ. ಬೆಳಗ್ಗೆ ಬಂದರೆ, ಮಾರುಕಟ್ಟೆ ಬಾಗಿಲು ತೆರೆದಿರಲಿಲ್ಲ. ಊರಿಗೆ ವಾಪಸ್‌ ಹೋಗಲು ಇನ್ನೆರಡು ದಿನ ಬೇಕು. ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಇನ್ನೊಂದು ದಿನ ಗೂಡು ಇಟ್ಟರೆ ತೂಕ ಕಳೆದುಕೊಳ್ಳಲಿದೆ. ಇಂದಿನ ಬೆಲೆ ನಾಳೆ ಏನಾಗುತ್ತದೊ ಭಯವಾಗುತ್ತಿದೆ.

-ದೀಪಕ್‌, ರೇಷ್ಮೆ ಬೆಳಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ